ಮೊದಲು ದೇಶ ನಂತರ ವ್ಯಾಪಾರ- ಪಾಕ್‍ಗೆ ಚಹಾ ರಫ್ತು ನಿಲ್ಲಿಸಲು ಸಿದ್ಧ ಎಂದ ಚಹಾ ರಫ್ತುದಾರರು

Public TV
2 Min Read

ನವದೆಹಲಿ: ಪುಲ್ವಾಮದಲ್ಲಿ ನಡೆದ ಉಗ್ರರ ದಾಳಿಯಿಂದ ಯೋಧರು ಹುತಾತ್ಮರಾಗಿರುವುದಕ್ಕೆ ಸಿಡಿದೆದ್ದಿರುವ ಭಾರತ ಸರ್ಕಾರ, ಪಾಕಿಸ್ತಾನವನ್ನು ಅತ್ಯಾಪ್ತ ರಾಷ್ಟ್ರ ಸ್ಥಾನದಿಂದ ಕಿತ್ತೊಗೆದಿದೆ. ಇದರಿಂದ ಉಭಯ ರಾಷ್ಟ್ರಗಳ ನಡುವೆ ಇದ್ದ ಹಲವು ರೀತಿ ವ್ಯವಹಾರ ಸಂಬಂಧಗಳು ಮುರಿದು ಬಿದ್ದಿದ್ದು, ಪಾಕಿಸ್ತಾನಕ್ಕೆ ಚಹಾ ರಫ್ತು ನಿಲ್ಲಿಸಲು ಸಿದ್ಧ ಎಂದು ಭಾರತೀಯ ಚಹಾ ಪೂರೈಕೆದಾರರ ಒಕ್ಕೂಟ (ಐಟಿಇಎ) ಮುಖ್ಯಸ್ಥ ಅನ್ಶುಮನ್ ಕನೋರಿಯಾ ತಿಳಿಸಿದ್ದಾರೆ.

ಭಾರತದಿಂದ ಪಾಕಿಸ್ತಾನಕ್ಕೆ ಪ್ರತಿವರ್ಷ ಸುಮಾರು 150 ಕೋಟಿ ರೂ. ಮೌಲ್ಯದ ಚಹಾವನ್ನು ರಫ್ತು ಮಾಡಲಾಗುತ್ತಿತ್ತು. ಚಹಾ ಮಂಡಳಿಯ ವರದಿ ಪ್ರಕಾರ 2018ರಲ್ಲಿ ಸುಮಾರು 154.71 ಕೋಟಿ ರೂ. ಮೌಲ್ಯದ 1.58 ಕೋಟಿ ಕೆ.ಜಿ ಚಹಾವನ್ನು ಪಾಕಿಸ್ತಾನಕ್ಕೆ ಪೂರೈಕೆ ಮಾಡಲಾಗಿತ್ತು. ಆದ್ರೆ ಪುಲ್ವಾಮ ಉಗ್ರರ ದಾಳಿಯಿಂದ ಉಭಯ ರಾಷ್ಟ್ರಗಳ ನಡುವೆ ಭಾರಿ ಬಿಕ್ಕಟ್ಟು ಸೃಷ್ಟಿಯಾಗಿದ್ದು, ಈ ವಿಚಾರದಲ್ಲಿ ಕೇಂದ್ರ ಸರ್ಕಾರದ ನಿರ್ಧಾರನ್ನು ಬೆಂಬಲಿಸುತ್ತೇವೆ ಎಂದು ಚಹಾ ಪೂರೈಕೆದಾರರ ಒಕ್ಕೂಟ ಹೇಳಿದೆ. ಅಲ್ಲದೆ ನಮಗೆ ನಷ್ಟವಾದರೂ ಸರಿ ನಾವು ಮಾತ್ರ ಪಾಕಿಸ್ತಾನಕ್ಕೆ ಚಹಾ ರಫ್ತು ಮಾಡಲ್ಲ. ದೇಶ ಮೊದಲು ನಂತರ ವ್ಯಪಾರ ಎಂದು ಕೇಂದ್ರ ಸರ್ಕಾರಕ್ಕೆ ಸಾಥ್ ನೀಡಿದ್ದಾರೆ.

ಕೇಂದ್ರ ಸರ್ಕಾರ ಪಾಕಿಸ್ತಾನದ ಜೊತೆ ಭಾರತದ ಎಲ್ಲಾ ವ್ಯಾಪಾರಿ ಸಂಬಂಧಗಳನ್ನು ಸ್ಥಗಿತಗೊಳಿಸಿದರೆ ಚಹಾ ಪೂರೈಕೆ ಮಾಡುವುದನ್ನು ನಿಲ್ಲಿಸುತ್ತೀರಾ? ಎಂಬ ಪ್ರಶ್ನೆಗೆ ಉತ್ತರಿಸಿದ ಐಟಿಇಎ ಮುಖ್ಯಸ್ಥ ಅನ್ಶುಮನ್ ಕನೋರಿಯಾ ಖಂಡಿತ ನಿಲ್ಲಿಸುತ್ತೇವೆ. ದೇಶಕ್ಕಾಗಿ ಏನನ್ನಾದರೂ ಮಾಡಲು ನಾವು ಸಿದ್ಧರಿದ್ದೇವೆ. ಮೊದಲು ರಾಷ್ಟ್ರ ನಂತರ ವ್ಯಾಪಾರ ಎಂದು ಉತ್ತರಿಸಿದ್ದಾರೆ. ಅಷ್ಟೇ ಅಲ್ಲದೆ ಪುಲ್ವಾಮ ಉಗ್ರರ ದಾಳಿ ವಿರುದ್ಧವಾಗಿ ಕೇಂದ್ರ ಸರ್ಕಾರ ಯಾವುದೇ ನಿರ್ಧಾರವನ್ನು ತೆಗೆದುಕೊಂಡರೂ ಚಹಾ ರಫ್ತುದಾರರ ಬೆಂಬಲವಿದೆ. 1989ರಿಂದ ಭಾರತೀಯ ಸೇನೆಗೆ ಪಾಕಿಸ್ತಾನ ತೊಂದರೆ ಕೊಡುತ್ತಿದೆ ಎಂದು ಕನೋರಿಯಾ ಹೇಳಿದ್ದಾರೆ.

ಅಲ್ಲದೇ ಉಭಯ ರಾಷ್ಟ್ರಗಳ ವ್ಯಾಪಾರ ಸಂಬಂಧ ಸ್ಥಗಿತಗೊಂಡರೆ ನಮಗೆ ನಷ್ಟವಾಗುತ್ತದೆ ಎಂಬುದರ ಕುರಿತು ಯೋಚನೆಯನ್ನೇ ಮಾಡಿಲ್ಲ. ಇಂತಹ ದುರ್ಘಟನೆಗಳು ನಡೆದಾಗ ನಮಗೆ ದೇಶ ಮೊದಲಾಗುತ್ತದೆ. ನಾವು ಕೇಂದ್ರ ಸರ್ಕಾರದ ಸೂಚನೆಗಳಿಗೆ ಕಾಯುತ್ತಿದ್ದೇವೆ. ಇದರಿಂದ ಮಾರುಕಟ್ಟೆ ಮೇಲೆ ಆಗುವ ಪರಿಣಾಮ ಸೆಕೆಂಡರಿ ಎಂದಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *