ಪತ್ನಿಯ ಕಿರುಕುಳಕ್ಕೆ ಬೇಸತ್ತು ಗೋಡೆ ಮೇಲೆ ಡೆತ್‍ನೋಟ್ ಬರೆದು ಟೆಕ್ಕಿ ಆತ್ಮಹತ್ಯೆ

Public TV
1 Min Read

ಬೆಂಗಳೂರು: ಪತ್ನಿಯ ಅಕ್ರಮ ಸಂಬಂಧಕ್ಕೆ ಬೇಸತ್ತು ಗೋಡೆ ಮೇಲೆ ಡೆತ್‍ನೋಟ್ ಬರೆದಿಟ್ಟು ಟೆಕ್ಕಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂಬ ಆರೋಪ ಗೋವಿಂದಪುರ (Govindapura) ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೇಳಿಬಂದಿದೆ.

ಮೃತ ಟೆಕ್ಕಿಯನ್ನು ಸೈಯ್ಯದ್ ಅಕ್ಮಲ್ ಅನ್ಸರ್ ಎಂದು ಗುರುತಿಸಲಾಗಿದೆ. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಇಬ್ಬರು ಮಕ್ಕಳಾದ ಬಳಿಕ ಮಹಿಳೆ ಅಕ್ರಮ ಸಂಬಂಧ ಇಟ್ಟುಕೊಂಡು ಪತಿಗೆ ನಿರಂತರ ಕಿರುಕುಳ ನೀಡುತ್ತಿದ್ದಳು. ಇದೇ ಕಾರಣಕ್ಕೆ ಬೇಸತ್ತು, ಗೋಡೆಯ ಮೇಲೆ ತನ್ನ ಸಾವಿಗೆ ಕಾರಣರಾದವರ ಹೆಸರುಗಳನ್ನ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಮೃತನ ಪೋಷಕರು ಆರೋಪಿಸಿದ್ದಾರೆ. ಇದನ್ನೂ ಓದಿ: ಮುಂಬೈ ಪೊಲೀಸರ ಸೋಗಿನಲ್ಲಿ ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ಬೆದರಿಕೆ – ಎಫ್‍ಐಆರ್ ದಾಖಲು

7 ವರ್ಷಗಳ ಹಿಂದೆ ಅಕ್ಮಲ್ ಅನ್ಸರ್‌ಗೆ ವಿವಾಹವಾಗಿತ್ತು. ಆರಂಭದಲ್ಲಿ ಇಬ್ಬರೂ ಚೆನ್ನಾಗಿಯೇ ಇದ್ದರು. ಮಕ್ಕಳಾದ ಬಳಿಕ, ಮೃತ ಅಕ್ಮಲ್ ಅನ್ಸರ್ ಮೇಲೆ ಅನುಮಾನ ಪಟ್ಟು ಪತ್ನಿ ಕಿರುಕುಳ ಕೊಡ್ತಿದ್ದಳು. ಅಷ್ಟೇ ಅಲ್ಲದೇ ಆಗಾಗ ಪತಿ ಬಳಿ ಹಣಕ್ಕೆ ಬೇಡಿಕೆ ಸಹ ಇಡುತ್ತಿದ್ದಳು. ಒಂದು ತಿಂಗಳ ಹಿಂದೆ ಗಲಾಟೆ ಮಾಡಿಕೊಂಡು ಗೋವಿಂದಪುರದ ಗಂಡನ ಮನೆಯಿಂದ ಬಿಟಿಎಂ ಲೇಔಟ್ ತಾಯಿ ಮನೆಗೆ ಬಂದಿದ್ದಳು ಎಂದು ತಿಳಿದು ಬಂದಿದೆ.

ಮಾ.11 ರಂದು ಅಕ್ಮಲ್ ಅನ್ಸರ್‍ನನ್ನು ಮನೆಗೆ ಕರೆಸಿಕೊಂಡು ಪತ್ನಿ ಹಾಗೂ ಪತ್ನಿ ಕುಟುಂಬಸ್ಥರು ಹಲ್ಲೆ ಮಾಡಿದ್ದರು. ಇದರಿಂದ ಮನನೊಂದು ಅಕ್ಮಲ್ ಅನ್ಸರ್ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಮೃತನ ಸಹೋದರ ಆರೋಪಿಸಿದ್ದಾನೆ.

ಈ ಸಂಬಂಧ ಮೃತ ಅಕ್ಮಲ್ ಅನ್ಸರ್ ಪತ್ನಿ, ಮಾವ ಮುನಾವರ್ ಸುಬಾನ್, ಪತ್ನಿಯ ಸಂಬಂಧಿಕರಾದ ಅಖೀಬ್, ಅಬ್ದುಲ್ ರಹಮ್ಮಾನ್ ಮನ್ಸೂರ್ ಸೇರಿದಂತೆ ಏಳು ಜನರ ಮೇಲೆ ಗೋವಿಂದಪುರ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ. ಆರೋಪಿಗಳು ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ. ಇದನ್ನೂ ಓದಿ: ರೀಲ್ಸ್ ರಾಣಿ ಸೋನು ಗೌಡಗೆ ಜೈಲು ಫಿಕ್ಸ್: 14 ದಿನ ನ್ಯಾಯಾಂಗ ಬಂಧನ

Share This Article