ಪಾಟ್ನಾ: ಬಿಜೆಪಿ ವಿರುದ್ಧದ ನೆಕ್ ಟು ನೆಕ್ ಹೋರಾಟದಲ್ಲಿ ಮಹಾಘಟಬಂಧನ್ ಸಿಎಂ ಅಭ್ಯರ್ಥಿ ತೇಜಸ್ವಿ ಯಾದವ್ (Tejashwi Yadav) ಕೊನೆಗೂ ಗೆದ್ದು ತಮ್ಮ ಕುಟುಂಬದ ಭದ್ರಕೋಟೆಯಲ್ಲಿ ಉಳಿಸಿಕೊಂಡಿದ್ದಾರೆ.
ರಾಘೋಪುರ್ (Raghopur) ಕ್ಷೇತ್ರದಲ್ಲಿ ಬಿಜೆಪಿಯ ಸತೀಶ್ ಕುಮಾರ್ ವಿರುದ್ಧ ತೇಜಸ್ವಿ ಯಾದವ್ 14,532 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಮತ ಎಣಿಕೆ ಸಂದರ್ಭದಲ್ಲಿ ಹಾವು-ಏಣಿ ಆಟದಿಂದ ಯಾದವ್ ಕ್ಷೇತ್ರ ಕಳೆದುಕೊಳ್ಳುವ ಭೀತಿಯಲ್ಲಿದ್ದರು. ಕುತೂಹಲ ಮೂಡಿಸಿದ್ದ ಕ್ಷೇತ್ರದಲ್ಲಿ ಕೊನೆಗೂ ಗೆದ್ದು ಬೀಗಿದ್ದಾರೆ.
ರಾಘೋಪುರ್ ಆರ್‌ಜೆಡಿಯ ಭದ್ರಕೋಟೆ. ಹಿಂದೆ, ತೇಜಸ್ವಿ ಯಾದವ್ ಅವರ ತಂದೆ, ಆರ್‌ಜೆಡಿ ಸಂಸ್ಥಾಪಕ ಲಾಲು ಪ್ರಸಾದ್ ಯಾದವ್ ಮತ್ತು ತಾಯಿ ರಾಬ್ರಿ ದೇವಿ ಈ ಸ್ಥಾನವನ್ನು ಅಲಂಕರಿಸಿದ್ದರು. ತೇಜಸ್ವಿ 2015 ರಿಂದ ಈ ಸ್ಥಾನವನ್ನು ಪ್ರತಿನಿಧಿಸುತ್ತಿದ್ದಾರೆ. 2020 ರ ಚುನಾವಣೆಯಲ್ಲಿ ಅವರು 38,000 ಕ್ಕೂ ಹೆಚ್ಚು ಮತಗಳ ಅಂತರದಿಂದ ಕ್ಷೇತ್ರದಲ್ಲಿ ಗೆದ್ದಿದ್ದರು. ಇದನ್ನೂ ಓದಿ: ರಾಹುಲ್ ಗಾಂಧಿ ಯಾತ್ರೆ ಮಾಡಿದ್ದ ಮಾರ್ಗದ ಎಲ್ಲಾ ಕ್ಷೇತ್ರಗಳಲ್ಲೂ ಕಾಂಗ್ರೆಸ್‌ಗೆ ಹಿನ್ನಡೆ
ಈ ಬಾರಿ ಬಿಜೆಪಿ ಸತೀಶ್ ಕುಮಾರ್ ಯಾದವ್ ಅವರನ್ನು ರಾಘೋಪುರ್ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿತ್ತು. ಯಾದವ್ 2010 ರ ಚುನಾವಣೆಯಲ್ಲಿ ಜೆಡಿಯು ಅಭ್ಯರ್ಥಿಯಾಗಿ ರಾಬ್ರಿ ದೇವಿಯನ್ನು ಸೋಲಿಸಿದ್ದರು. ಪ್ರಶಾಂತ್ ಕಿಶೋರ್ ಅವರ ಜನ್ ಸುರಾಜ್ ಪಕ್ಷ ಕೂಡ ರಾಘೋಪುರದಲ್ಲಿ ಅಭ್ಯರ್ಥಿಯನ್ನು ಈ ಬಾರಿ ಕಣಕ್ಕಿಳಿಸಿತ್ತು.
ತೇಜಸ್ವಿ ಯಾದವ್‌ಗೆ ಸವಾಲು ಹಾಕುವ ಅವರ ಸಹೋದರ ತೇಜ್ ಪ್ರತಾಪ್ ಯಾದವ್ ಸ್ಥಾಪಿಸಿರುವ ಜನಶಕ್ತಿ ಜನತಾ ದಳ ಪಕ್ಷದಿಂದ ಅಭ್ಯರ್ಥಿ ಪ್ರೇಮ್ ಕುಮಾರ್ ಸ್ಪರ್ಧಿಸಿದ್ದರು. ಇದು ಕ್ಷೇತ್ರದ ಫಲಿತಾಂಶ ವಿಚಾರವಾಗಿ ಕುತೂಹಲ ಮೂಡಿಸಿತ್ತು. ಇದನ್ನೂ ಓದಿ: ʻಕಟ್ಟಾ ಸರ್ಕಾರʼ ಇನ್ನೆಂದಿಗೂ ಬರೋದಿಲ್ಲ – ವಿಕ್ಟರಿ ಭಾಷಣದಲ್ಲಿ ಆರ್‌ಜೆಡಿ ವಿರುದ್ಧ ಮೋದಿ ವಾಗ್ದಾಳಿ
ರಾಘೋಪೂರ್ ಪ್ರತಿ ಚುನಾವಣೆಯಲ್ಲೂ ಚರ್ಚೆಯ ವಿಷಯವಾಗಿದೆ. ಏಕೆಂದರೆ ಅದು ಆರ್‌ಜೆಡಿಯ ಸುರಕ್ಷಿತ ಸ್ಥಾನವೆಂದು ಪರಿಗಣಿಸಲ್ಪಟ್ಟಿದೆ.
