– ಕಾರಿನಲ್ಲಿ ಜೊತೆಗೆ ಹೊರಟಿದ್ದ ಸಂಬಂಧಿಯೂ ಸಾವು
ಚಿಕ್ಕಬಳ್ಳಾಪುರ: ಟೆಕ್ಕಿ ದಂಪತಿ ಹೊರಟಿದ್ದ ಕಾರು ಲಾರಿಗೆ ಡಿಕ್ಕಿಯಾಗಿ ನವವಿವಾಹಿತೆ ಸಾವನ್ನಪ್ಪಿದ್ದು, ಪತಿ ಸ್ಥಿತಿ ಗಂಭೀರವಾಗಿರುವ ಘಟನೆ ಚಿಕ್ಕಬಳ್ಳಾಪುರ (Chikkaballapura) ತಾಲೂಕಿನ ಬೆಂಗಳೂರು-ಹೈದರಾಬಾದ್ ಹೆದ್ದಾರಿಯ (Bengaluru-Hyderabad) ಶೆಟ್ಟಿಗೆರೆ ಕ್ರಾಸ್ ಬಳಿ ಸಂಭವಿಸಿದೆ.
ರಕ್ಷಿತಾ ರೆಡ್ಡಿ (23) ಹಾಗೂ ಪವನ್ ರೆಡ್ಡಿ (30) ಮೃತರು. ಪತಿ ರಾಜಶೇಖರ್ ರೆಡ್ಡಿ ಗಂಭೀರವಾಗಿ ಗಾಯಗೊಂಡಿದ್ದಾರೆ. ರಕ್ಷಿತಾ ಹಾಗೂ ರಾಜಶೇಖರ್ ದಂಪತಿ ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಇಂಜನಿಯರ್ ಆಗಿದ್ದರು ಎಂದು ತಿಳಿದುಬಂದಿದೆ. ಇದನ್ನೂ ಓದಿ: ಐಪಿಎಲ್ ನಕಲಿ ಟಿಕೆಟ್ ದಂಧೆಗೆ ಬೆಂಗಳೂರು ಪೊಲೀಸರ ಡಿಜಿಟಲ್ ಬ್ರೇಕ್!
ಟೆಕ್ಕಿ ದಂಪತಿ ಕಳೆದ ನವೆಂಬರ್‌ನಲ್ಲಷ್ಟೇ ವಿವಾಹವಾಗಿದ್ದರು. ಇಬ್ಬರು ತಮ್ಮ ಸಂಬಂಧಿ ಪವನ್ ರೆಡ್ಡಿ ಜೊತೆ ಕಾರಿನಲ್ಲಿ ಅನಂತಪುರದ ಸ್ವಗ್ರಾಮ ಅವಳಗಿಗೆ ತೆರಳುತ್ತಿದ್ದರು. ಈ ವೇಳೆ ಮುಂದೆ ಸಾಗುತ್ತಿದ್ದ ಕಂಟೇನರ್ ಲಾರಿಗೆ ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿಯಾದ ರಭಸಕ್ಕೆ ಪತ್ನಿ ಹಾಗೂ ಪವನ್ ಸಾವನ್ನಪ್ಪಿದ್ದಾರೆ.
ಗಂಭೀರವಾಗಿ ಗಾಯಗೊಂಡಿದ್ದ ಪತಿ ರಾಜಶೇಖರ್ ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೆರೇಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ನಡೆದಿದೆ.ಇದನ್ನೂ ಓದಿ: ಜಡ್ಜ್‌ಗಳ ಮೇಲೆ ಪೂರ್ವಯೋಜಿತ ದಾಳಿ – ಪಶ್ಚಿಮ ಬಂಗಾಳದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ: ಸುಪ್ರೀಂ ಕೆಂಡಾಮಂಡಲ

