ಜಸ್‍ಪ್ರೀತ್ ಬುಮ್ರಾಗೆ ಪ್ರತಿಷ್ಠಿತ ಪ್ರಶಸ್ತಿ

Public TV
2 Min Read

ಮುಂಬೈ: ಅದ್ಭುತ ಬೌಲಿಂಗ್ ಪ್ರದರ್ಶನದಿಂದ ಮಿಂಚುತ್ತಿರುವ ಟೀಂ ಇಂಡಿಯಾ ವೇಗಿ ಜಸ್‍ಪ್ರೀತ್ ಬುಮ್ರಾ ಅವರು ಮತ್ತೊಂದು ಹಿರಿಮೆಗೆ ಪಾತ್ರರಾಗಿದ್ದಾರೆ.

2018-19 ವರ್ಷದ ಬಿಸಿಸಿಐ ಪ್ರಶಸ್ತಿ ಪಟ್ಟಿ ಬಿಡುಗಡೆಯಾಗಿದ್ದು, ಪಾಲಿ ಉಮ್ರಿಗರ್ ಪ್ರಶಸ್ತಿಗೆ ಬುಮ್ರಾ ಭಾಜನರಾಗಿದ್ದಾರೆ. ಮುಂಬೈನಲ್ಲಿ ಭಾನುವಾರ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಮಹಿಳೆಯ ವಿಭಾಗದಲ್ಲಿ ವರ್ಷದ ಅತ್ಯುತ್ತಮ ಅಂತರರಾಷ್ಟ್ರೀಯ ಕ್ರಿಕೆಟಿರ್ ಪ್ರಶಸ್ತಿಗೆ ಪೂನಂ ರೌತ್ ಪಾತ್ರರಾಗಿದ್ದಾರೆ. ಅವರು ಇತ್ತೀಚೆಗೆ ಅರ್ಜುನ್ ಪ್ರಶಸ್ತಿ ಪಡೆದುಕೊಂಡಿದ್ದರು.

ಬುಮ್ರಾ ಏಕದಿನದಲ್ಲಿ ವಿಶ್ವದ ನಂ.1 ಬೌಲರ್:
ವಿಶ್ವದ ನಂಬರ್ ಒನ್ ಏಕದಿನ ಬೌಲರ್ ಬುಮ್ರಾ 2018ರ ಜನವರಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಪಂದ್ಯಕ್ಕೆ ಪಾದಾರ್ಪಣೆ ಮಾಡಿದ್ದರು. ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್‍ನಲ್ಲಿ ನಡೆದ ಇನ್ನಿಂಗ್ಸ್ ನಲ್ಲಿ ಐದಕ್ಕೂ ಹೆಚ್ಚು ವಿಕೆಟ್‍ಗಳನ್ನು ಪಡೆದ ಏಕೈಕ ಏಷ್ಯಾದ ಬೌಲರ್ ಎಂಬ ಗರಿಮೆ ಬುಮ್ರಾ ಅವರಿಗಿದೆ. ಬುಮ್ರಾ ಟೆಸ್ಟ್‍ನಲ್ಲಿ 62 ಮತ್ತು ಏಕದಿನ ಪಂದ್ಯಗಳಲ್ಲಿ 103 ವಿಕೆಟ್‍ಗಳನ್ನು ಪಡೆದಿದ್ದಾರೆ.

ಜಸ್‍ಪ್ರೀತ್ ಬುಮ್ರಾ ಶ್ರೀಲಂಕಾದ ವಿರುದ್ಧ ನಡೆದ ಕೊನೆಯ ಹಾಗೂ ಮೂರನೇ ಟಿ20 ಪಂದ್ಯದಲ್ಲಿ ಒಂದು ವಿಕೆಟ್ ಪಡೆಯುವ ಮೂಲಕ ಅಂತರಾಷ್ಟ್ರೀಯ ಟಿ20 ಕ್ರಿಕೆಟ್‍ನಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆ ಬರೆದಿದ್ದಾರೆ. 2016ರಲ್ಲಿ ಟಿ20 ಪ್ರವೇಶ ಮಾಡಿದ್ದ ಬುಮ್ರಾ 44 ಇನ್ನಿಂಗ್ಸ್ ಆಡಿ 53 ವಿಕೆಟ್ ಪಡೆದಿದ್ದಾರೆ. ಇನ್ನು ತಲಾ 52 ವಿಕೆಟ್ ಪಡೆದಿರುವ ಸ್ಪಿನ್ನರ್ ಗಳಾದ ಯಜುವೇಂದ್ರ ಚಾಹಲ್ ಹಾಗೂ ಆರ್.ಅಶ್ವಿನ್ ಎರಡನೇ ಸ್ಥಾನದಲ್ಲಿದ್ದಾರೆ.

ಮಾಜಿ ಕ್ರಿಕೆಟಿಗ ಕೆ.ಕೆ.ಶ್ರೀಕಾಂತ್ ಅವರು ಕರ್ನಲ್ ಸಿಕೆ ನಾಯ್ಡು ಜೀವಮಾನ ಸಾಧನೆ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಮಹಿಳೆಯರ ವಿಭಾಗದಲ್ಲಿ ಅಂಜುಮ್ ಚೋಪ್ರಾ ಅವರಿಗೆ ಬಿಸಿಸಿಐ ಜೀವಮಾನ ಸಾಧನೆ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

2018-19ರಲ್ಲಿ ನಡೆದ ಟೆಸ್ಟ್ ಪಂದ್ಯಗಳಲ್ಲಿ ಹೆಚ್ಚು ರನ್ ಗಳಿಸಿದ ಚೇತೇಶ್ವರ ಪೂಜಾರ ಅವರು ದಿಲೀಪ್ ಸರ್ದೇಸಾಯಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅವರು ಎಂಟು ಟೆಸ್ಟ್ ಗಳಲ್ಲಿ 52.07 ಸರಾಸರಿಯಲ್ಲಿ 677 ರನ್ ಗಳಿಸಿದ್ದಾರೆ. ಮಾಯಾಂಕ್ ಅಗರ್ವಾಲ್ ಮತ್ತು ಮಹಿಳೆಯರಲ್ಲಿ ಶೆಫಾಲಿ ವರ್ಮಾ ಅತ್ಯುತ್ತಮ ಅಂತರರಾಷ್ಟ್ರೀಯ ಚೊಚ್ಚಲ ಪ್ರಶಸ್ತಿಗೆ ಪಾತ್ರರಾಗಲಿದ್ದಾರೆ. ಮೂರು ಶತಕಗಳು ಮತ್ತು ಮೂರು ಅರ್ಧಶತಕಗಳ ಸಹಾಯದಿಂದ ಮಾಯಾಂಕ್ ಒಂಬತ್ತು ಟೆಸ್ಟ್ ಪಂದ್ಯಗಳಲ್ಲಿ 67.07. ಸರಾಸರಿಯಲ್ಲಿ 872 ರನ್ ಗಳಿಸಿದ್ದಾರೆ. ಅದೇ ಸಮಯದಲ್ಲಿ ಶೆಫಾಲಿ ಒಂಬತ್ತು ಟಿ20ಗಳಲ್ಲಿ 222 ರನ್ ಗಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *