ಕಾಶಿನಾಥ್ ಪುತ್ರನ ಸಿನಿಮಾದ ಟೀಸರ್ ರಿಲೀಸ್: ಕುತೂಹಲ ಮೂಡಿಸಿದ ಸ್ಟೋರಿ

Public TV
2 Min Read

ಯುವ ಆವೇಗದ ತಂಡವೊಂದು ಅಖಾಡಕ್ಕಿಳಿಯಿತೆಂದರೆ, ಅಚ್ಚರಿದಾಯಕ ಕಂಟೆಂಟೊಂದು ರೂಪುಗೊಳ್ಳುತ್ತಿದೆ ಎಂದೇ ಅರ್ಥ. ಅದನ್ನು ಮತ್ತೆ ನಿಜವಾಗಿಸುವ ನಿಟ್ಟಿನಲ್ಲಿ `ಎಲ್ಲಿಗೆ ಪಯಣ ಯಾವುದೋ ದಾರಿ’ (Yellige Payana Yavudo Daari) ಚಿತ್ರದ ಮೂಲಕ ತಂಡವೊಂದು ಎಂಟ್ರಿ ಕೊಟ್ಟಿದೆ. ಈಗಾಗಲೇ ತಣ್ಣಗೆ ಚಿತ್ರೀಕರಣ ಮುಗಿಸಿಕೊಂಡಿರುವ ಈ ಚಿತ್ರದ ಟೀಸರ್ ಇದೀಗ ಬಿಡುಗಡೆಗೊಂಡಿದೆ. ಸೀಮಿತ ದೃಶ್ಯಗಳಲ್ಲಿಯೇ ಕುತೂಹಲದ ಕೆನೆಗಟ್ಟಿಕೊಂಡಿರುವಂತೆ ಭಾಸವಾಗುವ ಈ ಟೀಸರ್ ಪ್ರೇಕ್ಷಕರನ್ನು ಸಲೀಸಾಗಿ ತನ್ನತ್ತ ಸೆಳೆದುಕೊಳ್ಳುವಂತಿದೆ.

ಇದು ಅಭಿಮನ್ಯು ಕಾಶಿನಾಥ್ ನಾಥ್ (Abhimanya Kashinath) ನಾಯಕನಾಗಿ ನಟಿಸಿರುವ ಚಿತ್ರ. ಬೇರೆಯದ್ದೇ ತೆರನಾದ ವಿಶಿಷ್ಟ ಪಾತ್ರದ ಮೂಲಕ ಅಭಿಮನ್ಯು ಪ್ರೇಕ್ಷಕರನ್ನು ಮುಖಾಮುಖಿಯಾಗಲು ತಯಾರಾಗಿದ್ದಾರೆ. ಸದರಿ ಟೀಸರ್‌ನಲ್ಲಿ ಅವರು ವಿಭಿನ್ನ ಗೆಟಪ್ಪಿನಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಧಾನವಾಗಿ ಇದೊಂದು ಥ್ರಿಲ್ಲರ್ ಕಥನವನ್ನು ಒಳಗೊಂಡಿರುವ ಚಿತ್ರವೆಂಬ ಸಂದೇಶವೊಂದು, ಅತ್ಯಂತ ಪರಿಣಾಮಕಾರಿಯಾಗಿ ಪ್ರೇಕ್ಷಕರತ್ತ ದಾಟಿಕೊಂಡಿದೆ. ಈ ಟೀಸರ್ ಜೊತೆ ಜೊತೆಗೇ ಒಂದಷ್ಟು ಸೂಕ್ಷ್ಮ ಸಂಗತಿಗಳನ್ನು ಚಿತ್ರತಂಡ ಹಂಚಿಕೊಂಡಿದೆ.

ಇದು ಕಿರಣ್ ಎಸ್ ಸೂರ್ಯ ನಿರ್ದೇಶನದ ಚೊಚ್ಚಲ ಚಿತ್ರ. ಈಗಾಗಲೇ ಹನ್ನೆರಡು ವರ್ಷಗಳ ಕಾಲ ಚಿತ್ರರಂಗದ ನಾನಾ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿರುವವರು ಕಿರಣ್. ಈ ಮೂಲಕ ಅವರು ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಇದೊಂದು ಲವ್ ಕಂ ಥ್ರಿಲ್ಲರ್ ಜಾನರಿನ ಚಿತ್ರ. ಹಾಗೆಂದ ಮಾತ್ರಕ್ಕೆ ಆ ಪರಿಧಿಗೆ ಸೀಮಿತವಾದ ಕಥೆ ಇಲ್ಲಿದೆ ಅಂದುಕೊಳ್ಳುವಂತಿಲ್ಲ. ಕೊಲೆಯೊಂದರ ಸುತ್ತ ಕಥೆ ಜರುಗುತ್ತದೆ ಅಂದುಕೊಳ್ಳಲೂ ಸಾಧ್ಯವಿಲ್ಲ. ಇದುವರೆಗೆ ನೋಡಿದ್ದು ನಿಜವೋ ಸುಳ್ಳೋ ಎಂಬಂತೆ ಬೆರಗಿಗೆ ದೂಡುವ ರೀತಿಯಲ್ಲಿ ಈ ಸಿನಿಮಾವನ್ನು ರೂಪಿಸಲಾಗಿದೆಯಂತೆ. ವಿಶೇಷವೆಂದರೆ, ಕಿಚ್ಚಾ ಸುದೀಪ್ ಈ ಚಿತ್ರದ ಹಾಡೊಂದನ್ನು ಹಾಡಿದ್ದಾರೆ. ವಾಸುಕಿ ವೈಭವ್ ಹಾಗೂ ಸಪ್ತಸಾಗರದಾಚೆ ಎಲ್ಲೋ ಖ್ಯಾತಿಯ ಶ್ರೀಲಕ್ಷ್ಮಿ ಒಂದೊಂದು ಹಾಡುಗಳಿಗೆ ಧ್ವನಿಯಾಗಿದ್ದಾರೆ. ಎರಡು ಹಾಡುಗಳಿಗೆ ಖುದ್ದು ನಿರ್ದೇಶಕ ಕಿರಣ್ ಎಸ್ ಸೂರ್ಯ ಸಾಹಿತ್ಯ ಬರೆದಿದ್ದಾರೆ.

 

ಸುದರ್ಶನ ಆರ್ಟ್ಸ್ ಬ್ಯಾನರಿನಡಿಯಲ್ಲಿ ಜತಿನ್ ಪಟೇಲ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯೊಂದಿಗೆ ಕಿರಣ್ ಎಸ್ ಸೂರ್ಯ ನಿರ್ದೇಶನ ಮಾಡಿದ್ದಾರೆ. ಅಭಿಮನ್ಯು ಕಾಶಿನಾಥ್ ಅವರಿಗೆ ಸ್ಫೂರ್ತಿ ಉಡಿಮನೆ ನಾಯಕಿಯಾಗಿ  ಸಾಥ್ ಕೊಟ್ಟಿದ್ದಾರೆ. ವಿಜಯಶ್ರೀ ಕಲಬುರ್ಗಿ ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರೆ. ಬಲ ರಾಜವಾಡಿ, ಶೋಭನ್, ಅಯಾಂಕ್, ರಿನಿ ಬೋಪಣ್ಣ, ಪ್ರದೀಪ್, ರವಿತೇಜ, ಕಿಶೋರ್, ಅಶ್ವಿನಿ ರಾವ್, ಪ್ರಿಯಾ ಮುಂತಾದವರ ತಾರಾಗಣವಿದೆ. ಪ್ರಣವ್ ರಾವ್ ಸಂಗೀತ ನಿರ್ದೇಶನ, ಸತ್ಯ ರಾಮ್ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಪ್ರಮೋದ್ ಮರವಂತೆ ಸಾಹಿತ್ಯವಿದೆ. ಪೋಸ್ಟ್ ಪ್ರೊಡಕ್ಷನ್ ಹಂತ ದಾಟಿಕೊಂಡಿರುವ ಈ ಚಿತ್ರವೀಗ ಬಿಡುಗಡೆಗೆ ತಯಾರಾಗಿದೆ.

Share This Article