ನಾನು ಬ್ಲ್ಯಾಕ್ ಬೆಲ್ಟ್ ಹೊಂದಿದ್ರೆ ನೀವು ಇಂದು ಶ್ರೀಮಂತರಾಗಬಹುದಾಗಿತ್ತು- ಕೆಬಿಸಿ ಸ್ಪರ್ಧಿಗೆ ಸೂರ್ಯ ಟ್ವೀಟ್

Public TV
2 Min Read

ಬೆಂಗಳೂರು: ಬಿಜೆಪಿಯ ಯುವ ನಾಯಕ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರು ‘ಕೌನ್ ಬನೇಗಾ ಕರೋಡ್‌ಪತಿ ಶೋ’ನ ಫೋಟೋವನ್ನು ಟ್ವೀಟ್ ಮಾಡಿದ್ದು, ತಮ್ಮ ಹೆಸರನ್ನು ಆಯ್ಕೆ ಮಾಡಿ ತಪ್ಪು ಉತ್ತರ ನೀಡಿದ ವ್ಯಕ್ತಿಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

ಖಾಸಗಿ ವಾಹಿನಿಯ ಜನಪ್ರಿಯ ಶೋ ಆಗಿರುವ ‘ಕೌನ್ ಬನೇಗಾ ಕರೋಡ್‌ಪತಿ’ (ಕೆಬಿಸಿ) ಕಾರ್ಯಕ್ರಮದ ಸ್ಪರ್ಧಿಗೆ ೧೭ನೇ ಲೋಕಸಭಾ ಸದನದ ಸದಸ್ಯರ ಕುರಿತ ಪ್ರಶ್ನೆಯನ್ನು ಕೇಳಲಾಗಿತ್ತು. ಆದರೆ ಈ ಪ್ರಶ್ನೆಗೆ ಸ್ಪರ್ಧಿ, ತೇಜಸ್ವಿ ಸೂರ್ಯ ಅವರ ಹೆಸರನ್ನು ಆಯ್ಕೆ ಮಾಡಿ ಸ್ಪರ್ಧಿ ತಪ್ಪು ಉತ್ತರ ನೀಡಿದ್ದರು.

ಉತ್ತರ ಪ್ರದೇಶ ಮಥುರಾದಿಂದ ಶೋಗೆ ಆಗಮಿಸಿದ್ದ ನರೇಂದ್ರ ಕುಮಾರ್ ಅವರು ೧೧ನೇ ಆವೃತ್ತಿಯ ಕೆಬಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ೧೦ನೇ ಪ್ರಶ್ನೆವರೆಗೂ ಸರಿ ಉತ್ತರಿಸಿದ್ದ ನರೇಂದ್ರ ಕುಮಾರ್ ೩.೨೦ ಲಕ್ಷ ರೂ.ಗಳನ್ನು ಗೆದ್ದಿದ್ದರು. ಆದರೆ ೧೧ನೇ ಪ್ರಶ್ನೆಗೆ ತಪ್ಪು ಉತ್ತರ ನೀಡಿ ೬.೪೦ ಲಕ್ಷ ರೂ. ಗೆಲ್ಲುವ ಅವಕಾಶದಿಂದ ವಂಚಿತರಾಗಿ ಕಾರ್ಯಕ್ರಮದಿಂದ ನಿರ್ಗಮಿಸಿದ್ದರು.

೧೭ನೇ ಲೋಕಸಭಾ ಸದನದ ಸದಸ್ಯರಾದ ಕೆಳಗಿನ ೪ ನಾಲ್ಕು ಸದಸ್ಯರಲ್ಲಿ ಯಾರಿಗೆ ಐಕಿಡೋ (ಮಾರ್ಷಲ್ ಆರ್ಟ್ಸ್)ದಲ್ಲಿ ಬ್ಲ್ಯಾಕ್ ಬೆಲ್ಟ್ ಲಭಿಸಿದೆ ಎಂಬ ಪ್ರಶ್ನೆಯನ್ನು ಕೇಳಲಾಗಿತ್ತು. ಈ ಪ್ರಶ್ನೆಗೆ ಎ) ಗೌತಮ್ ಗಂಭೀರ್, ಬಿ) ರಾಹುಲ್ ಗಾಂಧಿ, ಸಿ) ಅನುರಾಗ್ ಠಾಕೂರ್, ಡಿ) ತೇಜಸ್ವಿ ಸೂರ್ಯ ಆಯ್ಕೆಗಳನ್ನು ನೀಡಲಾಗಿತ್ತು. ಈ ಪ್ರಶ್ನೆಗೆ ನರೇಂದ್ರ ಅವರು ತೇಜಸ್ವಿ ಸೂರ್ಯ ಅವರ ಹೆಸರನ್ನು ಆಯ್ಕೆ ಮಾಡಿದ್ದರು. ಇದನ್ನು ಓದಿ: ಜಪಾನಿನ ಐಕಿಡೋ ಮಾರ್ಷಲ್ ಆರ್ಟ್ ನಲ್ಲಿ ರಾಹುಲ್ ಗಾಂಧಿ ‘ಬ್ಲ್ಯಾಕ್ ಬೆಲ್ಟ್’-ಫೋಟೋ ನೋಡಿ

ಕಾರ್ಯಕ್ರಮದ ಈ ಪ್ರಶ್ನೆಯನ್ನು ಗಮನಿಸಿದ ತೇಜಸ್ವಿ ಸೂರ್ಯ ಅವರು ಫೋಟೋವನ್ನು ಟ್ವೀಟ್ ಮಾಡಿ ಬೇಸರ ವ್ಯಕ್ತಪಡಿಸಿದ್ದಾರೆ. ನಾನು ನಿಜಕ್ಕೂ ಐಕಿಡೊದಲ್ಲಿ ಬ್ಲ್ಯಾಕ್ ಬೆಲ್ಟ್ ಹೊಂದಿದ್ದರೆ ಇಂದು ನೀವು ಶ್ರೀಮಂತ ವ್ಯಕ್ತಿಯಾಗುತ್ತಿದ್ದೀರಿ ಎಂದು ತಿಳಿಸಿದ್ದಾರೆ.

ಅಂದಹಾಗೇ ೨೦೧೭ ರಲ್ಲಿ ರಾಹುಲ್ ಗಾಂಧಿ ಅವರು ಐಕಿಡೊ ತರಬೇತಿ ಪಡೆಯುತ್ತಿದ್ದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು. ಸದ್ಯ ತೇಜಸ್ವಿ ಅವರ ಟ್ವೀಟ್‌ಗೆ ಭಾರೀ ಪ್ರತಿಕ್ರಿಯೆ ಲಭಿಸಿದ್ದು, ಇದುವರೆಗೂ ೩೧ ಸಾವಿರಕ್ಕೂ ಹೆಚ್ಚು ಮಂದಿ ಟ್ವೀಟ್ ಅನ್ನು ಲೈಕ್ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *