ಪ್ರಶ್ನೆ ಸರಿಯಿದೆ, ಆದ್ರೆ ವಿಳಾಸ ತಪ್ಪಿದೆ: ತೇಜಸ್ವಿನಿ ಅನಂತ್ ಕುಮಾರ್

Public TV
2 Min Read

– ದೇಶ ಮೊದಲು, ನಂತರ ಪಕ್ಷ
– ಪಕ್ಷದ ನಾಯಕರ ತೀರ್ಮಾನಕ್ಕೆ ಬದ್ಧ

ಬೆಂಗಳೂರು: ಅನಂತ್ ಕುಮಾರ್ ಪತ್ನಿ ತೇಜಸ್ವಿನಿ ಅವರಿಗೆ ಲೋಕಸಭಾ ಚುನಾವಣೆಗೆ ಕೊನೆಯ ಕ್ಷಣದಲ್ಲಿ ಟಿಕೆಟ್ ತಪ್ಪಿದ್ದು, ಬಿಜೆಪಿಯ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯಗೆ ಸಿಕ್ಕಿದೆ. ಈ ಬಗ್ಗೆ ತೇಜಸ್ವಿನಿ ಅನಂತ್ ಕುಮಾರ್ ಅವರು ಪ್ರತಿಕ್ರಿಯೆ ಕೊಟ್ಟಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ತೇಜಸ್ವಿನಿ ಅನಂತ್ ಕುಮಾರ್, ನಮ್ಮ ಪಕ್ಷದ ಸಿದ್ಧಾಂತದ ಮೇಲೆ ನಾವು ನಿಂತಿದ್ದೇವೆ. ದೇಶ ಮೊದಲು, ಪಕ್ಷ ನಂತರ ಹಾಗೂ ನಮ್ಮ ಸ್ವಂತ ಹಿತಾಶಕ್ತಿಗಳು ಕೊನೆಯಲ್ಲಿ ಎಂದು ನಾನು ಮೊದಲಿನಿಂದಲೂ ನಮ್ಮ ಕಾರ್ಯಕರ್ತರ ಬಳಿ ಹೇಳಿಕೊಂಡು ಬಂದಿದ್ದೇನೆ. ನಾವು ಮದುವೆಯಾದಗಿನಿಂದ ಪಕ್ಷ ಕಟ್ಟುವ ಕೆಲಸದಲ್ಲಿ ನಿರತಗಳಾಗಿದ್ದೇನೆ ಎಂದು ತಿಳಿಸಿದರು.

ಒಂದೊಂದು ಸಲ ನಮಗೆ ಅಸಮಾಧಾನ ಆಗಿರುತ್ತದೆ. ಆದರೆ ಈಗ ನಮ್ಮ ಪ್ರಭುದ್ಧತೆಯನ್ನು ತೋರಿಸುವ ಸಮಯ ಬಂದಿದೆ. ನಾವು ಅಂದುಕೊಂಡಿದ್ದು ಆಗಿಲ್ಲ ಎಂದಾಗ ಸಹಜವಾಗಿ ಎಲ್ಲರಲ್ಲೂ ಯಾಕೆ ಆಗಿಲ್ಲ ಎಂಬ ಪ್ರಶ್ನೆ ಬರುತ್ತದೆ. ಆದರೆ ಅದಕ್ಕಿಂತ ಪಕ್ಷದ ಮುಖಂಡರ ತೀರ್ಮಾನವೇ ದೊಡ್ಡದಾಗಿದೆ. ಹೀಗಾಗಿ ಮೊದಲು ದೇಶ ಸಿದ್ಧಾಂತಕ್ಕೆ ಬದ್ಧರಾಗಿರುತ್ತೇವೆ. ನಮ್ಮ ಕಾರ್ಯಕರ್ತರು ಕೂಡ ಈ ಸಿದ್ಧಾಂತಕ್ಕೆ ಬದ್ಧರಾಗಿದ್ದಾರೆ ಎಂದು ತೇಜಸ್ವಿನಿ ಅವರು ಹೇಳಿದರು.

ಮತ್ತೊಮ್ಮೆ ಪ್ರಧಾನಿ ಮೋದಿ ಅವರು ಆಯ್ಕೆಯಾಗಬೇಕು. ಹೀಗಾಗಿ ಬೇರೆ ಬೇರೆ ಯೋಚನೆಗಳನ್ನು ಬಿಟ್ಟು ನಾವೆಲ್ಲರೂ ಒಟ್ಟಿಗೆ ಕೆಲಸ ಮಾಡೋಣ. ಯಾರ ವಿರುದ್ಧವೂ ಘೋಷಣೆ ಕೂಗುವುದು ಬೇಡ. ಅಳುವುದಾಗಲಿ, ಬೇಸರವಾಗಲಿ ಅದನ್ನು ಸಾರ್ವಜನಿಕವಾಗಿ ತೋರಿಸುವುದು ನಮ್ಮ ಪಕ್ಷದ ಪದ್ಧತಿಯಲ್ಲ. ನಮ್ಮ ಪಕ್ಷದ ನಾಯಕರು, ಮುಖಂಡರು ಇದೇ ಸಿದ್ಧಾಂತವನ್ನು ಅನುಸರಿಸಿಕೊಂಡು ಬಂದಿದ್ದಾರೆ ಎಂದರು.

ಮಾನ್ಯ ಅನಂತ್ ಕುಮಾರ್ ಅವರು ತಮ್ಮ 16ನೇ ವಯಸ್ಸಿನಿಂದ ದೇಶ ಸೇವೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು. ಅವರು ಯಾವ ರೀತಿ ಕೆಲಸ ಮಾಡಿದ್ದಾರೆ ಎನ್ನುವುದು ಗೊತ್ತಿದೆ. ಹೀಗಾಗಿ ಅವರು ಯಾವ ರೀತಿ ಕೆಲಸ ಮಾಡಿದ್ದಾರೋ, ಅದೇ ರೀತಿ ನಾವು ಪ್ರಭುಬದ್ಧವಾಗಿ ಕೆಲಸ ಮಾಡಿದರೆ ಅದು ನಿಜವಾಗಿ ನಾವು ಅನಂತ್ ಕುಮಾರ್ ಅವರಿಗೆ ಅರ್ಪಿಸುವ ಶ್ರದ್ಧಾಂಜಲಿಯಾಗುತ್ತದೆ. ಅದು ಬಿಟ್ಟು ಸಣ್ಣ-ಸಣ್ಣ ವಿಚಾರಗಳಿಗೆ ಈ ರೀತಿ ಘೋಷಣೆ ಕೂಗಬಾರದು ಎಂದು ಹೇಳಿದರು.

ಕಡೆಯ ಕ್ಷಣದಲ್ಲಿ ಟಿಕೆಟ್ ತಪ್ಪಿದ ವಿಚಾರಕ್ಕೆ ಪ್ರತಿಕ್ರಿಯಿಸಿ, ನಿಮ್ಮ ಪ್ರಶ್ನೆ ಸರಿಯಿದೆ. ಆದರೆ ವಿಳಾಸ ತಪ್ಪಿದೆ ಎಂದು ಅನಂತ್ ಕುಮಾರ್ ಯಾವಾಗಲೂ ಹೇಳುತ್ತಿದ್ದರು. ಅದೇ ರೀತಿ ನಾನು ಪಕ್ಷದ ಚೌಕಟ್ಟಿನಿಲ್ಲಿದ್ದೇನೆ, ನಿಮ್ಮ ಎಲ್ಲ ಪ್ರಶ್ನೆಗಳಿಗೂ ಉತ್ತರ ಕೊಡಲು ಸಾಧ್ಯವಿಲ್ಲ. ನಾನು ಈಗಾಗಲೇ ಪಕ್ಷದ ಜೊತೆ ಇರುತ್ತೇವೆ ಎಂದು ಹೇಳಿದ್ದೇನೆ. ಹೀಗಾಗಿ ನಾನು ಪಕ್ಷೇತರವಾಗಿ ನಿಲ್ಲಲ್ಲ. ಕುಟುಂಬದ ರಾಜಕಾರಣದಲ್ಲಿ ನಂಬಿಕೆ ಇಲ್ಲ ಎಂದು ಅನಂತ್ ಕುಮಾರ್ ಹೇಳಿದ್ದರು. ಈಗ ಅವರ ಜವಬ್ದಾರಿಯನ್ನು ಉಳಿಸಿಕೊಂಡು ಹೋಗುತ್ತಿದ್ದೇನೆ. ಮೋದಿ ಮತ್ತೊಮ್ಮೆ ಎಂದು ಮೊದಲೇ ಹೇಳಿದ್ದೇವೆ ಅವರಿಗಾಗಿ ಪ್ರಚಾರ ಮಾಡುತ್ತೇವೆ ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *