ಶಾಲೆ ಇಲ್ಲದೇ 2 ವರ್ಷದಿಂದ ಮನೆ-ಮನೆ ಅಲೆಯುತ್ತಿರುವ ಶಿಕ್ಷಕರು, ಮಕ್ಕಳು

Public TV
2 Min Read

ಮಂಡ್ಯ: ಎಲ್ಲಾ ವ್ಯವಸ್ಥೆಗಳು ಇದ್ದರೂ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸುವವರ ಸಂಖ್ಯೆಯೇ ಕಡಿಮೆ. ಸರ್ಕಾರಿ ಶಾಲೆಗಳ ಸ್ಥಿತಿ ಇಂತಹ ಹಂತದಲ್ಲಿ ಇರಬೇಕಾದರೆ ಮಂಡ್ಯ ಜಿಲ್ಲೆಯ ಗ್ರಾಮವೊಂದರಲ್ಲಿ ಶಾಲೆಗೆ ಕಟ್ಟಡವಿಲ್ಲದೇ ನಿಮ್ಮನೆಯಲ್ಲಿ ಸ್ವಲ್ಪ ಜಾಗ ಕೊಡ್ತೀರಾ ಮಕ್ಕಳಿಗೆ ಪಾಠ ಮಾಡುತ್ತೇವೆ ಎಂದು ಶಿಕ್ಷಕರು ಮನೆ ಮನೆಗೆ ಅಲೆಯುವ ದುಸ್ಥಿತಿಗೆ ತಲುಪಿದ್ದಾರೆ.

ಹೌದು, ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಅರಲಿಂಗನದೊಡ್ಡಿ ಗ್ರಾಮದ ಕಿರಿಯ ಪ್ರಾಥಮಿಕ ಶಾಲೆಯನ್ನು ಕಳೆದ ಎರಡು ವರ್ಷಗಳ ಹಿಂದೆ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಗಾಗಿ ಒಡೆದು ಹಾಕಲಾಗಿದೆ. ಅಂದಿನಿಂದ ಇಂದಿನವರೆಗೆ ಶಾಲೆ ಕಟ್ಟಡ ನಿರ್ಮಾಣ ಮಾಡದ ಕಾರಣ ಇಲ್ಲಿನ ಶಾಲೆಯ ಮಕ್ಕಳನ್ನು ಶಿಕ್ಷಕರು ಅರಳಿ ಮರ, ದೇವಸ್ಥಾನದಲ್ಲಿ ಕೂರಿಸಿಕೊಂಡು ಪಾಠ ಹೇಳಿಕೊಡುತ್ತಾ ಇದ್ದರು.

ಆದರೆ ಇದೀಗ ಒಂದು ವಾರದಿಂದ ಮಳೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಶಿಕ್ಷಕರು ಬೀದಿ ಬೀದಿ ಅಲೆದು ಗ್ರಾಮದ ಒಬ್ಬರ ಮನೆಯನ್ನು ಪಡೆದುಕೊಂಡು ಪಾಠ ಮಾಡುತ್ತಿದ್ದಾರೆ. ಆ ಮನೆಯಲ್ಲಿ ಇರುವುದು ಒಂದೇ ಕೊಠಡಿ. ಅಲ್ಲೇ 1 ರಿಂದ 5ನೇ ತರಗತಿಯವರೆಗೆ ಮಕ್ಕಳು ಪಾಠ ಕೇಳುತ್ತಿದ್ದಾರೆ. ಅಷ್ಟೇ ಅಲ್ಲದೇ ಅದೇ ಕೊಠಡಿಯಲ್ಲಿರುವ ಅಡುಗೆ ಸಾಮಾಗ್ರಿಗಳು, ಆಫೀಸ್ ರೂಂನ ಸಾಮಾಗ್ರಿಗಳೆಲ್ಲವೂ ಇದೆ.

ಆ ಕೊಠಡಿಯು ಶೀಟ್‍ನಿಂದ ನಿರ್ಮಾಣವಾಗಿದ್ದರಿಂದ ಮಳೆ ಬಂದರೆ ಸೋರುತ್ತದೆ. ಈ ಸಂಕಷ್ಟದಲ್ಲಿ ಪಾಠ ಕೇಳುತ್ತಿರುವ ಮಕ್ಕಳು ದಯವಿಟ್ಟು ನಮಗೆ ಸ್ಕೂಲ್ ಕಟ್ಟಿಸಿಕೊಡಿ ಎಂದು ಕೈ ಮುಗಿದು ಕೇಳಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.

ಎರಡು ವರ್ಷವಾದರೂ ಸ್ಕೂಲ್ ಯಾಕೆ ಕಟ್ಟಿಲ್ಲ ಎಂದು ಎಲ್ಲರೂ ಪ್ರಶ್ನೆ ಮಾಡಬಹುದು. ಇದಕ್ಕೆ ಅಸಲಿ ಕಥೆ ಇಲ್ಲಿದೇ ನೋಡಿ. ಈ ಮೊದಲು ಸುಮಾರು 30 ಗುಂಟೆಗೂ ಅಧಿಕ ವ್ಯಾಪ್ತಿಯಲ್ಲಿ ಶಾಲೆ ಇತ್ತು. ರಸ್ತೆಗಾಗಿ ಶಾಲೆಯನ್ನು ಒಡೆದಿದ್ದರು. ಆ ಜಾಗವನ್ನು ಆಕ್ರಮಿಸಿಕೊಂಡ ನಂತರ ಉಳಿದಿರೋದು ಕೇವಲ ಎರಡು ಗುಂಟೆ ಜಾಗವಾಗಿತ್ತು. ಇದನ್ನೂ ಓದಿ: ಆಜಾನ್ ವಿರೋಧಿಸಿ ಜಮ್ಮು ಕಾಲೇಜು ವಿದ್ಯಾರ್ಥಿಗಳಿಂದ ಹನುಮಾನ್ ಚಾಲೀಸಾ ಪಠಣ

ಈ ಎರಡು ಗುಂಟೆಯಲ್ಲಿ ಮುಂದೆ ಬರುವ ಬೈಪಾಸ್ ರಸ್ತೆಗೆ ಒಂದು ಗುಂಟೆ ಹೋಗಲಿದ್ದು, ಉಳಿಯೋದು ಒಂದು ಗುಂಟೆಯಷ್ಟು ಜಾಗವಷ್ಟೇ ಆಗಿದೆ. ಶಾಲೆ ಬಿಲ್ಡಿಂಗ್ ಒಡೆದ ದಿನವೇ ಹೆದ್ದಾರಿ ಪ್ರಾಧಿಕಾರ ಬಿಲ್ಡಿಂಗ್ ಜಾಗಕ್ಕೆ 68 ಲಕ್ಷ ರೂ. ಹಣವನ್ನು ನೀಡಿದೆ. ಆದರೆ ಇಲ್ಲಿನ ಜನರು ಒಂದು ಗುಂಟೆಯಲ್ಲಿ ಶಾಲೆ ಕಟ್ಟೋಕೆ ಆಗಲ್ಲ. 68 ಲಕ್ಷದಲ್ಲಿ ಮೊದಲು 5 ಗುಂಟೆ ಜಾಗ ಖರೀದಿ ಮಾಡಿ, ನಂತರ ಶಾಲೆ ಕಟ್ಟಿ ಎಂದು ಒತ್ತಾಯಿಸಿದ್ದಾರೆ. ಆದರೆ ಜನಪ್ರತಿನಿಧಿಗಳು, ಅಧಿಕಾರಿಗಳು ಈ ಜಾಗದಲ್ಲೇ ನಾವು 68 ಲಕ್ಷ ರೂ. ಖರ್ಚು ಮಾಡಿ ಶಾಲೆ ಕಟ್ಟುತ್ತೇವೆಂದು ಅಂದಾಜು ಖರ್ಚನ್ನು ಲೆಕ್ಕಚಾರ ಮಾಡಿದ್ದಾರೆ.

ಈ ಲೆಕ್ಕಚಾರ ನೋಡಿದರೆ ಎಂಥವರು ತಲೆ ತಿರುಗಿ ಬೀಳೋದು ಗ್ಯಾರಂಟಿ. ಬಾತ್ ರೂಂ – 11,26126 ರೂ, ಅಡುಗೆ ಮನೆ – 10,04,388 ರೂ, ಕೆಳ ಮಹಡಿ – 26,03,455 ರೂ, ಮೊದಲ ಮಹಡಿ 16,44,581, ಕಾಂಪೌಂಡ್ ನಿರ್ಮಾಣಕ್ಕೆ 4,20,452 ರೂಗಳನ್ನು ನಿರ್ಮಿತಿ ಕೇಂದ್ರ ಅಧಿಕಾರಿಗಳು ಬ್ಲೂಪ್ರಿಂಟ್ ರೆಡಿ ಮಾಡಿದ್ದಾರೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಈ ವರ್ತನೆ ನೋಡಿ, ಕಮಿಷನ್ ಆಸೆಗೆ ಹೀಗೆ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಜನ, ನಮ್ಮೂರಲ್ಲಿ ಒಂದು ಸುಸರ್ಜಿ ಶಾಲೆಯಾಗಬೇಕು ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ದೊರಕಬೇಕೆಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಅಮಿತ್ ಶಾ ಭೇಟಿ ಮಾಡಿಲ್ಲ, ಫೋನ್‍ನಲ್ಲಿ ಮಾತುಕತೆ: ಸಿಎಂ ಬೊಮ್ಮಾಯಿ

Share This Article
Leave a Comment

Leave a Reply

Your email address will not be published. Required fields are marked *