ದೆಹಲಿ ಮದ್ಯ ನೀತಿ ಹಗರಣ – ತೆಲಂಗಾಣ ಮಾಜಿ ಸಿಎಂ ಕೆಸಿಆರ್‌ ಪುತ್ರಿ ಕವಿತಾ ಅರೆಸ್ಟ್‌

Public TV
2 Min Read

ಹೈದರಾಬಾದ್‌: ದೆಹಲಿ ಮದ್ಯ ನೀತಿ (Delhi Liquor Scam) ಹಗರಣದಲ್ಲಿ ಜಾರಿ ನಿರ್ದೇಶನಾಲಯ (ED) ಬಿಆರ್‌ಎಸ್‌ ನಾಯಕಿ, ತೆಲಂಗಾಣದ ಮಾಜಿ ಮುಖ್ಯಮಂತ್ರಿ ಟಿ ಚಂದ್ರಶೇಖರ ರಾವ್‌ (K Chandrachekhar Rao) ಅವರ ಪುತ್ರಿ ಕವಿತಾ (K Kavitha) ಅವರನ್ನು ಬಂಧಿಸಿದೆ.

ಇಂದು ಕವಿತಾ ಅವರ ಹೈದರಾಬಾದ್‌ ನಿವಾಸದ ಮೇಲೆ ಇಡಿ ದಾಳಿ ನಡೆಸಿ ದಾಖಲೆ ಪರಿಶೀಲನೆ ನಡೆಸಿತ್ತು. ಈ ವೇಳೆ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದ ಇಡಿ ಅಧಿಕಾರಿಗಳು ಸಂಜೆ ವೇಳೆ ವಿಧಾನ ಪರಿಷತ್‌ ಸದಸ್ಯೆಯಾಗಿರುವ  ಕವಿತಾ ಅವರನ್ನು ಬಂಧಿಸಿದ್ದಾರೆ.  ಇದನ್ನೂ ಓದಿ: ರಾಜಕೀಯ ಪಕ್ಷಗಳಿಗೆ 1,368 ಕೋಟಿ ನೀಡಿದ ಲಾಟರಿ ಕಿಂಗ್‌ ಪಿನ್‌ ಮಾರ್ಟಿನ್‌ ಯಾರು?

ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಎಎಪಿ ನಾಯಕ ವಿಜಯ್ ನಾಯರ್ ಅವರು ಕೆಲವು ಉದ್ಯಮಿಗಳು ಮತ್ತು ರಾಜಕಾರಣಿಗಳ ನಿಯಂತ್ರಣದಲ್ಲಿರುವ ‘ದಕ್ಷಿಣ ಗುಂಪಿನಿಂದ’ 100 ಕೋಟಿ ರೂಪಾಯಿಗಳನ್ನು ಕಿಕ್‌ಬ್ಯಾಕ್ ಪಡೆದಿದ್ದಾರೆ ಎಂಬ ಆರೋಪವಿದೆ. ಕವಿತಾ ಅವರು 100 ಕೋಟಿ ರೂಪಾಯಿ ಕಿಕ್‌ಬ್ಯಾಕ್ ಪಾವತಿಸಿದ ಮದ್ಯದ ಕಾರ್ಟೆಲ್ ‘ದಿ ಸೌತ್ ಗ್ರೂಪ್’ ನ ಭಾಗವಾಗಿದ್ದರು ಎಂದು ಇಡಿ ಆರೋಪಿಸಿದೆ.

ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ(Manish Sisodia) ಅವರ ಆಪ್ತ ಸಹಾಯಕ ಈ ಪ್ರಕರಣದಲ್ಲಿ ಆರೋಪಿಯಾಗಿರುವ ಅಮಿತ್ ಅರೋರಾ 10ಕ್ಕೂ ಹೆಚ್ಚು ಬಾರಿ ಕವಿತಾಗೆ ದೂರವಾಣಿ ಕರೆ ಮಾಡಿದ್ದು, ಒಟ್ಟು 35 ಜನರನ್ನು ಸಂಪರ್ಕಿಸಲು ಅವರು ಪ್ರಯತ್ನಿಸಿದ್ದಾರೆ ಎಂದು ಇಡಿ ಹೇಳಿತ್ತು. ಇದನ್ನೂ ಓದಿ: ಮಂಡ್ಯದಿಂದ ಮತ್ತೆ ನಿಖಿಲ್‌ ಸ್ಪರ್ಧೆ? – ಮಾರ್ಚ್‌ 25ಕ್ಕೆ ಘೋಷಣೆ ಸಾಧ್ಯತೆ

ಕೆ.ಕವಿತಾ ಅಮಿತ್ ಅರೋರಾ ಅವರೊಂದಿಗೆ ಸಂವಹನ ನಡೆಸಲು ಫ್ಯಾನ್ಸಿ ನಂಬರ್‌ಗಳನ್ನು ಬಳಸಿದ್ದಾರೆ. ಪೈಕಿ ಎರಡು ಸಿಮ್‌ಗಳನ್ನು ಹೆಚ್ಚು ಬಳಸಿದ್ದು, ಈ ಬಗ್ಗೆ ಸಂಭಾಷಣೆ ನಡೆಸಲು ಅವರು ಹತ್ತಕ್ಕೂ ಹೆಚ್ಚು ಬಾರಿ IMEI ಅನ್ನು ಬದಲಾಯಿಸಿದ್ದಾರೆ. ತನಿಖೆ ವೇಳೆ ಫೋನ್‌ಗಳನ್ನು ಪರಿಶೀಲಿಸಿದಾಗ ಫೋನ್‌ಗಳಲ್ಲಿ ಡೇಟಾವನ್ನು ಅಳಿಸಿ ಹಾಕಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಗಿತ್ತು.

ಇಡಿ ಪ್ರಕರಣದ ಚಾರ್ಜ್‌ಶೀಟ್‌ನಲ್ಲಿ ಕೆ ಕವಿತಾ ಅವರ ಹೆಸರಿಸಿದೆ. ಅವರು ಮದ್ಯದ ಕಂಪನಿಯಾದ ಇಂಡೋಸ್ಪಿರಿಟ್ಸ್‌ನಲ್ಲಿ ಶೇ.65 ರಷ್ಟು ಪಾಲನ್ನು ಹೊಂದಿದ್ದಾರೆ ಎಂದು ಆರೋಪಿಸಲಾಗಿದೆ.

ಏನಿದು ಮದ್ಯ ಹಗರಣ?
ಪ್ರಕರಣದ ಆರೋಪಿಯಾಗಿರುವ ಮನೀಶ್ ಸಿಸೋಡಿಯಾ ಹಾಗೂ ಇತರರು 2021-22 ರ ಅಬಕಾರಿ ನೀತಿಗೆ ಸಂಬಂಧಿಸಿದಂತೆ ಪ್ರಾಧಿಕಾರದ ಅನುಮೋದನೆಯಿಲ್ಲದೇ ಪರವಾನಗಿದಾರರಿಗೆ ಅನುಕೂಲವಾಗುವಂತಹ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ನೀತಿಯಿಂದ ಲಾಭ ಪಡೆದ ಮದ್ಯ ವ್ಯಾಪಾರಿಗಳು ಸಿಸೋಡಿಯಾ ಆಪ್ತ, ಸಹಚರರಿಗೆ ಕೋಟ್ಯಂತರ ರೂ. ಪಾವತಿ ಮಾಡಿದ್ದಾರೆ ಎಂಬ ಆರೋಪ ಬಂದಿದೆ.

Share This Article