ತೆರಿಗೆ ವಸೂಲಿ ಮಾಡಲು ಸುಳ್ಳು ಲೆಕ್ಕ ಹೇಳಿ ದಾರಿ ತಪ್ಪಿಸ್ತಿದ್ದಾರೆ – ಸಾರ್ವಜನಿಕರ ಆಕ್ರೋಶ

Public TV
2 Min Read

ಚಿಕ್ಕೊಡಿ(ಬೆಳಗಾವಿ): ತೆರಿಗೆ ವಸೂಲಿ ಮಾಡಲು ಸುಳ್ಳು ಲೆಕ್ಕ ಹೇಳಿ ನಮ್ಮನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಸಾರ್ವಜನಿಕರು ಅಧಿಕಾರಿಗಳನ್ನು ದೂರುತ್ತಿರುವ ಘಟನೆ ಹುಕ್ಕೇರಿಯಲ್ಲಿ ನಡೆದಿದೆ.

ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪುರಸಭೆ ಅಧಿಕಾರಿಗಳು ಮನೆಗಳ ಹಾಗೂ ವಾಣಿಜ್ಯ ಮಳಿಗೆಗಳ ತೆರಿಗೆ ಕಟ್ಟಿದ ಲೆಕ್ಕಪತ್ರದ ಪುಸ್ತಕ ಸರಿಯಾಗಿ ಇಡುತ್ತಿಲ್ಲ. ಈ ಪರಿಣಾಮ ಜನರಿಂದ ಬೇಕಾಬಿಟ್ಟಿಯಾಗಿ ತೆರಿಗೆಯನ್ನು ವಸೂಲಿ ಮಾಡುತ್ತಿದ್ದಾರೆ. ತೆರಿಗೆ ಕಟ್ಟಿದ ನಾಗರಿಕರಿಂದ ಮತ್ತೆ ವಸೂಲಿ ಮಾಡಲು ಸುಳ್ಳು ಲೆಕ್ಕ ಹೇಳಿ ದಾರಿ ತಪ್ಪಿಸುತ್ತಿದ್ದಾರೆ ಎಂದು ಹುಕ್ಕೇರಿ ಪಟ್ಟಣದ ಸಾರ್ವಜನಿಕರು ಆರೋಪಿಸಿದ್ದಾರೆ. ಇದನ್ನೂ ಓದಿ: ಮಾರ್ಷಲ್‍ನನ್ನೇ ಕಾರಿನ ಬಾನೆಟ್ ಮೇಲೆ ಎಳೆದುಕೊಂಡು ಹೋದ ಚಾಲಕ

ಸ್ಥಳೀಯ ಪುರಸಭೆಗೆ ಭೇಟಿ ನೀಡಿದ ಜಿಲ್ಲಾ ಅಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಈಶ್ವರ ಉಳ್ಳಾಗಡ್ಡಿ ಅವರಿಗೆ ಈ ಕುರಿತು ದೂರು ನೀಡಿ ತಮ್ಮ ಅಳಲುನ್ನು ತೋಡಿಕೊಂಡಿದ್ದಾರೆ. ತೆರೆಗೆ ವಸೂಲಿ ಅಧಿಕಾರಿ ಸ್ಥಳೀಯರಾಗಿದ್ದು, ಹಲವು ವರ್ಷಗಳಿಂದ ಇಲ್ಲೇ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ಸಾರ್ವಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ತೆರಿಗೆ ಕಟ್ಟಲು ಹೋದರೆ ಬೆಕ್ಕಾಬಿಟ್ಟಿ ಲೆಕ್ಕ ತೋರಿಸುತ್ತಾರೆ ಎಂದು ಆರೋಪವನ್ನು ಮಾಡಲಾಗುತ್ತಿದೆ.

ತೆರಿಗೆ ಕಟ್ಟಿದ ರಸೀದಿ ತೋರಿಸಿದರೂ ಕಿರಿಕಿರಿ ಮಾಡುತ್ತಿದ್ದು, ಪದೇ ಪದೇ ಆಲೆದಾಡಿಸುತ್ತಿದ್ದಾರೆ ಎಂದು ದೂರಿದ್ದಾರೆ. ಕೂಡಲೇ ಅವರನ್ನು ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಕಳೆದ ವರ್ಷ ಪುರಸಭೆಗೆ ಮಳೆ ನೀರು ನುಗ್ಗಿ ಲೆಕ್ಕಪತ್ರದ ಪುಸ್ತಕವೆಲ್ಲ ಹಾಳಾಗಿವೆ. ಇದರಿಂದ ಮನೆ, ವಾಣಿಜ್ಯ ಕರ ತುಂಬಿರುವ ಲೆಕ್ಕ ತಪ್ಪಿ ಹೋಗಿದೆ. ಇದನ್ನು ಸರಿಪಡಿಸಿ ಸಾರ್ವಜನಿಕರಿಗೆ ನ್ಯಾಯ ಒದಗಿಸಿ ಕೊಡಬೇಕು. ಜೊತೆಗೆ ಆ ಅಧಿಕಾರಿಯನ್ನು ತಕ್ಷಣ ವರ್ಗಾಯಿಸಬೇಕು ಎಂದು ವಿನಂತಿಸಿಕೊಂಡಿದ್ದಾರೆ. ಇದನ್ನೂ ಓದಿ: ಒಂದೂವರೆ ಕೋಟಿ ವೆಚ್ಚದ ಸರ್ಕಾರಿ ಹೈಟೆಕ್ ಆಸ್ಪತ್ರೆ ನಿರ್ಮಾಣ

ಪುರಸಭೆ ಬಳಿಯ ಸೇತುವೆಗೆ ಚಿಕ್ಕ ಪೈಪ್ ಅಳವಡಿಸಿ ಅವೈಜ್ಞಾನಿಕವಾಗಿ ತರಕಾರಿ ಮಾರುಕಟ್ಟೆ ನಿರ್ಮಿಸಲಾಗಿದೆ. ಈ ಪರಿಣಾಮ ಕಳೆದ ವರ್ಷ ಕಮ್ಮಾರ ಓಣಿ ಹಾಗೂ ಅಂಗಡಿಗಳಲ್ಲಿ ನೀರು ನುಗ್ಗಿ ಮನೆಗಳು ಉರುಳಿ ಲಕ್ಷಾಂತರ ಹಾನಿಯಾಗಿದ್ದು, ಸಾರ್ವಜನಿಕರಿಗೆ ಪರಿಹಾರ ನೀಡಬೇಕು. ಪಟ್ಟಣಕ್ಕೆ ಕಲುಷಿತ ನೀರು ಪೂರೈಕೆ ನಿಲ್ಲಿಸಿ, ಶುದ್ಧ ನೀರು ಸರಬರಾಜು ಮಾಡಬೇಕು. ನಗರೋತ್ಥಾನ ಕಾಮಗಾರಿ ಕಳಪೆಯಾಗಿದ್ದು, ಅದನ್ನು ಸರಿಪಡಿಸಿಬೇಕು ಎಂದು ಒತ್ತಾಯಿಸಿದ್ದಾರೆ.

ಈಶ್ವರ ಉಳ್ಳಾಗಡ್ಡಿ ಸಾರ್ವಜನಿಕರ ಅಹವಾಲು ಆಲಿಸಿದ್ದು, ಸೇತುವೆ ಎತ್ತರಿಸಲು ಇದೇ ವೇಳೆ ಟೆಂಡರ್ ಕರೆದಿದ್ದಾರೆ. 15 ದಿನಗಳಲ್ಲಿ ಕಾಮಗಾರಿ ಪ್ರಾರಂಭಿಸಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಮೋಹನ ಜಾಧವ ಅವರಿಗೆ ಸೂಚಿನೆ ನೀಡಿದ್ದಾರೆ. ಇದನ್ನೂ ಓದಿ: ಕರ್ತವ್ಯಕ್ಕೆ ತೆರಳುತ್ತಿದ್ದ ವಕೀಲ ಅಪಘಾತದಲ್ಲಿ ಸಾವು

ಸರ್ವೇಶ್ ಜಕಾತಿ, ಅಸಿಫ್ ಜಲಾಲಿ ಅಲ್ಲಾವುದ್ದೀನ್ ಗಳದಗಿ, ಶೇಖರ್ ಮಾಯಣ್ಣವರ, ಗಜಬರ ಮುಲ್ಲಾ ಮುಲ್ಲಾ ಸಲೀಂ, ಮುಲ್ಲಾ ಫರಾನಾ ಬೆಳಗಾವಿ ಮತ್ತಿತರರು ಈ ವೇಳೆ ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *