2011ರ ವಿಶ್ವಕಪ್ ಗೆಲುವಿನಲ್ಲಿ ಕ್ರೀಡೆಯ ಶಕ್ತಿಯನ್ನು ಅನುಭವಿಸಿದ್ದೇನೆ: ಸಚಿನ್

Public TV
3 Min Read

– ಸಚಿನ್‍ಗೆ ಲಾರೆಸ್ ಸ್ಪೋರ್ಟಿಂಗ್ ಪ್ರಶಸ್ತಿ
– ಮೆಸ್ಸಿ, ಹ್ಯಾಮಿಲ್ಟನ್ ವರ್ಷದ ಕ್ರೀಡಾಪಟು

ಬರ್ಲಿನ್: ಜರ್ಮನಿಯ ರಾಜಧಾನಿ ಬರ್ಲಿನ್‍ನಲ್ಲಿ ಮಂಗಳವಾರ ನಡೆದ 2011ರ ವಿಶ್ವಕಪ್ ವಿಜೇತ ಕ್ಷಣಕ್ಕಾಗಿ ಲಾರೆಸ್ ಸ್ಪೋರ್ಟಿಂಗ್ ಮೊಮೆಂಟ್ ಪ್ರಶಸ್ತಿಗೆ ಸಚಿನ್ ತೆಂಡೂಲ್ಕರ್ ಆಯ್ಕೆಯಾಗಿದ್ದಾರೆ.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸಚಿನ್, ಈ ಟ್ರೋಫಿಯನ್ನು ಎತ್ತಿ ಹಿಡಿಯಲು ಹಾಗೂ ಪ್ರಶಸ್ತಿಯನ್ನು ನೀಡಿರುವುದಕ್ಕಾಗಿ ಲಾರೆಸ್ ಪ್ರಶಸ್ತಿ ಅಕಾಡೆಮಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಈ ಸಂದರ್ಭ ನನ್ನ ಪಾಲಿಗೆ ತುಂಬಾನೇ ವಿಶೇಷವಾಗಿದೆ. ನನಗೆ ಮತ ಹಾಕಿದ ಎಲ್ಲರಿಗೂ ಧನ್ಯವಾದಗಳು ಎಂದು ಭಾವುಕರಾಗಿ ನುಡಿದರು.

ವಿಶ್ವಕಪ್ ಗೆಲುವಿನ ಸಂಭ್ರಮ:
2011ರಲ್ಲಿ ತವರು ನೆಲದಲ್ಲಿ ವಿಶ್ವಕಪ್ ಗೆದ್ದಿದ್ದು ನಿಜಕ್ಕೂ ಅದ್ಭುತವಾಗಿತ್ತು. ಎಲ್ಲರೂ ಜೊತೆಯಾಗಿ ಸೇರಿಕೊಂಡು ವಿಜಯೋತ್ಸವನ್ನು ಆಚರಿಸಿದರು. ಇದು ಕ್ರೀಡೆ ಎಷ್ಟೊಂದು ಶಕ್ತಿಶಾಲಿಯಾಗಿದೆ ಎನ್ನುವುದನ್ನು ನೆನಪಿಸುತ್ತದೆ. ನಾನು ಕ್ರೀಡೆಯ ಶಕ್ತಿಯನ್ನು ಅನುಭವಿಸಿದ್ದೇನೆ. ವಿಶ್ವಕಪ್ ಗೆಲುವಿನ ಕ್ಷಣವು ಈಗಲೂ ನನ್ನ ಮನದಲ್ಲಿ ಅಚ್ಚಳಿಯದೆ ಉಳಿದಿದೆ. ಆ ಕ್ಷಣ ನಿಸ್ಸಂಶವಾಗಿಯೂ ನನ್ನ ಜೀವನದ ಹೆಮ್ಮೆಯ ಕ್ಷಣ ಇದಾಗಿದೆ ಎಂದು ನೆನೆದರು.

22 ವರ್ಷಗಳವರೆಗೆ ವಿಶ್ವಕಪ್ ಕನಸನ್ನು ಬೆನ್ನಟ್ಟಿ ಟ್ರೋಫಿ ಎತ್ತಿ ಹಿಡಿದಿದ್ದೇನೆ. ಈ ಪ್ರಯಾಣದಲ್ಲಿ ನಾನು ಯಾವತ್ತೂ ಕನಸನ್ನು ಕೈಚೆಲ್ಲಲಿಲ್ಲ, ಸೋಲನ್ನು ಒಪ್ಪಿಕೊಳ್ಳಲಿಲ್ಲ. 24 ವರ್ಷಗಳ ಕಾಲ ಭಾರತಕ್ಕಾಗಿ ಕ್ರಿಕೆಟ್ ಆಡಿದ್ದೇನೆ. ನನ್ನ ಪಾಲಿಗಿದು ಕನಸು ನನಸಾದ ಕ್ಷಣವಾಗಿತ್ತು ಎಂದು ಹೆಮ್ಮೆ ವ್ಯಕ್ತಪಡಿಸಿದರು.

ಮಂಡೇಲಾರನ್ನ ನೆನೆದ ಸಚಿನ್:
ಈ ಸಂದರ್ಭದ ಕ್ಷಣದಲ್ಲಿ ವಿಚಾರವೊಂದನ್ನು ಪ್ರಸ್ತಾಪಿಸುತ್ತಿರುವೆ. 19ನೇ ವಯಸ್ಸಿನಲ್ಲೇ ದಕ್ಷಿಣ ಆಫ್ರಿಕಾ ಮಾಜಿ ಅಧ್ಯಕ್ಷ ನೆಲ್ಸನ್ ಮಂಡೇಲಾ ಅವರನ್ನು ಭೇಟಿ ಮಾಡುವ ಅದೃಷ್ಟ ನನಗೆ ಸಿಕ್ಕಿತ್ತು. ಅವರ ವಿಚಾರಗಳು ನಾಯಕತ್ವದ ಮೇಲೆ ಪರಿಣಾಮ ಬೀರಲಿಲ್ಲ. ಅವರ ಸಂದೇಶಗಳಲ್ಲಿ ನನ್ನ ಪ್ರಕಾರ ಅತಿ ಮುಖ್ಯವಾದುದು ಏನೆಂದರೆ, ಕ್ರೀಡೆ ಎಲ್ಲರನ್ನೂ ಒಟ್ಟುಗೂಡಿಸುವ ಶಕ್ತಿಯನ್ನು ಹೊಂದಿದೆ ಎಂಬುದು ಎಂದು ಹೇಳಿದರು.

ಈ ಕಾರ್ಯಕ್ರದಲ್ಲಿ ಇಂದು ಅನೇಕ ಶ್ರೇಷ್ಠ ಅಥ್ಲೀಟ್‍ಗಳೊಂದಿಗೆ ಕುಳಿತುಕೊಳ್ಳುವಾಗ ಕೆಲವರು ಶ್ರೇಷ್ಠವಾದ ಅವಕಾಶವೊಂದನ್ನು ಪಡೆಯದೇ ಇರಬಹುದು. ಆದರೆ ತಮಗೆ ಸಿಕ್ಕಿರುವ ಅವಕಾಶವನ್ನು ಅತ್ಯುತ್ತಮವಾಗಿ ಪರಿವರ್ತಿಸಿಕೊಂಡು ಬೆಳೆದಿದ್ದಾರೆ. ಹೀಗೆ ಯುವ ಜನಾಂಗ ಕ್ರೀಡಾ ಸ್ಫೂರ್ತಿಯೊಂದಿಗೆ ಬೆಳೆಯಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಸಚಿನ್ ತೆಂಡೂಲ್ಕರ್ ಅವರು ‘ದೇಶವನ್ನು ಹೆಗಲ ಮೇಲೆ ಹೊತ್ತುಕೊಂಡಿರುವ ಕ್ಷಣ’ಕ್ಕಾಗಿ ಪ್ರತಿಷ್ಠಿತ ಲಾರೆಸ್ ಕ್ರೀಡಾ ಕ್ಷಣ ಪ್ರಶಸ್ತಿಗೆ ಭಾಜನವಾಗಿದ್ದಾರೆ. ಎಂ.ಎಸ್.ಧೋನಿ ನಾಯಕತ್ವದಲ್ಲಿ ಭಾರತವು 2011ರಲ್ಲಿ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಶ್ರೀಲಂಕಾವನ್ನು 6 ವಿಕೆಟ್‍ಗಳಿಂದ ಸೋಲಿಸಿ ವಿಶ್ವಕಪ್ ಗೆದ್ದಿತು. ಆಗ ಸಚಿನ್ ಅವರನ್ನು ಟೀಂ ಇಂಡಿಯಾ ಆಟಗಾರರು ತಮ್ಮ ಭುಜದ ಹೊತ್ತು ಕ್ರೀಡಾಂಗಣದಲ್ಲಿ ಹೆಜ್ಜೆ ಹಾಕಿದ್ದರು. ಈ ಮೂಲಕ 22 ವರ್ಷಗಳಿಂದ ಕಾಯುತ್ತ ಬಂದಿದ್ದ ಸಚಿನ್ ಅವರ ಕನಸು ಈಡೇರಿತ್ತು.

ಲಾರೆಸ್ ವಿಶ್ವ ಕ್ರೀಡಾ ಪ್ರಶಸ್ತಿಯು 20ನೇ ವರ್ಷಕ್ಕೆ ಕಾಲಿರಿಸಿದ ಸಂಭ್ರಮಾಚರಣೆಯ ಭಾಗವಾಗಿ ಸ್ಫೂರ್ತಿದಾಯಕ ಕ್ರೀಡಾ ಕ್ಷಣವನ್ನು ಆಯ್ಕೆ ಮಾಡಲು ಸಾರ್ವಜನಿಕರಿಗೆ ಅವಕಾಶ ನೀಡಿ ಮತದಾನಕ್ಕೆ ಅವಕಾಶ ಕೊಡಲಾಗಿತ್ತು. ಈ ಮತದಾನ ಪ್ರಕ್ರಿಯೆಯಲ್ಲಿ ಸಚಿನ್ ತೆಂಡೂಲ್ಕರ್ ಅವರು ಅತಿ ಹೆಚ್ಚು ಮತಗಳನ್ನು ಪಡೆದುಕೊಂಡು ಪ್ರತಿಷ್ಠಿತ ಲಾರೆಸ್ ಕ್ರೀಡಾ ಕ್ಷಣ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

6 ಬಾರಿಯ ಫಾರ್ಮುಲಾ ಒನ್ ವಿಶ್ವ ಚಾಂಪಿಯನ್ ಹ್ಯಾಮಿಲ್ಟನ್ ಮತ್ತು 6 ಬಾರಿ ಫಿಫಾ ವಲ್ರ್ಡ್ ಪ್ಲೇಯರ್ ಆಫ್ ದಿ ಇಯರ್ ಮೆಸ್ಸಿ ಇಬ್ಬರು ಸಮಾನಾಗಿ ಮತ ಪಡೆದರು. ಹೀಗಾಗಿ ಲಾರೆಸ್ ಪ್ರಶಸ್ತಿಯ 20 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಬ್ಬರು ಆಟಗಾರರನ್ನು ವರ್ಷದ ಕ್ರೀಡಾಪಟುಗಳಾಗಿ ಆಯ್ಕೆ ಮಾಡಲಾಗಿದೆ. ಜೊತೆಗೆ ಈ ಪ್ರಶಸ್ತಿಯನ್ನು ಪಡೆದ ಮೊದಲ ಫುಟ್ಬಾಲ್ ಆಟಗಾರ ಎಂಬ ಹಿರಿಮೆಗೆ ಮೆಸ್ಸಿ ಪಾತ್ರರಾಗಿದ್ದಾರೆ.

ಲಾರೆಸ್ ಪ್ರಶಸ್ತಿ ಎಂದರೇನು?
ಇದು ವಿಶ್ವದ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾಗಿದೆ. ಇದನ್ನು 1999ರಲ್ಲಿ ಲಾರೆಸ್ ಸ್ಪೋರ್ಟ್ ಫಾರ್ ಗುಡ್ ಫೌಂಡೇಶನ್‍ನ ಡೈಮ್ಲರ್ ಮತ್ತು ರಿಚ್ಮಾಂಟ್ ಪ್ರಾರಂಭಿಸಿದರು. ಮೊದಲ ಪ್ರಶಸ್ತಿಗಳನ್ನು 2000ರ ಮೇ 25ರಂದು ನೀಡಲಾಯಿತು. ಇದರಲ್ಲಿ 13 ವಿವಿಧ ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಪ್ರಶಸ್ತಿಯ ಪ್ರಮುಖ ವಿಭಾಗಗಳು ವರ್ಷದ ಲಾರೆಸ್ ವಿಶ್ವ ಕ್ರೀಡಾಪಟು, ವರ್ಷದ ಲಾರೆಸ್ ವಿಶ್ವ ಕ್ರೀಡಾಪಟು, ವರ್ಷದ ಲಾರೆಸ್ ವಿಶ್ವ ತಂಡ, ವರ್ಷದ ಲಾರೆಸ್ ವಿಶ್ವ ಪುನರಾಗಮನ ಮತ್ತು ವರ್ಷದ ಲಾರೆಸ್ ವಿಶ್ವ ಪ್ರಗತಿ ಆಗಿವೆ.

Share This Article
Leave a Comment

Leave a Reply

Your email address will not be published. Required fields are marked *