ತನಗೆ ಕೊರೊನಾ ಇದೆ ಎಂದು ಭಾವಿಸಿ ಆತ್ಮಹತ್ಯೆಗೆ ಶರಣಾದ ಶಿಕ್ಷಕ – ಡೆತ್‍ನೋಟ್ ವೈರಲ್

Public TV
2 Min Read

– ಉಸಿರಾಟದ ತೊಂದರೆ, ಕೆಮ್ಮು ಬಂದಿದ್ದಕ್ಕೆ ಕೊರೊನಾವೆಂದು ಭಾವಿಸಿದ
– ವೈರಲ್ ಪೋಸ್ಟ್ ಬಗ್ಗೆ ಪೊಲೀಸರ ಸ್ಪಷ್ಟನೆ

ರಾಂಚಿ: ತನಗೆ ಕೊರೊನಾ ವೈರಸ್ ಸೋಂಕು ತಗುಲಿದೆ ಎಂದು ಭಾವಿಸಿ, ಖಿನ್ನತೆಗೊಳಗಾಗಿ ಸಾಮಾಜಿಕ ಜಾಲತಾಣದಲ್ಲಿ ಡೆತ್‍ನೋಟ್ ಬರೆದು ಪೋಸ್ಟ್ ಮಾಡಿ ಶಿಕ್ಷಕನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಾರ್ಖಂಡ್‍ನ ಗಿರಿದಿಹ್ ಜಿಲ್ಲೆಯಲ್ಲಿ ನಡೆದಿದೆ.

ಗಿರಿದಿಹ್‍ನ ಬಿರ್ನಿ ಪೊಲೀಸ್ ಠಾಣೆ ವ್ಯಾಪ್ತಿಯ ಬೈದಪಹ್ರಿ ಗ್ರಾಮದ ನಿವಾಸಿ ಸುರೇಶ್ ಪಂಡಿತ್(28) ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಖಾಸಗಿ ಶಾಲೆಯೊಂದರಲ್ಲಿ ಇಂಗ್ಲಿಷ್ ಶಿಕ್ಷಕನಾಗಿದ್ದ ಈತ ಕೆಮ್ಮು ಮತ್ತು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ. ಹೀಗಾಗಿ ತಾನು ಕೊರೊನಾ ವೈರಸ್ ಸೋಂಕಿಗೆ ತುತ್ತಾಗಿದ್ದೇನೆ ಎಂದು ಭಾವಿಸಿ ಸುರೇಶ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆಗೂ ಮುನ್ನಾ ನನಗೆ ಕೊರೊನಾ ಇದೆ ಎಂದು ಡೆತ್‍ನೋಟ್ ಬರೆದು ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಸುರೇಶ್ ಪೋಸ್ಟ್ ಮಾಡಿದ್ದಾನೆ.

ಮೃತನ ಕುಟುಂಬ ಸದಸ್ಯರು ಸೋಮವಾರವೇ ಸುರೇಶ್‍ನ ಅಂತ್ಯಸಂಸ್ಕಾರ ಮಾಡಿದ್ದಾರೆ. ಆದರೆ ಆತ ಬರೆದು ಪೋಸ್ಟ್ ಮಾಡಿದ್ದ ಡೆತ್‍ನೋಟ್ ಈಗಲೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಡೆತ್‍ನೋಟ್‍ನಲ್ಲಿ ಸುರೇಶ್ ತಾನು ಕೊರೊನಾ ಸೋಂಕಿಗೆ ತುತ್ತಾಗಿದ್ದೇನೆ ಎಂದು ಬರೆದುಕೊಂಡಿದ್ದಾನೆ. ಮೂರು ಪುಟಗಳ ನೋಟ್ ಬರೆದು ಆತ್ಮಹತ್ಯೆಗೆ ಶರಣಾಗಿದ್ದಾನೆ. ನನಗೆ ಸೋಂಕು ತಗುಲಿದೆ ಎಂದು ಸೆಲ್ಫ್ ಕ್ವಾರಂಟೈನ್ ಆಗಿದ್ದೆ. ಯಾರನ್ನೂ ನನ್ನ ಹತ್ತಿರ ಬರಲು ಬಿಡುತ್ತಿರಲಿಲ್ಲ. ನನಗೆ ಕೊರೊನಾ ಇದೆ ಎಂದು ತಿಳಿಯಲು ತಡವಾಗಿತ್ತು. ಬೇರೆ ದಾರಿಯಿಲ್ಲದೇ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಡೆತ್‍ನೋಟ್‍ನಲ್ಲಿ ಸುರೇಶ್ ಬರೆದುಕೊಂಡಿದ್ದಾನೆ.

ಈ ಡೆತ್‍ನೋಟ್ ವೈರಲ್ ಆಗುತ್ತಿದ್ದಂತೆ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡಿದ್ದು, ಸುರೇಶ್‍ಗೆ ಯಾವುದೇ ಸೋಂಕು ತಗುಲಿಲ್ಲ. ಆತ ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಸ್ಟಷ್ಟಪಡೆಸಿದ್ದಾರೆ. ಸುರೇಶ್ ಕೆಲವು ದಿನಗಳ ಹಿಂದೆ ವಿವಾಹ ಸಮಾರಂಭವೊಂದಕ್ಕೆ ತೆರೆಳಿದ್ದ. ಅಲ್ಲಿ ಯಾರಿಂದಲೋ ತನಗೆ ಸೋಂಕು ತಗುಲಿದೆ ಎಂದು ಆತ ಭಾವಿಸಿದ್ದನು. ತಪಾಸಣೆಗಾಗಿ ಏಪ್ರಿಲ್ 18ರಂದು ಬಿರ್ನಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ತೆರೆಳಿದ್ದನು, ವರದಿ ನೆಗೆಟೀವ್ ಬಂದ ಕಾರಣಕ್ಕೆ ಆತನನ್ನು ಮನೆಗೆ ಕಳುಹಿಸಿದ್ದರು. ಆದರೆ ಸುರೇಶ್ ಮಾತ್ರ ತನಗೆ ಸೋಂಕು ತಗುಲಿದೆ ಎಂದು ಖಿನ್ನತೆಗೆ ಒಳಗಾಗಿದ್ದ. ಖಿನ್ನತೆಯಿಂದ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತನಿಗೆ ಯಾವುದೇ ಸೋಂಕು ತಗುಲಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *