ಟ್ಯಾಕ್ಸ್ ಟೆರರಿಸಂ ದೇಶದ ಸಾಧನೆಯನ್ನು ಕುಗ್ಗಿಸುತ್ತಿದೆ: ಇನ್ಫೋಸಿಸ್ ಮಾಜಿ ನಿರ್ದೇಶಕ

Public TV
2 Min Read

ನವದೆಹಲಿ: ಕೆಫೆ ಕಾಫಿ ಡೇ ಸಂಸ್ಥಾಪಕ ಸಿದ್ಧಾರ್ಥ್ ಅವರ ಸಾವಿನ ಬೆನ್ನಲ್ಲೇ ಉದ್ಯಮಿಗಳು ಟ್ಯಾಕ್ಸ್ ಟೆರರಿಸಂ ಕುರಿತು ತಮ್ಮ ಅಸಮಾಧಾನ ಹೊರ ಹಾಕುತ್ತಿದ್ದಾರೆ.

ಇದೀಗ ಉದ್ಯಮಿ ಹಾಗೂ ಇನ್ಫೋಸಿಸ್ ಮಾಜಿ ನಿರ್ದೇಶಕ ಮೋಹನ್ ದಾಸ್ ಪೈ ಆಕ್ರೋಶ ವ್ಯಕ್ತಪಡಿಸಿದ್ದು, ಉದ್ಯಮಿಗಳು ಟ್ಯಾಕ್ಸ್ ಟೆರರಿಸಂನಿಂದ ಬೇಸತ್ತು ಹೋಗಿದ್ದಾರೆ ಎಂದು ತಿಳಿಸಿದ್ದಾರೆ.

ಟ್ಯಾಕ್ಸ್ ಟೆರರಿಸಂ ಉದ್ಯಮಿಗಳನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದೆ ಎಂಬ ಮಾತುಗಳು ಕೆಫೆ ಕಾಫಿ ಡೇ ಸಂಸ್ಥಾಪಕ ವಿ.ಜಿ.ಸಿದ್ಧಾರ್ಥ್ ಅವರ ಸಾವಿನ ನಂತರ ಕೇಳಿ ಬಂದಿತ್ತು. ಇದೀಗ ಮೋಹನ್ ದಾಸ್ ಪೈ ಹಾಗೂ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಅವರು ಸಹ ಈ ಕುರಿತು ಅಸಮಾಧಾನ ಹೊರ ಹಾಕಿದ್ದು, ರಾಷ್ಟ್ರೀಯ ವಾಹಿನಿಯೊಂದಕ್ಕೆ ನೀಡಿದ ಸಂರ್ದಶದಲ್ಲಿ ಈ ಕುರಿತು ಪ್ರತಿಕ್ರಿಯಿಸಿದ್ದಾರೆ.

ತೆರಿಗೆ ಭಯೋತ್ಪಾದನೆಯು ದೇಶದಲ್ಲಿನ ವ್ಯಾಪಾರದ ಸರಳತೆಗೆ ಅಪಾಯವನ್ನು ತಂದೊಡ್ಡಿದೆ. ಇದನ್ನು ಕೊನೆಗೊಳಿಸಲು ಸರ್ಕಾರ ಭರವಸೆ ನೀಡಿದರೂ ಅನಗತ್ಯ ತೆರಿಗೆ ಕುರಿತು ದೂರುಗಳು ಇನ್ನೂ ವ್ಯಾಪಕವಾಗಿವೆ. ಇದು ದೇಶದ ಸಾಧನೆಯನ್ನು ಕುಗ್ಗಿಸುತ್ತದೆ ಎಂದು ಮೋಹನ್ ದಾಸ್ ಪೈ ಅಭಿಪ್ರಾಯಪಟ್ಟಿದ್ದಾರೆ.

ಈ ಕುರಿತು ಪೈ ಅವರು ತಮ್ಮ ಜೀವನದಲ್ಲಾದ ಘಟನೆ ಮೂಲಕ ವಿವರಿಸಿದ್ದು, ಕಿರಣ್ ಎಂಬ ಸರ್ಕಾರಿ ಅಧಿಕಾರಿ ಸಂದೇಶ ಕಳುಹಿಸಿದ್ದರು. ಇದಕ್ಕೆ ನಾನು ಉತ್ತರಿಸಿ, ಇದು ಸರಿಯಾದ ಕ್ರಮವಲ್ಲ ಎಂದು ತಿಳಿಸಿದೆ. ಇದು ಅಧಿಕಾರಿಗಳಲ್ಲಿ ಯಾವ ರೀತಿಯ ಸಂಸ್ಕøತಿ ಬೆಳೆದಿದೆ ಎಂಬುದನ್ನು ತೋರಿಸುತ್ತದೆ. ಇದನ್ನು ಯಾರು ಯೋಚಿಸುತ್ತಾರೆ, ಅವರು ಹುಟ್ಟಿರುವುದೇ ನಮ್ಮನ್ನು ಆಳುವುದಕ್ಕಾಗಿ ಎಂಬ ಅಹಂನಲ್ಲಿದ್ದಾರೆ ಎಂದು ತಿಳಿಸಿದ್ದಾರೆ.

ಈ ಘಟನೆ ಕುರಿತು ಅಧಿಕಾರಿ ಮತ್ತೆ ಪ್ರತ್ಯುತ್ತರ ನೀಡಿದ್ದು, ಇನ್ಫೋಸಿಸ್‍ನ ಸಹೋದ್ಯೋಗಿಯನ್ನು ಕರೆದು ನನ್ನನ್ನು ಹುದ್ದೆಯಿಂದ ಕೆಳಗಿಳಿಸುವಂತೆ ಬೆದರಿಕೆ ಹಾಕಿದ್ದರು ಎಂದು ಘಟನೆಯನ್ನು ವಿವರಿಸಿದ್ದಾರೆ. ಇಂತಹ ವರ್ತನೆಗಳನ್ನು ಖಂಡಿಸಬೇಕಿದೆ. ಈ ಮೂಲಕ ತೆರಿಗೆ ಭಯೋತ್ಪಾದನೆಯನ್ನು ತೊಲಗಿಸಬೇಕಿದೆ. ಆದರೆ ಸರ್ಕಾರ ಈ ಕುರಿತು ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಕೇಂದ್ರದ ಮಾಜಿ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಈ ಕುರಿತು ಭರವಸೆ ನೀಡಿದ್ದರು. ಅಲ್ಲದೆ, ಇದು 2014ರ ಎನ್‍ಡಿಎ ಪ್ರಣಾಳಿಕೆಯಲ್ಲಿಯೂ ಇದೆ. ಕಳೆದ 5 ವರ್ಷಗಳಿಂದ ಇದು ದ್ವಿಗುಣಗೊಂಡಿದ್ದು, 6 ಲಕ್ಷ ಕೋಟಿ ರೂ. ಸಂಗ್ರಹವಾಗುತ್ತಿದೆ. ಹೀಗಾಗಿ ಟ್ಯಾಕ್ಸ್ ಟೆರರಿಸಂ ಕಡಿಮೆಯಾಗಿದೆ ಎಂದು ಹೇಳಲು ಸಾಧ್ಯವಿಲ್ಲ. ಕಳೆದ ವರ್ಷದ ಬಜೆಟ್‍ನಲ್ಲಿ ಅಧಿಕಾರಿಗಳು ಸರಿಯಾಗಿ ಕಾರ್ಯನಿರ್ವಹಿಸದೆ ಹಣಕಾಸು ಸಚಿವರನ್ನು ದೋಷಿಸಿದ್ದರು ಎಂದು ಪೈ ವಿವರಿಸಿದ್ದಾರೆ.

ಈ ಟ್ಯಾಕ್ಸ್ ಟೆರರಿಸಂ ತೊಲಗಿಸಬೇಕಾದಲ್ಲಿ ಸರ್ಕಾರ ಹಾಗೂ ಕಂಪನಿಗಳ ಸಿಇಓಗಳ ನಡುವೆ ಆಗಾಗ ಸಭೆ ಅಥವಾ ಮಾತುಕತೆ ನಡೆಸಬೇಕು. ಆಗ ಉದ್ಯಮಿಗಳ ಸಮಸ್ಯೆಗಳನ್ನು ತಿಳಿಯಬಹುದು ಎಂದು ಹೇಳಿದ್ದಾರೆ.

ಕೆಫೆ ಕಾಫಿ ಡೇ ಸಿದ್ಧಾರ್ಥ್ ಅವರು ಸಾವನ್ನಪ್ಪುವುದಕ್ಕೂ ಮುನ್ನ ತಮ್ಮ ಪತ್ರದಲ್ಲಿ ಆದಾಯ ತೆರಿಗೆ ಅಧಿಕಾರಿಗಳ ಕಿರುಕುಳದಿಂದ ಬೇಸತ್ತಿದ್ದೇನೆ ಎಂದು ಉಲ್ಲೇಖಿಸಿದ್ದರು. ನಮ್ಮ ಶೇರನ್ನು ಎರಡು ವಿವಿಧ ಹಂತಗಳಲ್ಲಿ ಸಲ್ಲಿಸಿ, ನಮ್ಮ ಕಾಫಿಯ ದಿನದ ಶೇರುಗಳ ಸ್ಥಾನವನ್ನು ಪಡೆದುಕೊಂಡಿದ್ದೇವೆ. ಪರಿಷ್ಕೃತ ಆದಾಯ ತೆರಿಗೆಯನ್ನೂ ನಮ್ಮಿಂದ ಸಲ್ಲಿಸಲಾಗಿದೆ ಎಂದು ಪತ್ರದಲ್ಲಿ ತಿಳಿಸಿದ್ದರು. ಆದಾಯ ತೆರಿಗೆ ಇಲಾಖೆಯು ಈ ಆರೋಪಗಳನ್ನು ತಳ್ಳಿ ಹಾಕಿತ್ತು, ಆದಾಯ ತೆರಿಗೆ ಕಾಯ್ದೆಯ ನಿಬಂಧನೆಗಳ ಪ್ರಕಾರ ಇಲಾಖೆ ಕಾರ್ಯನಿರ್ವಹಿಸಿದೆ ಎಂದು ಪ್ರತಿಕ್ರಿಯಿಸಿತ್ತು.

Share This Article
Leave a Comment

Leave a Reply

Your email address will not be published. Required fields are marked *