ಲಕ್ನೋ: ನೋಯ್ಡಾದಲ್ಲಿ (Noida) ದಟ್ಟವಾದ ಮಂಜಿನ ನಡುವೆ ಕಾರು ಒಳಚರಂಡಿಗೆ ಡಿಕ್ಕಿ ಹೊಡೆದು ಆಳವಾದ ಕಂದಕಕ್ಕೆ ಬಿದ್ದು 27 ವರ್ಷದ ಸಾಫ್ಟ್ವೇರ್ ಎಂಜಿನಿಯರ್ ಸಾವನ್ನಪ್ಪಿರುವ ಘಟನೆ ನಡೆದಿದೆ.
ಶುಕ್ರವಾರ ರಾತ್ರಿ ಸೆಕ್ಟರ್ 150 ರ ಬಳಿ ಈ ಘಟನೆ ನಡೆದಿದೆ. ಟೆಕ್ಕಿ (Techie) ಯುವರಾಜ್ ಮೆಹ್ತಾ ಕೆಲಸ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದರು. ದಟ್ಟವಾದ ಮಂಜಿನಿಂದ ಪ್ರದೇಶ ಆವರಿಸಿತ್ತು. ರಸ್ತೆಯಲ್ಲಿ ಸೂಚನಾ ಫಲಕಗಳು ಇಲ್ಲದ ಕಾರಣ, ಕಾರು ಪಕ್ಕದ ಎರಡು ಒಳಚರಂಡಿ ಬೇಸಿನ್ಗಳನ್ನು ಬೇರ್ಪಡಿಸುವ ಎತ್ತರದ ನೆಲದ ದಿಣ್ಣೆಗೆ ಡಿಕ್ಕಿ ಹೊಡೆಯಿತು. ಬಳಿಕ ಕಾರು 70 ಅಡಿ ಆಳದ ಕಂದಕಕ್ಕೆ ಬಿದ್ದಿತು. ಇದನ್ನೂ ಓದಿ: ಮುಂಬೈನಲ್ಲಿ ಮತ್ತೆ ರೆಸಾರ್ಟ್ ರಾಜಕೀಯ – ಶಿಂಧೆ ಸೇನಾ ಕಾರ್ಪೊರೇಟರ್ಗಳು ಫೈವ್ ಸ್ಟಾರ್ ಹೋಟೆಲ್ಗೆ ಸ್ಥಳಾಂತರ
ದಾರಿಯಲ್ಲಿ ಹೋಗುತ್ತಿದ್ದ ಸ್ಥಳೀಯರು, ಮೆಹ್ತಾ ಅವರ ಕಿರುಚಾಟ ಕೇಳಿ ಸಹಾಯ ಮಾಡಲು ಪ್ರಯತ್ನಿಸಿದರು. ಆದರೆ, ಅಷ್ಟರಲ್ಲಿ ಕಾರು ಸಂಪೂರ್ಣವಾಗಿ ಮುಳುಗಿತು. ಕಾರು ಪೂರ್ತಿ ಮುಳುಗುತ್ತಿದ್ದಾಗ ಟೆಕ್ಕಿ ತನ್ನ ತಂದೆಗೆ ಕರೆ ಮಾಡಿ, ‘ಅಪ್ಪಾ, ನಾನು ನೀರಿನಿಂದ ತುಂಬಿದ ಆಳವಾದ ಗುಂಡಿಗೆ ಬಿದ್ದಿದ್ದೇನೆ. ನಾನು ಮುಳುಗುತ್ತಿದ್ದೇನೆ. ದಯವಿಟ್ಟು ಬಂದು ನನ್ನನ್ನು ಉಳಿಸಿ. ನಾನು ಸಾಯಲು ಬಯಸುವುದಿಲ್ಲ’ ಎಂದು ಮಾತನಾಡಿದ್ದರು ಎನ್ನಲಾಗಿದೆ.
ವಿಷಯ ತಿಳಿದ ತಕ್ಷಣ ಸ್ಥಳೀಯ ಪೊಲೀಸರು, ಡೈವರ್ಗಳು ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ಡಿಆರ್ಎಫ್) ತಂಡಗಳು ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದವು. ಮೆಹ್ತಾ ಅವರ ತಂದೆ ಕೂಡ ಸ್ಥಳದಲ್ಲಿದ್ದರು. ಸುಮಾರು ಐದು ಗಂಟೆಗಳ ರಕ್ಷಣಾ ಪ್ರಯತ್ನದ ನಂತರ ಟೆಕ್ಕಿ ಮೃತದೇಹ ಮತ್ತು ಅವರ ಕಾರನ್ನು ಕಂದಕದಿಂದ ಹೊರತೆಗೆಯಲಾಯಿತು. ಇದನ್ನೂ ಓದಿ: ಭಾರತ – ಪಾಕ್ ಗಡಿಯಲ್ಲಿ 3 AK-47, 2 ಪಿಸ್ತೂಲ್, ಮದ್ದುಗುಂಡುಗಳು ಪತ್ತೆ – ಪೊಲೀಸರಿಂದ ತೀವ್ರ ಶೋಧ
ಮೆಹ್ತಾ ಅವರ ಕುಟುಂಬವು ದೂರು ದಾಖಲಿಸಿದ್ದು, ಅಧಿಕಾರಿಗಳು ಸರ್ವಿಸ್ ರಸ್ತೆಯ ಉದ್ದಕ್ಕೂ ಸೂಚನಾ ಫಲಕಗಳನ್ನು ಅಳವಡಿಸಿಲ್ಲ, ಚರಂಡಿಗಳನ್ನು ಮುಚ್ಚಿಲ್ಲ ಎಂದು ಆರೋಪಿಸಿದ್ದಾರೆ. ದಟ್ಟವಾದ ಮಂಜಿನ ನಡುವೆ ರಸ್ತೆಯ ಉದ್ದಕ್ಕೂ ಫಲಕಗಳು ಇಲ್ಲದಿರುವುದು ಅಪಘಾತಕ್ಕೆ ಕಾರಣ ಎಂದು ಮೃತ ಟೆಕ್ಕಿಯ ತಂದೆ ಅಸಮಾಧಾನ ಹೊರಹಾಕಿದ್ದಾರೆ. ಪ್ರಕರಣದಲ್ಲಿ ಯಾವುದೇ ನಿರ್ಲಕ್ಷ್ಯ ಕಂಡುಬಂದರೆ ತನಿಖೆ ನಡೆಸಿ ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ನಾಲೆಡ್ಜ್ ಪಾರ್ಕ್ ಪೊಲೀಸ್ ಠಾಣೆಯ ಉಸ್ತುವಾರಿ ಸರ್ವೇಶ್ ಕುಮಾರ್ ತಿಳಿಸಿದ್ದಾರೆ.

