ಲೈಬ್ರರಿ ಆವರಣದಲ್ಲಿ ಕಚೇರಿ- ಸಂಸದ ತೇಜಸ್ವಿ ಸೂರ್ಯ ಸ್ಪಷ್ಟನೆ

Public TV
2 Min Read

ಬೆಂಗಳೂರು: ಜಯನಗರ ಸಾರ್ವಜನಿಕ ಲೈಬ್ರರಿ ಆವರಣದಲ್ಲಿ ಕಚೇರಿ ತೆರೆಯುತ್ತಿದ್ದಾರೆ ಎಂಬ ಆರೋಪಕ್ಕೆ ಸಂಸದ ತೇಜಸ್ವಿ ಸೂರ್ಯ ಸ್ಪಷ್ಟನೆ ನೀಡಿದ್ದಾರೆ.

ಈ ಕುರಿತು ಜಯನಗರ ಶೈಕ್ಷಣಿಕ ಸಮಿತಿಯವರು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ ಹೇಳಿಕೆಯನ್ನು ಟ್ವೀಟ್ ಮಾಡಿ ನಿನ್ನೆಯಿಂದ ಸಂಸದರ ಕಚೇಯಿಂದಾಗಿ ಬಡ ಮಕ್ಕಳ ಟ್ಯೂಷನ್ ಸೆಂಟರ್ ಬಂದಾಗುತ್ತಿದೆ ಎಂದು ಕಾಂಗ್ರೆಸ್‍ನ ಸುಳ್ಳು ಸುದ್ದಿ ಕಾರ್ಖಾನೆ ಅಪಪ್ರಚಾರ ಮಾಡುತ್ತಿದೆ. ಇದರ ಬಗ್ಗೆ ಟ್ಯೂಷನ್ ಸೆಂಟರ್ ನಡೆಸುವ ಶೈಕ್ಷಣಿಕ ಸಮಿತಿಯವರೇ ಸತ್ಯವನ್ನು ಜನರ ಮುಂದಿಟ್ಟಿದ್ದಾರೆ ಎಂದು ಬರೆದುಕೊಂಡಿದ್ದಾರೆ.

ಮಾಧ್ಯಮ ಪ್ರಕಟಣೆಯಲ್ಲಿ ಏನಿದೆ?
ಜಯನಗರ ಶೈಕ್ಷಣಿಕ ಸಮಿತಿಯು ಕಳೆದ ಹಲವಾರು ವರ್ಷಗಳಿಂದ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಟ್ಯೂಷನ್ ತರಗತಿಗಳನ್ನು ನಡೆಸಿಕೊಂಡು ಬರುತ್ತಿದೆ. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ತಮ್ಮ ಕಚೇರಿಯನ್ನು ಈ ಕಟ್ಟಡದಲ್ಲಿ ಮಾಡುವುದರಿಂದ ಟ್ಯೂಷನ್ ತರಗತಿಗಳಿಗೆ ತೊಂದರೆ ಉಂಟಾಗುತ್ತದೆ ಎಂಬ ಸುದ್ದಿ ಪ್ರಕಟವಾಗಿರುವುದು ನಮ್ಮ ಗಮನಕ್ಕೆ ಬಂದಿದೆ. ಆದರೆ ಸಂಸದರ ಕಚೇರಿಯಿಂದ ಟ್ಯೂಷನ್ ತರಗತಿಗಳಿಗೆ ಹಾಗೂ ಸಾರ್ವಜನಿಕ ಗ್ರಂಥಾಲಯಕ್ಕೆ ಯಾವುದೇ ತೊಂದರೆ ಆಗುವುದಿಲ್ಲ.

ಸಂಸದ ಕಚೇರಿ ಇಲ್ಲಿ ನಿರ್ಮಾಣವಾಗುವುದರಿಂದ ಶೈಕ್ಷಣಿಕ ಸಮಿತಿಯ ಕಾರ್ಯಚಟುವಟಿಕೆಗೆ ಮತ್ತಷ್ಟು ಪೂರಕವಾಗುತ್ತದೆ. ಆಧಾರ ರಹಿತ ಸುಳ್ಳು ಸುದ್ದಿಗಳಿಗೆ ಸಾರ್ವಜನಿಕರು ಮತ್ತು ಮಾಧ್ಯಮದವರು ಕಿವಿಕೊಡಬಾರದು ಎಂದು ಪತ್ರದ ಮೂಲಕ ಮನವಿ ಮಾಡಿಕೊಳ್ಳಲಾಗಿದೆ.

ಆರೋಪ ಏನು?:
ಸಿಎ, ಐಎಎಸ್, ಐಪಿಎಸ್ ಅಧಿಕಾರಿಗಳಾಗಲು ಜಯನಗರ ಶೈಕ್ಷಣಿಕ ಸಮಿತಿಯ ಲೈಬ್ರರಿಯಲ್ಲಿ ವಿದ್ಯಾರ್ಥಿಗಳು ನಿತ್ಯ ಓದುತ್ತಾರೆ. ಸಂಸದರ ಕಚೇರಿ ಇಲ್ಲಿ ತೆರೆದರೆ ಪಕ್ಷದ ಕಾರ್ಯಕರ್ತರು, ಸಾರ್ವಜನಿಕರು ಸಂಸದರನ್ನು ನೋಡಲು ನಿತ್ಯ ಬರುತ್ತಾರೆ. ಈ ವೇಳೆ ವಾಹನಗಳ ಸಂಖ್ಯೆ ಹೆಚ್ಚಾಗುತ್ತದೆ. ಅಷ್ಟೇ ಅಲ್ಲದೆ ಮುಖ್ಯ ರಸ್ತೆ ಆಗಿರುವುದರಿಂದ ಪಾರ್ಕಿಂಗ್ ಸಮಸ್ಯೆಯೂ ಹೆಚ್ಚಾಗಲಿದೆ. ಇದರಿಂದ ಲೈಬ್ರರಿಗೆ ಬರುವ ವಿದ್ಯಾರ್ಥಿಗಳಿಗೆ ಓದಲು ಸಮಸ್ಯೆಯಾಗುತ್ತದೆ. ಈ ವಿಚಾರ ತಿಳಿದಿದ್ದರೂ ತೇಜಸ್ವಿ ಸೂರ್ಯ ಅವರು ಇಲ್ಲೇ ಕಚೇರಿ ಮಾಡುತ್ತಿರುವುದು ಎಷ್ಟು ಸರಿ ಎಂದು ವಿದ್ಯಾರ್ಥಿಗಳು ಪ್ರಶ್ನೆ ಮಾಡಿದ್ದರು.

ಅಷ್ಟೇ ಅಲ್ಲದೇ ಈ ಸ್ಥಳವನ್ನು ಕೆಲ ಸಂಘ ಸಂಸ್ಥೆಗಳು ಬಡ ಮಕ್ಕಳಿಗೆ ಟ್ಯೂಷನ್ ನೀಡಲು ಬಳಸುತ್ತಿದ್ದವು. ಈ ಎಲ್ಲಾ ಮಾಹಿತಿ ಸಂಸದರಿಗೆ ಗೊತ್ತಾಗಲಿಲ್ಲವೇ ಎಂಬ ಪ್ರಶ್ನೆಯನ್ನು ಸಾರ್ವಜನಿಕರು ಎತ್ತಿದ್ದರು.

ಈ ಕುರಿತು ಶುಕ್ರವಾರ ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ್ದ ಸಂಸದ ತೇಜಸ್ವಿ ಸೂರ್ಯ ಅವರು, ಸಂಸದರ ಕಚೇರಿ ನಿರ್ಮಾಣವಾಗುತ್ತಿರುವುದು ಜಯನಗರದ ಸಾರ್ವಜನಿಕ ಲೈಬ್ರರಿ ಇರುವ ಕಟ್ಟದ ಗ್ರೌಂಡ್ ಫ್ಲೋರಿನಲ್ಲಿ. ಈ ಕಟ್ಟಡ ಮೊದಲ ಫ್ಲೋರಿನಲ್ಲಿ ಲೈಬ್ರರಿ ಇದೆ. ಅದರ ಕೆಳಗೆ ಇರುವ ಟ್ರಸ್ಟ್ ಕಚೇರಿಯನ್ನು ಸಂಸದರ ಕಚೇರಿಯಾಗಿ ಮಾಡುತ್ತಿದ್ದೇವೆ. ಈ ವಿಚಾರದಲ್ಲಿ ವಿದ್ಯಾರ್ಥಿಗಳು ನನ್ನ ಪರವಿದ್ದಾರೆ. ಕೆಲವರು ಇದನ್ನೇ ದುರುಪಯೋಗ ಪಡಿಸಿಕೊಂಡು ಅಪಪ್ರಚಾರ ಮಾಡುತ್ತಿದ್ದಾರೆ ಅಷ್ಟೇ. ಕೆಲವರು ಮೊದಲು ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದ ಟ್ರಸ್ಟನ್ನು ಅಲ್ಲಿಂದ ಖಾಲಿ ಮಾಡಿಸಿ ಬೇರೆಯವರಿಗೆ ನೀಡಲು ತೀರ್ಮಾನ ಮಾಡಿದ್ದರು. ಸದ್ಯ ಬಿಬಿಎಂಪಿ ಸಂಸದರ ಕಚೇರಿಗೆ ನೀಡಿದೆ ಎಂದು ಹೇಳಿದ್ದರು.

Share This Article
Leave a Comment

Leave a Reply

Your email address will not be published. Required fields are marked *