ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಎಲ್ಲಾ ಕೆಲಸವನ್ನು ಮಾಡ್ತಾರೆ ಮಕ್ಕಳು..!

Public TV
2 Min Read

ಚಿಕ್ಕಮಗಳೂರು: ಅಂದು ಮಹಾಭಾರತದ ಗಾಂಧಾರಿ ಗಂಡನಿಗೆ ಕಣ್ಣಿಲ್ಲ ಎಂದು ಕಣ್ಣಿದ್ದು ತಾನೂ ಕುರುಡಳಾಗಿದ್ಲು. ಇಂದು ಕಾಫಿನಾಡ ಮಕ್ಕಳು ಕೂಡ ಕಣ್ಣಿದ್ದು ಕುರುಡರಾಗೇ ಓದೋದು, ಬರೆಯೋದು, ಟಿವಿ ನೋಡೋದು, ಸೈಕಲ್-ಬೈಕ್ ಓಡ್ಸೋದು ಮಾಡ್ತಿದ್ದಾರೆ.

ಹೌದು, ಜಿಲ್ಲೆಯ ಆಲ್ದೂರಿನ ಶಾಲೆಯಲ್ಲಿ ಕಣ್ಣಿದ್ದರೂ ಸಹ ಥೇಟ್ ಗಾಂಧಾರಿಯ ರೀತಿ ಕಣ್ಣಿಗೆ ಬಟ್ಟೆ ಕಟ್ಕೊಂಡಿರೋ ಮಕ್ಕಳು ತಮ್ಮ ಮುಂದೆ ಏನಿದೇ ಅನ್ನೋದನ್ನ ಹೇಳುತ್ತಾರೆ. ಪುಸ್ತಕಗಳನ್ನ ಓದ್ತಾರೆ, ಬರೀತಾರೆ ಹಾಗೂ ತೋರಿಸಿದ ಬಣ್ಣವನ್ನ ಸರಿಯಾಗಿ ಹೇಳ್ತಾರೆ. ಆಲ್ದೂರಿ ಶಾಲೆಯ ಶಿಕ್ಷಕ ಪದ್ಮನಾಭ್ ಭಟ್ ಅವರ ಮಾರ್ಗದರ್ಶನದಲ್ಲಿ ಈ ಗಾಂಧಾರಿ ವಿದ್ಯೆಯನ್ನ ಕರಗತ ಮಾಡ್ಕೊಂಡಿದ್ದಾರೆ ಇಲ್ಲಿನ ವಿದ್ಯಾರ್ಥಿಗಳು. ಕಣ್ಣಿಗೆ ಬಟ್ಟೆ ಕಟ್ಟಿಕೊಂಡೆ ವಿದ್ಯಾರ್ಥಿಗಳು ಸಲೀಸಾಗಿ ಬೈಕ್ ಓಡಿಸ್ತಾರೆ, ಟಿವಿ ನೋಡ್ತಾರೆ. ಇದನ್ನೆಲ್ಲ ನೋಡಿದವರು ಅಚ್ಚರಿ ಪಡುವುದು ಸಾಮಾನ್ಯ. ಕಣ್ಣು ಬಿಟ್ಟುಕೊಂಡೆ ಕೆಲವೊಮ್ಮೆ ಸರಿಯಾಗಿ ಓದೋಕೆ ಬರಿಯೋಕೆ ಆಗಲ್ಲ ಅಂತದ್ರಲ್ಲಿ ಕಣ್ಣು ಮುಚ್ಚಿಕೊಂಡು ಹೇಗೆ ಈ ಕೆಲಸವನ್ನು ಮಾಡ್ತಾರೆ ಮಕ್ಕಳು ಅಂತ ಎಲ್ಲರಲ್ಲಿ ಸಾಲು ಸಾಲು ಪ್ರಶ್ನೆ ಹುಟ್ಟುತ್ತಲೇ ಇರುತ್ತೆ.

ಕಣ್ಣು ಮುಚ್ಚಿಕೊಂಡು ಮಕ್ಕಳು ಎಲ್ಲವನ್ನು ಲೀಲಾಜಾಲವಾಗಿ ಮಾಡುತ್ತಾರೆ ಅಂದರೆ ಅದಕ್ಕೆ ಕಾರಣ ಗಾಂಧಾರಿ ವಿದ್ಯೆ. ಈ ವಿದ್ಯೆ ಕಲಿತೋರ ಕೈಗೆ ಏನೇ ಕೊಟ್ರು ಅದರಲ್ಲಿ ಏನ್ ಬರೆದಿದೆ ಅಂತ ಕೇಳಿದರೆ ಕ್ಷಣಾರ್ಧದಲ್ಲೆ ಸರಿಯಾಗಿ ಉತ್ತರಿಸುತ್ತಾರೆ. ಶಿಕ್ಷಕ ಪದ್ಮನಾಭ್ ಭಟ್ ಅವರ ತಮ್ಮ ವಿದ್ಯಾರ್ಥಿಗಳಿಗೆ ಗಾಂಧಾರಿ ವಿದ್ಯೆಯನ್ನು ಕಲಿಸಿದ್ದಾರೆ. ಅದು ಕೇವಲ ಹತ್ತೇ ದಿನದಲ್ಲಿ ಈ ವಿದ್ಯೆ ಕಲಿತ ಮಕ್ಕಳು ಆಟ-ಪಾಠಗಳಲ್ಲಿ ಮುಂದಿದ್ದಾರೆ.

ಏನಿದು ಗಾಂಧಾರಿ ವಿದ್ಯೆ?
ಕಣ್ಣಿಗೆ ಬಟ್ಟೆ ಕಟ್ಕೊಂಡ್ ಮೂರನೇ ಕಣ್ಣಿನಿಂದ ನೋಡೋ ವಿದ್ಯೆಗೆ ಗಾಂಧಾರಿ ವಿದ್ಯೆ ಅಂತಾರೆ. ಶಿವನಿಗೆ ಮೂರನೇ ಕಣ್ಣಿದೆ ಅಂತ ಕೇಳಿರುತ್ತೇವೆ. ಅದೇ ಕಣ್ಣು ಮನುಷ್ಯ, ಪ್ರಾಣಿ-ಪಕ್ಷಿಗಳಿಗೂ ಇರುತ್ತೆ ಅನ್ನೋದು ಈ ವಿದ್ಯೆಯ ಸಾರಾಂಶ. ಶರೀರದಲ್ಲಿನ 72 ಸಾವಿರ ನಾಡಿಗಳಲ್ಲಿನ ಹಿಡನಾಡಿ, ಪಿಂಗಳನಾಡಿ ಹಾಗೂ ಶುಷಮ್ನನಾಡಿ ಸಹಾಯದಿಂದ ಈ ವಿದ್ಯೆ ಕರಗತವಾಗುತ್ತೆ. ಇವುಗಳ ಜೊತೆ, ಮೂಲಾಧಾರ, ಸ್ವಾಧಿಷ್ಠಾನ, ಮಣಿಪುರಕ, ಅನಾಥ, ವಿಶುದ್ಧಿ, ಆಜ್ಞಾ, ಸಹಸ್ರರ ಎಂಬ ಏಳು ಸುಪ್ತ ಚಕ್ರಗಳು ಕೆಲಸ ಮಾಡುತ್ತವೆ. ಇದರಲ್ಲಿ ಆಜ್ಞಾ ಚಕ್ರಕ್ಕೆ ಸೂಕ್ಷ್ಮ ವಿಚಾರವನ್ನ ಗ್ರಹಿಸುವ ಶಕ್ತಿ ಇದೆ. ಇದನ್ನ ಬಳಸಿ ಮಕ್ಕಳು ಧ್ಯಾನ ಮತ್ತು ಪ್ರಾಣಾಯಾಮದ ಮೂಲಕ ಬೇಗ ಜಾಗೃತಿಯಾಗ್ತಾರೆ.

ಈ ಗಾಂಧಾರಿ ವಿದ್ಯೆಯನ್ನ ನೀವು ನಿಮ್ಮ ಮಕ್ಕಳಿಗೆ ಮನೆಯಲ್ಲೇ ಹೇಳಿಕೊಡಬಹುದು. ಮಕ್ಕಳಲ್ಲಿ ಏಕಾಗ್ರತೆ ಇಲ್ಲಾ ಎಂದು ಕೊರಗೋ ಪೋಷಕರು ಪ್ರತಿ ದಿನ ಅರ್ಧ ಗಂಟೆ ಮಕ್ಕಳಿಗೆ ಟೈಂ ಕೊಟ್ಟು, ಅವರ ಎರಡು ಹುಬ್ಬುಗಳ ಮಧ್ಯೆ ಬೆರಳಿಟ್ಟು ಧ್ಯಾನ ಹಾಗೂ ಪ್ರಾಣಾಯಾಮ ಮಾಡಿಸುವುದರಿಂದ ನಿಮ್ಮ ಮಕ್ಕಳಲ್ಲಿ ಏಕಾಗ್ರತೆ ಮೂಡುತ್ತದೆ ಎಂದು ಶಿಕ್ಷಕ ಪದ್ಮನಾಭ್ ಭಟ್ ಹೇಳುತ್ತಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *