ಮಗುವಿನಂತೆ ಹಾರಿ ರೋಹಿತ್‍ರನ್ನು ಬಿಗಿದಪ್ಪಿ ಅಭಿನಂದಿಸಿದ ಕೊಹ್ಲಿ – ವಿಡಿಯೋ ವೈರಲ್

Public TV
2 Min Read

ಹ್ಯಾಮಿಲ್ಟನ್: ಟಿಮ್ ಸೌಥಿ ಎಸೆದ ಸೂಪರ್ ಓವರಿನ ಕೊನೆಯ ಎರಡು ಎಸೆತದಲ್ಲಿ ಸಿಕ್ಸರ್ ಸಿಡಿಸಿದ ರೋಹಿತ್ ಶರ್ಮಾ ಅವರನ್ನು ನಾಯಕ ವಿರಾಟ್ ಕೊಹ್ಲಿ ಮಗುವಿನಂತೆ ಹಾರಿ ಬಿಗಿದಪ್ಪಿಕೊಂಡ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

ಸೂಪರ್ ಓವರಿನಲ್ಲಿ 18 ರನ್ ಗಳ ಸವಾಲು ಪಡೆದ ಭಾರತ ಆರಂಭದಲ್ಲೇ ವಿಕೆಟ್ ಕಳೆದುಕೊಳ್ಳುವ ಸಾಧ್ಯತೆ ಇತ್ತು. ಟಿಮ್ ಸೌಥಿ ಎಸೆದ ಮೊದಲ ಓವರಿನ ಮೊದಲ ಎಸೆತದಲ್ಲಿ ಎರಡು ರನ್ ಕದಿಯಲು ಹೋಗಿದ್ದ ವೇಳೆ ರೋಹಿತ್ ಶರ್ಮಾ ರನ್ ಔಟ್ ಆಗುವ ಸಾಧ್ಯತೆಯಿತ್ತು. ಕೀಪರ್ ಕೈ ಸೇರಿ ಬಾಲ್ ಕೆಳಗಡೆ ಬಿದ್ದ ಪರಿಣಾಮ ರೋಹಿತ್ ಶರ್ಮಾ ಪಾರಾದರು.

ಎರಡನೇ ಎಸೆತದಲ್ಲಿ ಒಂದು ರನ್ ಬಂದರೆ ಮೂರನೇ ಎಸೆತವನ್ನು ರಾಹುಲ್ ಬೌಂಡರಿಗೆ ಅಟ್ಟಿದರು. ಕೊನೆಯ ಮೂರು ಎಸೆತದಲ್ಲಿ 11 ರನ್ ಬೇಕಿದ್ದಾಗ ನಾಲ್ಕನೇಯ ಎಸೆತದಲ್ಲಿ ರಾಹುಲ್ 1 ರನ್ ಓಡಿದರು. ಕೊನೆಯ ಎರಡು ಎಸೆತದಲ್ಲಿ 10 ರನ್ ಬೇಕಿತ್ತು. ಸಿಕ್ಸ್ ಹೊಡೆಯಲೇ ಬೇಕಾದ ಅನಿವಾರ್ಯತೆ ಇದ್ದಾಗ ರೋಹಿತ್ ಶರ್ಮಾ 5ನೇ ಎಸೆತವನ್ನು ಬೌಂಡರಿ ಲೈನ್ ಆಚೆಗೆ ಬಾಲ್ ತಳ್ಳುವ ಮೂಲಕ ಪಂದ್ಯವನ್ನು ಜೀವಂತವಾಗಿಟ್ಟರು. ಕೊನೆಯ ಎಸೆತದಲ್ಲಿ 4 ರನ್ ಬೇಕಿತ್ತು. ಪಂದ್ಯ ಏನಾಗುತ್ತದೋ ಏನೋ ಎನ್ನುವ ಆತಂಕದಲ್ಲಿದ್ದಾಗ ರೋಹಿತ್ ಶರ್ಮಾ ಕೊನೆಯ ಎಸೆತದಲ್ಲಿ ಸಿಕ್ಸರ್ ಸಿಡಿಸುವ ಮೂಲಕ ಭಾರತಕ್ಕೆ ಸ್ಮರಣೀಯ ಜಯವನ್ನು ತಂದುಕೊಟ್ಟರು.

ಸಿಕ್ಸ್ ಹೋಗುತ್ತಿದ್ದಂತೆ ಅಂಗಳದ ಬಳಿ ಪ್ಯಾಡ್ ಕಟ್ಟಿಕೊಂಡು ನಿಂತಿದ್ದ ವಿರಾಟ್ ಕೊಹ್ಲಿ ಓಡೋಡಿ ಬಂದು ಹಾರಿ ರೋಹಿತ್ ಶರ್ಮಾ ಅವರನ್ನು ಅಪ್ಪಿ ಅಭಿನಂದಿಸಿದರು. ಮೊಹಮ್ಮದ್ ಶಮಿ ಬೌಲಿಂಗ್ ಸಾಹಸ ಮತ್ತು ರೋಹಿತ್ ಶರ್ಮಾ ಅವರ ‘ಸೂಪರ್ ಸಿಕ್ಸರ್’ ಗಳ ಸಹಾಯದಿಂದ ಭಾರತ ಮೊದಲ ಬಾರಿಗೆ ಕಿವೀಸ್ ನೆಲದಲ್ಲಿ ಟಿ 20 ಸರಣಿ ಗೆದ್ದ ಸಾಧನೆ ಮಾಡಿತು. ಇದನ್ನೂ ಓದಿ: ಫಿಟ್ನೆಸ್ ವಿಡಿಯೋ ಹಂಚಿಕೊಂಡು ಅಭಿಮಾನಿಗಳಿಗೆ ಪ್ರೇರಣೆಯಾದ ಕ್ಯಾಪ್ಟನ್ ಕೊಹ್ಲಿ

https://twitter.com/GOATKingKohli/status/1222548633024729089

65 ರನ್ ಜೊತೆಗೆ ಸೂಪರ್ ಓವರಿನಲ್ಲಿ 15 ರನ್ ಹೊಡೆದ ರೋಹಿತ್ ಶರ್ಮಾ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಪಂದ್ಯದ ನಂತರ ಟ್ವೀಟ್ ಮಾಡಿ ಶಮಿ ಅವರನ್ನು ರೋಹಿತ್ ಅಭಿನಂದಿಸಿ, ವಾಟ್ ಎ ಗೇಮ್, ಶಮಿ ಓವರಿನಿಂದಾಗಿ ನಾವು ಪಂದ್ಯ ಗೆದ್ದಿದ್ದೇವೆ. ವಿಲಯಮ್ಸನ್ ಉತ್ತಮವಾಗಿ ಆಡಿದ್ದಾರೆ ಎಂದು ಬರೆದುಕೊಂಡಿದ್ದರು.

ಶಮಿ ಮ್ಯಾಜಿಕ್:
180 ರನ್ ಗಳ ಸವಾಲು ಪಡೆದ ನ್ಯೂಜಿಲೆಂಡಿಗೆ ಕೊನೆ 2 ಓವರ್ ಗಳಲ್ಲಿ ಜಯಗಳಿಸಲು 20 ರನ್ ಬೇಕಿತ್ತು. ಜಸ್‍ಪ್ರೀತ್ ಬುಮ್ರಾ ಎಸೆದ ಇನ್ನಿಂಗ್ಸ್ ನ 19ನೇ ಓವರ್ ನಲ್ಲಿ ರಾಸ್ ಟೇಲರ್ ಹಾಗೂ ವಿಲಿಯಮ್ಸನ್ ಜೋಡಿ 11 ರನ್ ಬಾರಿಸಿ ತಂಡವನ್ನು ಗೆಲುವಿನ ಹತ್ತಿರ ತಂದರು. 6 ಎಸೆತಗಳಲ್ಲಿ 9 ರನ್ ಅಗತ್ಯವಿದ್ದಾಗ ರಾಸ್ ಟೇಲರ್ ಮೊದಲ ಎಸೆತದಲ್ಲಿ ಸಿಕ್ಸ್ ಸಿಡಿಸಿ ಬಳಿಕ ಒಂಟಿ ರನ್ ಗಳಿಸಿದರು. ಆದರೆ 3ನೇ ಎಸೆತದಲ್ಲಿ ಮೊಹಮ್ಮದ್ ಶಮಿ ಕೇನ್ ವಿಲಿಯಮ್ಸನ್ ವಿಕೆಟ್ ಕಿತ್ತು ಪಂದ್ಯಕ್ಕೆ ರೋಚಕ ತಿರುವು ನೀಡಿದರು. 4ನೇ ಎಸೆತದಲ್ಲಿ ಯಾವುದೇ ರನ್ ಬಂದಿರಲಿಲ್ಲ. ಐದನೇ ಎಸೆತದಲ್ಲಿ ಸೀಫರ್ಟ್ ಓಡಿದ ಪರಿಣಾಮ ರೋಸ್ ಟೇಲರ್ ಕ್ರೀಸಿಗೆ ಬಂದರು. ಬೈ ಮೂಲಕ ಒಂದು ರನ್ ಬಂದ ಕಾರಣ ನ್ಯೂಜಿಲೆಂಡ್ ಗೆಲ್ಲಲು ಕೊನೆಯ ಎಸೆತದಲ್ಲಿ ಒಂದು ರನ್ ಬೇಕಿತ್ತು. ಆದರೆ ಶಮಿ ಎಸೆದ ಬಾಲ್ ಟೇಲರ್ ಬ್ಯಾಟ್ ವಂಚಿಸಿ ನೇರವಾಗಿ ವಿಕೆಟಿಗೆ ಬಡಿದ ಪರಿಣಾಮ ಪಂದ್ಯ ಸೂಪರ್ ಓವರ್ ಕಡೆ ತಿರುಗಿತು.

Share This Article
Leave a Comment

Leave a Reply

Your email address will not be published. Required fields are marked *