ಬೆಂಗಳೂರಿನಿಂದ ಕೋಲಾರದವರೆಗೆ ಸೈಕಲ್ ರ್‍ಯಾಲಿ ಕೈಗೊಂಡ ತೇಜಸ್ವಿ ಸೂರ್ಯ

Public TV
2 Min Read

ಬೆಂಗಳೂರು: ಸ್ವಾತಂತ್ರ್ಯೋತ್ಸವದ 75ನೇ ವರ್ಷಾಚರಣೆ ಹಿನ್ನೆಲೆ ಭಾನುವಾರದಂದು ಇತರ ಸೈಕ್ಲಿಸ್ಟ್‌ಗಳೊಂದಿಗೆ ಸೈಕಲ್ ಟು ಫ್ರೀಡಂ ಅಭಿಯಾನದ ಅಂಗವಾಗಿ ಬೆಂಗಳೂರಿನ ವಿಧಾನ ಸೌಧದಿಂದ ಕೋಲಾರದವರೆಗೆ 75ಕಿ.ಮೀ ಸೈಕಲ್ ರ್‍ಯಾಲಿ ನಡೆಸುವ ಮೂಲಕ ಸಂಸದ ತೇಜಸ್ವಿ ಸೂರ್ಯ ಗಮನ ಸೆಳೆದಿದ್ದಾರೆ.

Tejasvi Surya

ಬೆಳಗ್ಗೆ 7 ಗಂಟೆಗೆ ವಿಧಾನಸೌಧದ ಮುಂಭಾಗದಲ್ಲಿ ಅಭಿಯಾನಕ್ಕೆ ಚಾಲನೆ ನೀಡಿದ ನಂತರ 5 ಘಂಟೆಗಳ ಅವಧಿಯಲ್ಲಿ ನಗರದ 450ಕ್ಕೂ ಅಧಿಕ ಉತ್ಸಾಹಿ ಸೈಕ್ಲಿಸ್ಟ್‌ಗಳೊಂದಿಗೆ ಆರಂಭಗೊಂಡ ಸೈಕಲ್ ರ್‍ಯಾಲಿ ನರಸಾಪುರದಿಂದ ಜೊತೆಗೂಡಿದ ಕೋಲಾರ ಸಂಸದರಾದ ಎಸ್. ಮುನಿಸ್ವಾಮಿ ಸಹ ಸಾಥ್ ನೀಡಿದ್ದು ವಿಶೇಷ. ಇದನ್ನೂ ಓದಿ: ಬಿಜೆಪಿ, ಮೋದಿ, ಯೋಗಿಯನ್ನು ಮುಸ್ಲಿಮರು ಪ್ರೀತಿಸುತ್ತಾರೆ: ದ್ಯಾನಿಶ್‌ ಅಜಾದ್‌ ಅನ್ಸಾರಿ

Tejasvi Surya

7.5 ಕಿಮೀ ಪ್ರಾಯೋಗಿಕ ಹಂತದ ಸೈಕ್ಲಿಂಗ್‍ನಲ್ಲಿ 300 ನಾಗರಿಕರನ್ನು ಒಳಗೊಂಡಂತೆ ಸ್ವಾತಂತ್ರ್ಯದ 75ನೇ ವರ್ಷಾಚರಣೆಗೆ 750 ಜನ ಪಾಲ್ಗೊಂಡು ಕಾರ್ಯಕ್ರಮಕ್ಕೆ ಮೆರುಗು ನೀಡಿದ್ದು ಗಮನಾರ್ಹ. ಇದೇ ವೇಳೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಸಂಸದ ತೇಜಸ್ವಿ ಸೂರ್ಯ, ಸ್ವಾತಂತ್ರ್ಯೋತ್ಸವದ 75ನೇ ವರ್ಷಾಚರಣೆಗೆ ಪ್ರಧಾನಿ ನರೇಂದ್ರ ಮೋದಿಯವರ ಕರೆಯ ಮೇರೆಗೆ ಕ್ರೀಡೆ ಮತ್ತು ಸದೃಢ ಆರೋಗ್ಯ ವೃದ್ಧಿಗೆ ಸಾಕಷ್ಟು ಉತ್ತೇಜನ ದೊರಕಿದ್ದು, ವಿಶ್ವ ಯೋಗ ದಿನಾಚರಣೆ, ಫಿಟ್ ಇಂಡಿಯಾ ಅಭಿಯಾನ, ಒಲಿಂಪಿಕ್ಸ್ ಕ್ರೀಡೆಗಳನ್ನು ಒಳಗೊಂಡಂತೆ ಅನೇಕ ಉತ್ತೇಜನ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸೈಕಲ್ ಟು ಫ್ರೀಡಂನ ಮೂಲಕ ನರೇಂದ್ರ ಮೋದಿಯವರ ಆಶಯಕ್ಕೆ ಬೆಂಗಳೂರಿನ ಸೈಕ್ಲಿಂಗ್ ಸಮುದಾಯ ಜೊತೆಗೂಡಿದ್ದು ಅನುಕರಣೀಯ ಎಂದು ತಿಳಿಸಿದರು.

Tejasvi Surya

ಪದ್ಮಶ್ರೀ ಪ್ರಶಸ್ತಿ ವಿಜೇತರಾದ ಡಾ. ಕೆ.ವೈ.ವೆಂಕಟೇಶ್, ಪ್ಯಾರಾ ಅಥ್ಲೀಟ್ ಪಟು ಆನಂದ್ ಚಾಲನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ತೇಜಸ್ವಿ ಸೂರ್ಯ ಸಾಮಾಜಿಕ ಜಾಲತಾಣಗಳಲ್ಲಿ ಕಾರ್ಯಕ್ರಮದ ನೇರಪ್ರಸಾರ ಮಾಡಲಾಗಿದ್ದು, ಸಾವಿರಾರು ಜನರು ಫಿಟ್‍ನೆಸ್ ಕಾರ್ಯಕೈಗೊಳ್ಳಲು ಇದರಿಂದ ಸ್ಫೂರ್ತಿ ಪಡೆದುಕೊಳ್ಳಲು ಪ್ರೇರಣೆಯಾಗಲಿದೆ.

Tejasvi Surya

ಇದೇ ಸಂದರ್ಭದಲ್ಲಿ ಮಾತನಾಡಿದ ಕೋಲಾರ ಸಂಸದ ಎಸ್.ಮುನಿಸ್ವಾಮಿ, ಇಂತಹ ಅಭಿಯಾನಗಳು ಯುವಕರು ಫಿಟ್‍ನೆಸ್ ಕಡೆಗೆ ಗಮನ ಹರಿಸಲು ಪೂರಕವಾಗಿದ್ದು, ಸಾರ್ವಜನಿಕರಿಗೆ ಇಂತಹ ಅಭಿಯಾನಗಳಿಂದ ಸದೃಢ ಆರೋಗ್ಯದೆಡೆಗೆ ಗಮನ ಹರಿಸಲು ಸ್ಫೂರ್ತಿ ದೊರಕಲಿದೆ ಎಂದು ತಿಳಿಸಿದರು. ಈ ಅಭಿಯಾನಕ್ಕೆ ಡೆಕತ್ಲಾನ್, ಫಾಸ್ಟ್ ಆ್ಯಂಡ್ ಅಪ್, ಜಯಂತ್ ಪ್ರೊ ಬೈಕ್ಸ್, ಬೆಂಗಳೂರು ಡೋನಿಯರ್ಸ್, ರೆಕಾರ್ಡ್ ಮತ್ತು ನಿತ್ಯ ನಿರಂತರ ಸೇವಾ ಟ್ರಸ್ಟ್‌ಗಳ ಸಹಯೋಗ ನೀಡಿ, ಕಾರ್ಯಕ್ರಮ ಯಶಸ್ಸಿಗೆ ಸಹಕರಿಸಿದ್ದು ಶ್ಲಾಘನೀಯ. ಇದನ್ನೂ ಓದಿ: ನೀರನ್ನು ಮರುಬಳಕೆ ಮಾಡಿ: ಮೋದಿ ಕರೆ

Tejasvi Surya

2021ರ ಆಗಸ್ಟ್‌ನಲ್ಲಿ ಲೇಹ್, ಲಡಾಖ್‌ನಂತರ ಎತ್ತರದ ಪ್ರದೇಶಗಳಲ್ಲಿ ಭಾರತೀಯ ಜನತಾ ಯುವ ಮೋರ್ಚಾ ವತಿಯಿಂದ, ಆಜಾದಿ ಕಾ ಅಮೃತ ಮಹೋತ್ಸವದ ಪ್ರಯುಕ್ತ 3 ದಿನಗಳ ಯುವ ಸಂಕಲ್ಪ ಯಾತ್ರೆಯ ಅಂಗವಾಗಿ ಸೈಕ್ಲಿಂಗ್ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು. ಕ್ರೀಡಾ ಉತ್ತೇಜನದ ಭಾಗವಾಗಿ 250 ತಂಡಗಳನ್ನು ಒಳಗೊಂಡಂತೆ ತೇಜಸ್ವಿ ಸೂರ್ಯ ಫುಟ್‍ಬಾಲ್ ಕಪ್ ಆಯೋಜನೆಗೊಳಿಸಿದ್ದು, ಬಿಜೆಪಿ ಯುವ ಮೋರ್ಚಾ ವತಿಯಿಂದ ಒಲಿಂಪಿಕ್ಸ್‌ ಆಟಗಾರರನ್ನು ಹುರಿದುಂಬಿಸುವ ನಿಟ್ಟಿನಲ್ಲಿ ‘ಬಿ ಲೈಕ್ ಓಲಂಪಿಯನ್’ ಹೆಸರಿನಲ್ಲಿ ಅಭಿಯಾನ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು. ಮುಂದಿನ ಕೆಲವು ತಿಂಗಳುಗಳಲ್ಲಿ 8 ಪ್ರಮುಖ ಕ್ರೀಡೆಗಳನ್ನು ಒಳಗೊಂಡ ಸಂಸದರ ಕ್ರೀಡಾ ಉತ್ಸವ ಆಯೋಜನೆಗೊಳಿಸಲಾಗುತ್ತಿರುವುದು ಗಮನಾರ್ಹ.

Share This Article
Leave a Comment

Leave a Reply

Your email address will not be published. Required fields are marked *