‘ಕನ್ನಡಿಯಲ್ಲಿರುವ ಮನುಷ್ಯನಿಗೆ ಸತ್ಯವಾಗಿರಿ’- ವಿರಾಟ್ ಭಾವನಾತ್ಮಕ ಪೋಸ್ಟ್

Public TV
2 Min Read

ಧರ್ಮಶಾಲ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸಾಮಾಜಿಕ ಜಾಲತಾಣದಲ್ಲಿ ಆಗಾಗ ಭಾವನಾತ್ಮಕ ಹಾಗೂ ಸ್ಪೂರ್ತಿದಾಯಕ ಕೋಟ್‍ಗಳನ್ನು ಹಾಕುತ್ತಾರೆ. ಅಂತೆ ಇಂದು ಕೂಡ ವಿಶೇಷ ರೀತಿಯಲ್ಲಿ ಅಭಿಪ್ರಾಯ ತಿಳಿಸಿ ಅಭಿಮಾನಿಗಳ ಮನಗೆದ್ದಿದ್ದಾರೆ.

ಕನ್ನಡಿಯ ಮುಂದೆ ನಿಂತು ಕ್ಲಿಕ್ಕಿಸಿಕೊಂಡ ಫೋಟೋವನ್ನು ವಿರಾಟ್ ಟ್ವೀಟ್ ಮಾಡಿದ್ದಾರೆ. ಜೊತೆಗೆ, ‘ಕನ್ನಡಿಯಲ್ಲಿರುವ ಮನುಷ್ಯನಿಗೆ ಸತ್ಯವಾಗಿರಿ’ ಎಂದು ಬರೆದುಕೊಂಡಿದ್ದಾರೆ. ಅವರ ಟ್ವೀಟ್‍ಗೆ ಅನೇಕ ಅಭಿಮಾನಿಗಳು ತಮ್ಮದೇ ರೀತಿಯಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನ್ಯೂಜಿಲೆಂಡ್ ವಿರುದ್ಧದ ಏಕದಿನ ಹಾಗೂ ಟೆಸ್ಟ್ ಸರಣಿಯಲ್ಲಿ ಭಾರತ ಸೋಲು ಕಂಡ ಬಳಿಕ ವಿರಾಟ್ ಕೊಹ್ಲಿ ಫಾರ್ಮ್ ಬಗ್ಗೆ ಭಾರೀ ಟೀಕೆ ವ್ಯಕ್ತವಾಗಿತ್ತು. ಈ ವೇಳೆ ಅಂದ್ರೆ ಮಾರ್ಚ್ 5ರಂದು ವಿರಾಟ್, ಮೊಬೈಲ್ ಹಿಡಿದು ನಿಂತಿರುವ ತಮ್ಮ ಫೋಟೋ ಹಾಕಿ ‘ಪರಿವರ್ತನೆಯೊಂದೇ ಶಾಶ್ವತವಾದ್ದು’ ಎಂದು ಬರೆದುಕೊಂಡಿದ್ದರು.

ವಿರಾಟ್ ಟ್ವೀಟ್‍ಗೆ ರಿಟ್ವೀಟ್ ಮಾಡಿರುವ ಕೆಲ ಅಭಿಮಾನಿಗಳು, ನಿಮ್ಮ ಬದಲಾವಣೆಗಾಗಿ ಕಾಯುತ್ತಿದ್ದೇವೆ. ಸಿಕ್ಸರ್, ಬೌಂಡರಿ ಸುರಿಮಳೆ ಸುರಿಸುವುದನ್ನು ನೋಡಲು ಕಾತುರದಲ್ಲಿದ್ದೇವೆ ಎಂದು ಪ್ರತಿಕ್ರಿಯಿಸಿದ್ದರು.

ರನ್ ಮೆಷಿನ್ ಖ್ಯಾತಿಯ ವಿರಾಟ್ ಕೊಹ್ಲಿ ಭಾರತದ ಮಾಜಿ ಕ್ರಿಕೆಟರ್ ಸಚಿನ್ ತೆಂಡೂಲ್ಕರ್ ಸೇರಿದಂತೆ ಅನೇಕರ ದಾಖಲೆಗಳನ್ನು ಹಿಂದಿಕ್ಕಿದ್ದಾರೆ. ಈಗ ಸಚಿನ್ ಹೆಸರಿನಲ್ಲಿರುವ ಮತ್ತೊಂದು ದಾಖಲೆಯನ್ನು ತಮ್ಮ ಮುಡಿಗೇರಿಸಿಕೊಳ್ಳುವ ಸನಿಹದಲ್ಲಿ ವಿರಾಟ್ ಇದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯ ಮಳೆಯಿಂದಾಗಿ ರದ್ದಾಗಿದೆ. ಉಳಿದ ಎರಡು ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ 133 ರನ್ ಗಳಿಸಿದರೆ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿಯಲಿದ್ದಾರೆ.

ವಿರಾಟ್ ಕೊಹ್ಲಿ ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್‍ನಲ್ಲಿ ಈವರೆಗೂ 239 ಇನ್ನಿಂಗ್ಸ್ ಆಡಿದ್ದು, 43 ಶತಕ, 58 ಅರ್ಧಶತಕ ಸೇರಿ 11,867 ದಾಖಲಿಸಿದ್ದಾರೆ. ಏಕದಿನ ಕ್ರಿಕೆಟ್‍ನಲ್ಲಿ 12,000 ರನ್‍ಗಳ ಮೈಲುಗಲ್ಲು ತಲುಪಲು ವಿರಾಟ್‍ಗೆ 133 ರನ್‍ಗಳ ಅಗತ್ಯವಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ವಿರಾಟ್ 133 ರನ್ ಗಳಿಸಿದರೆ ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್‍ನಲ್ಲಿ 12,000 ರನ್ ದಾಖಲಿಸಿದ ಭಾರತದ ಎರಡನೇ ಬ್ಯಾಟ್ಸ್‍ಮನ್ ಹಾಗೂ ವಿಶ್ವದ ಆರನೇ ಬ್ಯಾಟ್ಸ್‍ಮನ್ ಎಂಬ ಹಿರಿಮೆಗೆ ಪಾತ್ರರಾಗಲಿದ್ದಾರೆ.

ಜೊತೆಗೆ ಏಕದಿನ ಅಂತರರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಅತಿ ವೇಗದಲ್ಲಿ 12,000 ರನ್ ಗಳಿಸಿದ ದಾಖಲೆಗೂ ವಿರಾಟ್ ಭಾಜನವಾಗಲಿದ್ದಾರೆ. ಕೊಹ್ಲಿ ಇದುವರೆಗೆ ಆಡಿರುವ 239 ಇನ್ನಿಂಗ್ಸ್ ಗಳಲ್ಲಿ 11,867 ರನ್ ಪೇರಿಸಿದ್ದಾರೆ. ಪ್ರಸ್ತುತ ಏಕದಿನ ಕ್ರಿಕೆಟ್‍ನಲ್ಲಿ ಅತಿ ವೇಗದಲ್ಲಿ 12,000 ರನ್ ಗಳಿಸಿದ ದಾಖಲೆ ಭಾರತದ ಮಾಜಿ ಕ್ರಿಕೆಟರ್ ಸಚಿನ್ ತೆಂಡೂಲ್ಕರ್ ಹೆಸರಲ್ಲಿದೆ. ಸಚಿನ್ ತೆಂಡೂಲ್ಕರ್ 300ನೇ ಇನ್ನಿಂಗ್ಸ್ ನಲ್ಲಿ 12,000 ರನ್‍ಗಳ ದಾಖಲೆ ಬರೆದಿದ್ದರು.

Share This Article
Leave a Comment

Leave a Reply

Your email address will not be published. Required fields are marked *