ನಿವೃತ್ತಿಯ ಬಗ್ಗೆ ಹಿಟ್‍ಮ್ಯಾನ್ ಮಾತು

Public TV
2 Min Read

ನವದೆಹಲಿ: ಟೀಂ ಇಂಡಿಯಾ ಓಪನರ್, ಹಿಟ್‍ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ನಿವೃತ್ತಿಯ ಬಗ್ಗೆ ಮಾತನಾಡಿದ್ದಾರೆ.

ಕೊರೊನಾ ಲಾಕ್‍ಡೌನ್‍ನಿಂದಾಗಿ ಆಟಗಾರರು ಮನೆಯಲ್ಲೇ ಕಾಲ ಕಳೆಯುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕೆಲವರು ಸಾಮಾಜಿಕ ಜಾಲತಾಣದಲ್ಲಿ ಆತ್ಮೀಯರ ಜೊತೆಗೆ ವಿಡಿಯೋ ಚಾಟಿಂಗ್ ನಡೆಸಿದ್ದಾರೆ. ರೋಹಿತ್ ಶರ್ಮಾ ಇತರ ಹಲವಾರು ಕ್ರಿಕೆಟಿಗರಂತೆ ತಮ್ಮ ಸಹ ಕ್ರಿಕೆಟಿಗರೊಂದಿಗೆ ಚಾಟಿಂಗ್ ನಡೆಸಿದ್ದಾರೆ. ಕೆವಿನ್ ಪೀಟರ್ಸನ್ ಮತ್ತು ಟೀಂ ಇಂಡಿಯಾ ವೇಗದ ಬೌಲರ್ ಮೊಹಮ್ಮದ್ ಶಮಿ ಅವರೊಂದಿಗೆ ಸಂವಹನ ನಡೆಸಿದ ಕೆಲವು ದಿನಗಳ ನಂತರ, ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಅವರೊಂದಿಗೆ ಕ್ರಿಕೆಟ್ ಕುರಿತು ಚರ್ಚೆ ನಡೆಸಿದ್ದಾರೆ.

ಅನುಭವಿ ಕ್ರಿಕೆಟಿಗರು ಹಲವಾರು ವಿಷಯಗಳ ಕುರಿತು, ಟೀಂ ಇಂಡಿಯಾ ಓಪರ್ ಶಿಖರ್ ಧವನ್ ಅವರ ಬಗ್ಗೆಯೂ ಮಾತನಾಡಿದ್ದಾರೆ. ಇದೇ ವೇಳೆ ರೋಹಿತ್ ಶರ್ಮಾ ಅವರು ನಿವೃತ್ತಿ ವಿಚಾರವನ್ನು ರಿವೀಲ್ ಮಾಡಿದ್ದಾರೆ. 33 ವರ್ಷದ ಹಿಟ್‍ಮ್ಯಾನ್, 38ರಿಂದ 39 ವರ್ಷಕ್ಕಿಂತ ಮೊದಲೇ ತಮ್ಮ ವೃತ್ತಿಜೀವನವನ್ನು ಮುಗಿಸುವುದಾಗಿ ಹೇಳಿಕೊಂಡಿದ್ದಾರೆ.

“ನಾವು ಭಾರತದ ಕ್ರಿಕೆಟ್ ತಂಡದಲ್ಲಿ ಬೆಳೆದಾಗ ಅದು ನಿಜಕ್ಕೂ ಖುಷಿ ಕೊಡುತ್ತದೆ. ನೀವು 38ರಿಂದ 39 ವರ್ಷದವರಾಗಿದ್ದಾಗ ನಿವೃತ್ತಿ ನೀಡುತ್ತಿರಿ. ನೀವು ಯಾವಾಗ ನಿವೃತ್ತಿ ಘೋಷಿಸುತ್ತಿರೋ ನನಗೆ ತಿಳಿದಿಲ್ಲ. ಆದರೆ ನಾನು ಮಾತ್ರ ಅದಕ್ಕೂ ಮೊದಲೇ ನಿವೃತ್ತಿ ಘೋಷಿಸುತ್ತೇನೆ” ಎಂದು ರೋಹಿತ್ ವಾರ್ನರ್ ಅವರಿಗೆ ತಿಳಿಸಿದ್ದಾರೆ.

ರೋಹಿತ್ 2007ರಲ್ಲಿ ಐರ್ಲ್ಯಾಂಡ್ ವಿರುದ್ಧ ನಡೆದ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‍ಗೆ ಪಾದಾರ್ಪಣೆ ಮಾಡಿದರು. ಜೊತೆಗೆ 2007ರ ಟಿ20 ವಿಶ್ವಕಪ್ ವಿಜೇತ ತಂಡದ ಸದಸ್ಯರಾಗಿದ್ದರು. ಆದರೆ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುವಲ್ಲಿ ವೈಫಲ್ಯ ಎದುರಿಸಿದ್ದರು. 2013ರಲ್ಲಿ ಶಿಖರ್ ಧವನ್ ಅವರೊಂದಿಗೆ ಇನ್ನಿಂಗ್ಸ್ ಆರಂಭಿಸಲು ಪ್ರಾರಂಭಿಸಿದಾಗ ಅವರಿಗೆ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಲು ಸಾಧ್ಯವಾಯಿತು. ವೈಟ್-ಬಾಲ್ ಕ್ರಿಕೆಟ್‍ನಲ್ಲಿ ಓಪನರ್ ಆಗಿ ಮೈದಾಮನಕ್ಕೆ ಇಳಿಯುವುದನ್ನು ಮುಂದುವರಿಸಿದ್ದಾರೆ. ಅಂದಿನಿಂದ ಇಂದಿನವರೆಗೂ ಟೀಂ ಇಂಡಿಯಾ ಆಡುವ ಇಲೆವೆನ್‍ನಿಂದ ಅವರನ್ನು ಕೈಬಿಡಲಾಗಿಲ್ಲ.

ರೋಹಿತ್ ಅಂತಾರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಅನೇಕ ದಾಖಲೆಗಳನ್ನು ಬರೆದಿದ್ದಾರೆ. ಏಕದಿನ ಪಂದ್ಯಗಳಲ್ಲಿ ಮೂರು ಬಾರಿ ದ್ವಿಶತಕಗಳನ್ನು ಗಳಿಸಿದ ಏಕೈಕ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ರೋಹಿತ್ ಪಾತ್ರರಾಗಿದ್ದಾರೆ. ಇದುವರೆಗೆ 224 ಏಕದಿನ ಪಂದ್ಯಗಳನ್ನು ಆಡಿರುವ ಅವರು 9,115 ರನ್ ಗಳಿಸಿದ್ದಾರೆ.

108 ಟಿ20 ಪಂದ್ಯಗಳನ್ನು ಆಡಿ 2,773 ರನ್ ಗಳಿಸಿರುವ ರೋಹಿತ್ ಟಿ20 ಮಾದರಿಯಲ್ಲಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಅಲ್ಲದೆ ಟಿ20 ಮಾದರಿಯಲ್ಲಿ ಹೆಚ್ಚು 4 ಶತಕಗಳನ್ನು ಗಳಿಸಿದ ಪಟ್ಟಿಯಲ್ಲಿ ಅವರು ಅಗ್ರಸ್ಥಾನದಲ್ಲಿದ್ದಾರೆ. ಜೊತೆಗೆ ಐಪಿಎಲ್‍ನಲ್ಲಿ ಎರಡು ಶತಕ ಸಿಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *