– ದೇವಸ್ಥಾನದಂತೆ ಮಸೀದಿ, ಚರ್ಚ್‍ಗಳನ್ನು ಮುಜರಾಯಿಗೆ ಪಡೆಯುವ ಧೈರ್ಯ ಇದೆಯೇ?
ಚಿಕ್ಕಮಗಳೂರು: ಕಾಗಕ್ಕ, ಗುಬ್ಬಕ್ಕ ಕತೆ ಬಿಟ್ಟು ಈಗಲಾದ್ರೂ ಸೀರಿಯಸ್ ರಾಜಕೀಯ ಮಾಡ್ರಿ ಎಂದು ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ವಿರುದ್ಧ ಸಂಸದ ತೇಜಸ್ವಿ ಸೂರ್ಯ (Tejasvi Surya) ವಾಗ್ದಾಳಿ ನಡೆಸಿದ್ದಾರೆ.
ಚಿಕ್ಕಮಗಳೂರಿನಲ್ಲಿ (Chikkamagaluru) ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವೇಳೆ, ತಮ್ಮ ವಿರುದ್ಧ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದ ಪ್ರಿಯಾಂಕ್ ಖರ್ಗೆ ಅವರಿಗೆ ತಿರುಗೇಟು ನೀಡಿದರು. ಈಗಾದ್ರೂ ಸ್ವಲ್ಪ ಸೀರಿಯಸ್ ವಿಚಾರಗಳ ಕುರಿತು ರಾಜಕಾರಣ ಮಾಡಿ. ಕಾಗಕ್ಕ-ಗುಬ್ಬಕ್ಕನ ಕತೆ ಇಟ್ಕೊಂಡು ರಾಜಕೀಯ ಮಾಡಿದರೆ, ನಿಮ್ಮ ಸ್ಥಾನಕ್ಕೆ ಘನತೆ ಬರೋದಿಲ್ಲ. ವಿರೋಧ ಮಾಡುವುದಾದರೆ ಸೀರಿಯಸ್ ವಿಷಯಗಳನ್ನು ಚರ್ಚೆ ಮಾಡೋಣ. ರಾಜ್ಯದ ಅಭಿವೃದ್ಧಿ ಬಗ್ಗೆ ಮಾತನಾಡೋಣ. ನಿಮ್ಮ ಐಟಿ-ಬಿಟಿ ಇಲಾಖೆಯಲ್ಲಿ ಆಗಬೇಕಿರೋ ಕೆಲಸಗಳ ಬಗ್ಗೆ ಚರ್ಚೆ ಮಾಡೋಣ ಎಂದಿದ್ದಾರೆ. ಇದನ್ನೂ ಓದಿ: ಡಿಕೆಶಿಗೆ ಶಾಸಕರ ಬೆಂಬಲ ಇಲ್ಲ | ಸಿಎಂ ಶಾಲಲ್ಲಿ ಅಲ್ಲ ಡೈರೆಕ್ಟಾಗಿ ಹೊಡೆದಿದ್ದಾರೆ: ಸಿ.ಟಿ ರವಿ
ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನವನ್ನು ಮುಜರಾಯಿ ಇಲಾಖೆ ವಶಕ್ಕೆ ಪಡೆಯುವ ವಿಚಾರವಾಗಿ, ಭಕ್ತರು ಕೋಟ್ಯಂತರ ರೂ. ಹಣ ಹಾಕುವ ದೇವಾಲಯಗಳ ಮೇಲೆ ಕಣ್ಣಿಟ್ಟು, ವಶಕ್ಕೆ ಪಡೆಯುತ್ತಿರೋದು ಅಕ್ಷಮ್ಯ. ಸರ್ಕಾರದ ನಡೆಯನ್ನು ಕೋರ್ಟಿನಲ್ಲಿ ಪ್ರಶ್ನಿಸಿ ಹೋರಾಟ ಮಾಡುತ್ತೇವೆ. ಇವರಿಗೆ ಇವರ ಸರ್ಕಾರ, ಇಲಾಖೆಗಳನ್ನೇ ನಡೆಸಲು ಆಗುತ್ತಿಲ್ಲ, ಹಗರಣಗಳು ನಡೆಯುತ್ತಿವೆ. ಇದೇ ರೀತಿ ಆರೋಪವಿರುವ ಮಸೀದಿ-ಚರ್ಚ್‍ಗಳನ್ನ ತೆಗೆದುಕೊಳ್ಳುವ ಧೈರ್ಯ ಇದೆಯೇ ಎಂದು ಪ್ರಶ್ನಿಸಿದ್ದಾರೆ.
ಹಿಂದೂ ದೇವಾಲಯಗಳು ಹಿಂದೂಗಳ ಆಸ್ತಿ, ನಿಮ್ಮ ಸರ್ಕಾರದ ಆಸ್ತಿ ಅಲ್ಲ. ನಿಮ್ಮ ಸರ್ಕಾರದಲ್ಲಿ ನಿಮಗೆ ಭ್ರಷ್ಟಾಚಾರ ನಿಲ್ಲಿಸಲು ಆಗುತ್ತಿಲ್ಲ. ಯಾವ ನಂಬಿಕೆಯಿಂದ ನಿಮ್ಮ ಕೈಗೆ ನಮ್ಮ ದೇವಸ್ಥಾನ ಕೊಡುವುದು? ಸರ್ಕಾರವೇನು ಸಾಚಾನ, ಆರೋಪ ಭ್ರಷ್ಟಾಚಾರ ಇಲ್ಲದೇ ನಡೆಸಿಕೊಂಡು ಹೋಗುತ್ತಿದ್ದಾರಾ? ಇವರ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ, ಪಕ್ಕದ ತಟ್ಟೆಯನ್ನು ನೋಡುತ್ತಿದ್ದಾರೆ. ದೇವಸ್ಥಾನದ ತಟ್ಟೆಗೆ ಆಸೆ ಇಟ್ಕೊಂಡು ನೋಡ್ತಿದ್ದಾರೆ. ನಾಳೆಯೇ ಅಲ್ಲಿ ಆರತಿಗೊಂದು, ದೃಷ್ಟಿಗೊಂದು ರೇಟು ಅಂತ ಬೋರ್ಡ್ ಹಾಕ್ತಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಸುಡುಗಾಡಿಗೆ ಹೋಗಿ ತೆಂಗಿನಕಾಯಿ ಒಡೆದರೂ GST ಅನ್ವಯಿಸುತ್ತೆ: ಸಂತೋಷ್ ಲಾಡ್ ಲೇವಡಿ