ಪರಿವರ್ತನೆಯೊಂದೇ ಶಾಶ್ವತವಾದದ್ದು ಎಂದ ವಿರಾಟ್

Public TV
2 Min Read

ನವದೆಹಲಿ: ನ್ಯೂಜಿಲೆಂಡ್ ಪ್ರವಾಸದಲ್ಲಿ ಬ್ಯಾಟಿಂಗ್ ವೈಫಲ್ಯ ತೋರಿ ಟೀಕೆ ಗುರಿಯಾಗಿದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಭಾವನಾತ್ಮಕವಾಗಿ ಟ್ವೀಟ್ ಮಾಡಿದ್ದಾರೆ.

ಮೊಬೈಲ್ ಹಿಡಿದು ನಿಂತಿರುವ ತಮ್ಮ ಫೋಟೋವನ್ನು ಟ್ವೀಟ್ ಮಾಡಿರುವ ವಿರಾಟ್ ಕೊಹ್ಲಿ, ‘ಪರಿವರ್ತನೆಯೊಂದೇ ಶಾಶ್ವತವಾದ್ದು’ ಎಂದು ಬರೆದುಕೊಂಡಿದ್ದಾರೆ.

ವಿರಾಟ್ ಟ್ವೀಟ್‍ಗೆ ರಿಟ್ವೀಟ್ ಮಾಡಿರುವ ಕೆಲ ಅಭಿಮಾನಿಗಳು, ನಿಮ್ಮ ಬದಲಾವಣೆಗಾಗಿ ಕಾಯುತ್ತಿದ್ದೇವೆ. ಸಿಕ್ಸರ್, ಬೌಂಡರಿ ಸುರಿಮಳೆ ಸುರಿಸುವುದನ್ನು ನೋಡಲು ಕಾತುರದಲ್ಲಿದ್ದೇವೆ ಎಂದು ಪ್ರತಿಕ್ರಿಯಿಸಿದ್ದಾರೆ.

ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ಆನ್ ಫೀಲ್ಡ್ ನಲ್ಲಿ ತಮ್ಮ ನಡವಳಿಕೆ ಬಗ್ಗೆ ಪ್ರಶ್ನಿಸಿದ್ದ ಪತ್ರಕರ್ತನಿಗೆ ಭಾರತದ ನಾಯಕ ವಿರಾಟ್ ಕೊಹ್ಲಿ ಚಳಿ ಬಿಡಿಸಿದ್ದರು. ಕಿವೀಸ್ ವಿರುದ್ಧದ ಏಕದಿನ ಸರಣಿಯ ಮೂರನೇ ಪಂದ್ಯದಲ್ಲಿ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಔಟ್ ಆದಾಗ ಕೊಹ್ಲಿ ಅವರು ಅಗ್ರೆಸೀವ್ ಆಗಿ ನಡೆದುಕೊಂಡಿದ್ದರು. ಇದನ್ನೇ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದ್ದ ಪತ್ರಕರ್ತ, ನಿನ್ನೆ ವಿಲಿಯಮ್ಸನ್ ಔಟ್ ಆದಾಗ ನೀವು ನಡೆದುಕೊಂಡ ರೀತಿಯ ಬಗ್ಗೆ ಏನು ಹೇಳುತ್ತೀರಾ? ಒಬ್ಬ ಭಾರತೀಯ ನಾಯಕನಾಗಿ ನೀವು ಒಳ್ಳೆಯ ಉದಾಹರಣೆಯಾಗಿರಬೇಕು ಎಂದು ಯೋಚಿಸುವುದಿಲ್ಲವಾ? ಎಂದು ಕೇಳಿದ್ದರು.

ಈ ವಿಚಾರಕ್ಕೆ ಕೆಂಡಾಮಂಡಲವಾಗಿದ್ದ ಕೊಹ್ಲಿ, ಏನ್ ಮಾತನಾಡುತ್ತಿದ್ದೀರಾ. ನೀವು ಅಲ್ಲಿ ಏನ್ ಆಯ್ತು ಎಂಬುದನ್ನು ತಿಳಿದುಕೊಂಡು ಬಂದು ನನಗೆ ಪ್ರಶ್ನೆ ಮಾಡಿ. ವಿಚಾರದ ಬಗ್ಗೆ ಅರ್ಧ ಮಾಹಿತಿ ಇಟ್ಟುಕೊಂಡು ಪ್ರಶ್ನೆ ಮಾಡಲು ಬರಬೇಡಿ. ನೀವು ವಿವಾದವನ್ನು ಮಾಡಬೇಕು ಎಂದು ಬಂದಿದ್ದರೆ ಇದು ಸರಿಯಾದ ಸ್ಥಳವಲ್ಲ. ನಾನು ಮ್ಯಾಚ್ ರೆಫರಿಯೊಂದಿಗೆ ಮಾತನಾಡಿದ್ದೇನೆ. ಅವರು ಯಾವುದೇ ಸಮಸ್ಯೆಯಿಲ್ಲ ಎಂದು ಹೇಳಿದ್ದಾರೆ ಎಂದು ಗರಂ ಆಗಿಯೇ ಉತ್ತರ ನೀಡಿದ್ದರು.

ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಕೊಹ್ಲಿ ಅವರು ಕಳಪೆ ಪ್ರದರ್ಶನ ತೋರಿದ್ದು, ಇಲ್ಲಿಯವರೆಗೂ ಒಂದು ಅರ್ಧ ಶತಕವಾಗಲಿ, ಶತಕವಾಗಲಿ ಸಿಡಿಸಿಲ್ಲ. ವಿರಾಟ್ ಕೊಹ್ಲಿ ಕಳೆದ 69 ದಿನಗಳಿಂದ ಎಲ್ಲಾ ಮೂರು ಸ್ವರೂಪಗಳಲ್ಲಿ (ಏಕದಿನ, ಟೆಸ್ಟ್ ಮತ್ತು ಟಿ20) ಒಂದೂ ಶತಕ ಗಳಿಸಿಲ್ಲ. ಕೊಹ್ಲಿ ತಮ್ಮ ಕ್ರಿಕೆಟ್ ವೃತ್ತಿಜೀವನದಲ್ಲಿ ಮೂರನೇ ಬಾರಿಗೆ ಇಂತಹ ವೈಫಲ್ಯವನ್ನು ಅನುಭವಿಸುತ್ತಿದ್ದಾರೆ.

ಈ ಅವಧಿಯಲ್ಲಿ ಕೊಹ್ಲಿ ಎಲ್ಲಾ ಮೂರು ಸ್ವರೂಪಗಳಲ್ಲಿ 22 ಇನ್ನಿಂಗ್ಸ್ ಆಡಿದ್ದಾರೆ. ಅವರು ಕೊನೆಯದಾಗಿ ಡಿಸೆಂಬರ್ 22 ರಂದು ಬಾಂಗ್ಲಾದೇಶದ ವಿರುದ್ಧ ಕೋಲ್ಕತ್ತಾದಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ 136 ರನ್ ಗಳಿಸಿದ್ದರು. ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ವಿರಾಟ್ ಕೊಹ್ಲಿ ಕಳಪೆ ಫಾರ್ಮ್ ನಿಂದಾಗಿ ನಂಬರ್-1 ಸ್ಥಾನದಿಂದ ಕೆಳಗೆ ಇಳಿದಿದ್ದಾರೆ. ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವ್ ಸ್ಮಿತ್ 911 ಅಂಕಗಳೊಂದಿಗೆ ಎಂಟನೇ ಬಾರಿಗೆ ಅಗ್ರಸ್ಥಾನಕ್ಕೆ ಏರಿದ್ದರೆ, ಕೊಹ್ಲಿ 906 ಅಂಕಗಳಿಂದ ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ. ಉಳಿದಂತೆ ಅಜಿಂಕ್ಯ ರಹಾನೆ 8ನೇ ಸ್ಥಾನ, ಚೇತೇಶ್ವರ ಪೂಜಾರ 9ನೇ ಸ್ಥಾನ ಹಾಗೂ ಮಾಯಾಂಕ್ ಅಗರ್ವಾಲ್ 10ನೇ ಸ್ಥಾನದಲ್ಲಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *