ದುಬೈನ ಕ್ರಿಕೆಟ್ ಅಕಾಡೆಮಿಗೆ ರೋಹಿತ್ ಬ್ರಾಂಡ್ ಅಂಬಾಸಿಡರ್

Public TV
1 Min Read

– ಆನ್‍ಲೈನ್‍ನಲ್ಲೇ ಕೋಚಿಂಗ್

ನವದೆಹಲಿ: ಟೀಂ ಇಂಡಿಯಾ ಏಕದಿನ ತಂಡದ ಉಪನಾಯಕ ರೋಹಿತ್ ಶರ್ಮಾ, ದುಬೈನ ಕ್ರಿಕ್ ಕಿಂಗ್‍ಡಂ ಕ್ರಿಕೆಟ್ ಅಕಾಡೆಮಿಯ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ.

ಕೊರೊನಾ ವೈರಸ್‍ನಿಂದಾಗಿ ವಿಶ್ವದ ಬಹುತೇಕ ಎಲ್ಲಾ ಕ್ರೀಡಾಕೂಟ, ಟೂರ್ನಿಗಳನ್ನು ಮುಂದೂಡಲಾಗಿದೆ ಅಥವಾ ರದ್ದುಗೊಳಿಸಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಕ್ರಿಕ್ ಕಿಂಗ್‍ಡಂ ಅಕಾಡೆಮಿಯು ಆನ್‍ಲೈನ್ ತರಬೇತಿಯನ್ನು ನೀಡಲು ಮುಂದಾಗಿದೆ. ಈ ವೇದಿಕೆಯಲ್ಲಿ ಅನೇಕ ವಿದ್ಯಾರ್ಥಿಗಳು, ತರಬೇತುದಾರರು, ಅಕಾಡೆಮಿಗಳು ಮತ್ತು ಸಂಸ್ಥೆಗಳು ಸೇರಬಹುದಾಗಿದೆ.

ಕ್ರಿಕ್ ಕಿಂಗ್‍ಡಂ ಅಕಾಡೆಮಿಯಲ್ಲಿ ಮುಂಬೈನ ಮಧ್ಯಮ ವೇಗದ ಬೌಲರ್ ಧವಲ್ ಕುಲಕರ್ಣಿ ಮಾರ್ಗದರ್ಶಕರಾಗಿದ್ದಾರೆ. ರೋಹಿತ್ ಶರ್ಮಾ ಅವರು 32 ಟೆಸ್ಟ್ ಪಂದ್ಯಗಳಲ್ಲಿ 2,141 ರನ್, 224 ಏಕದಿನ ಪಂದ್ಯಗಳಲ್ಲಿ 9,115 ರನ್ ಮತ್ತು 108 ಟಿ20 ಪಂದ್ಯಗಳಲ್ಲಿ 2,773 ರನ್ ಗಳಿಸಿದ್ದಾರೆ. ಏಕದಿನ ಪಂದ್ಯಗಳಲ್ಲಿ ಎರಡು ಬಾರಿ ಡಬಲ್ ಸೆಂಚುರಿ ಗಳಿಸಿದ ವಿಶ್ವದ ಮೊದಲ ಬ್ಯಾಟ್ಸ್‍ಮನ್ ಎಂಬ ಹೆಗ್ಗಳಿಕೆಗೆ ರೋಹಿತ್ ಪಾತ್ರರಾಗಿದ್ದಾರೆ.

ಅಕಾಡೆಮಿ ರೋಹಿತ್ ಅವರನ್ನು ಉಲ್ಲೇಖಿಸಿ, ”ಕ್ರಿಕ್ ಕಿಂಗ್‍ಡಂ ಆಧುನಿಕ, ವೈಜ್ಞಾನಿಕ ತರಬೇತಿ ವಿಧಾನಗಳೊಂದಿಗೆ ಉತ್ತಮ ಟೂರ್ನಿಯನ್ನು ನಡೆಸಲು ಸಾಂಪ್ರದಾಯಿಕ ವಿಧಾನಗಳನ್ನು ಸಂಯೋಜಿಸಲು ಬಯಸಿದೆ. ರೋಹಿತ್ ಅವರು ದೂರದೃಷ್ಟಿ ಹೊಂದಿದ್ದಾರೆ. ಅವರು ಪ್ರತಿಯೊಂದು ಅಂಶವನ್ನು ವೃತ್ತಿಪರ ಮತ್ತು ರಚನಾತ್ಮಕವಾಗಿರಲು ಬಯಸುತ್ತಾರೆ. ರೋಹಿತ್ ಅವರ ಹೆಸರನ್ನು ಅಕಾಡೆಮಿಯ ನಿರ್ದೇಶಕರಾಗಿಯೂ ಪ್ರಸ್ತಾಪಿಸಲಾಗಿದೆ” ಎಂದು ತಿಳಿಸಿದೆ.

ಆನ್‍ಲೈನ್ ಕೋಚಿಂಗ್ ವೇದಿಕೆಯಲ್ಲಿ ಎಲ್ಲಾ ಅಕಾಡೆಮಿಗಳಿಗೆ ನಿರ್ವಹಣೆಯೊಂದಿಗೆ ತರಬೇತುದಾರರು, ಮೈದಾನಗಳು ಅಥವಾ ನೆಟ್‍ಗಳ ಬುಕಿಂಗ್ ಸೌಲಭ್ಯವನ್ನು ಸಹ ಒದಗಿಸಲಾಗಿದೆ. ಕಿರಿಯ ಮಟ್ಟದಲ್ಲಿ ಮತ್ತು ತಳಮಟ್ಟದಲ್ಲಿ ಸಾಕಷ್ಟು ಕೆಲಸ ಮಾಡಿದ ಕನಿಷ್ಠ 20 ಜನ ಕ್ರಿಕೆಟಿಗರು ಇದ್ದಾರೆ. ಅವರಲ್ಲಿ ಕೆಲವರು ಅನುಭವಿ ತರಬೇತುದಾರರಾದ ಪ್ರದೀಪ್ ಇಂಗಲೆ, ಪರಾಗ್ ಮಡ್ಕೈಕರ್, ಸುಭಾಷ್ ರಂಜನೆ ಮತ್ತು ಪ್ರಥಮೇಶ್ ಸಲುಂಖೆ ಆಗಿದ್ದಾರೆ. ಕ್ಲಬ್ ಮತ್ತು ಗಣ್ಯ ಮಟ್ಟದ ಕ್ರಿಕೆಟಿಗರಿಗೆ ಕೋಚಿಂಗ್ ಸೌಲಭ್ಯದ ಹೊರತಾಗಿ 5ರಿಂದ 8 ವರ್ಷ, 8ರಿಂದ 13 ವರ್ಷ, 13 ವರ್ಷಕ್ಕಿಂತ ಮೇಲ್ಪಟ್ಟವರನ್ನು ವಿಂಗಡಿಸಿ ನಾಲ್ಕು ತರಗತಿ ರಚಿಸಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *