ಟೇಸ್ಟಿ ಚೈನೀಸ್‌ ಪಾಸ್ತಾ ಮಂಚೂರಿಯನ್‌ ನೀವೂ ಟ್ರೈ ಮಾಡಿ

Public TV
2 Min Read

ಪಾಸ್ತಾ ಅಂತಾ ಹೇಳಿದ್ರೆ ಎಲ್ಲರಿಗೂ ಇಷ್ಟ. ಇತ್ತೀಚಿನ ಮಕ್ಕಳಂತೂ ಪಾಸ್ತಾದ ಹೆಸರು ಕೇಳಿದ ಕೂಡಲೇ ಬಾಯಲ್ಲಿ ನೀರೂರಿಸುತ್ತಾರೆ. ಪಾಸ್ತಾದಲ್ಲೂ (Pasta) ವಿಧವಿಧವಾದ ರೆಸಿಪಿಗಳಿವೆ. ವೈಟ್‌ ಸಾಸ್‌ ಪಾಸ್ತಾ, ರೆಡ್‌ ಸಾಸ್‌ ಪಾಸ್ತಾ ಅಂತಾ ಹಲವು ವೆರೈಟಿಗಳಿವೆ. ಸಾಸೇಜ್‌ ರೀತಿಯ ಪಾಸ್ತಾವನ್ನು ಇಷ್ಟಪಡುವವರಿಗೆ ಇಲ್ಲಿದೆ ಚೈನೀಸ್‌ ಪಾಸ್ತಾ ಮಂಚೂರಿಯನ್‌ (Chinese Pasta Manchurian). ಇದನ್ನು ಒಮ್ಮೆ ತಿಂದ್ರೆ ಮತ್ತೆ ಮತ್ತೆ ತಿನ್ಬೇಕು ಅನ್ಸೋದಂತು ಪಕ್ಕಾ. ಹೌದು, ನಾವಿವತ್ತು ಚೈನೀಸ್‌ ಪಾಸ್ತಾ ಮಂಚೂರಿಯನ್‌ ಮಾಡೋದು ಹೇಗೆ ಅಂತಾ ಹೇಳ್ಕೊಡ್ತೀವಿ..

ಬೇಕಾಗಿರುವ ಸಾಮಾಗ್ರಿಗಳು:
ಪಾಸ್ತಾ – 1½ ಕಪ್
ಮೈದಾ – ¾ ಕಪ್
ಕಾರ್ನ್ ಹಿಟ್ಟು – 1 ½ ಕಪ್
ಮೆಣಸಿನ ಪುಡಿ – 1 ಟೀಸ್ಪೂನ್
ಉಪ್ಪು
ಎಣ್ಣೆ
ಹಸಿಮೆಣಸು – 2
ಬೆಳ್ಳುಳ್ಳಿ – 2 ಎಸಳು
ಶುಂಠಿ
ಈರುಳ್ಳಿ – ½
ಕ್ಯಾಪ್ಸಿಕಂ – ½
ಟೊಮೆಟೊ ಸಾಸ್ – 2 ಚಮಚ
ವಿನೆಗರ್ – 2 ಟೀಸ್ಪೂನ್
ಸೋಯಾ ಸಾಸ್ – 2 ಟೀಸ್ಪೂನ್
ಕಾಳುಮೆಣಸಿನ ಪುಡಿ – ½ ಟೀಸ್ಪೂನ್
ಮೆಣಸಿನ ಪುಡಿ – ½ ಟೀಸ್ಪೂನ್
ಎಲೆಕೋಸು – ½ ಕಪ್‌
ಕ್ಯಾರೆಟ್ – ½ ಕಪ್‌
ಸ್ಪ್ರಿಂಗ್ ಆನಿಯನ್‌ – ಸ್ವಲ್ಪ

ಮಾಡುವ ವಿಧಾನ:
ಮೊದಲನೆಯದಾಗಿ ಒಂದು ದೊಡ್ಡ ಪಾತ್ರೆಯಲ್ಲಿ ನೀರು ತೆಗೆದುಕೊಂಡು 1 ಟೀಸ್ಪೂನ್ ಉಪ್ಪು ಸೇರಿಸಿ ಪಾಸ್ತಾವನ್ನು 4 ನಿಮಿಷ ಕುದಿಸಬೇಕು. ಪಾಸ್ತಾ ಸರಿಯಾಗಿ ಬೆಂದ ಬಳಿಕ ನೀರನ್ನು ಬಸಿದು ತಣ್ಣೀರಿನಿಂದ ಪಾಸ್ತಾವನ್ನು ತೊಳೆಯಬೇಕು.

ನಂತರ ಒಂದು ದೊಡ್ಡ ಬಟ್ಟಲಿನಲ್ಲಿ ¾ ಕಪ್ ಮೈದಾ, ½ ಕಪ್ ಕಾರ್ನ್ ಹಿಟ್ಟು, 1 ಟೀಸ್ಪೂನ್ ಮೆಣಸಿನ ಪುಡಿ ಮತ್ತು ½ ಟೀಸ್ಪೂನ್ ಉಪ್ಪು ತೆಗೆದುಕೊಳ್ಳಬೇಕು. ಇದಕ್ಕೆ ಅಗತ್ಯವಿರುವಷ್ಟು ನೀರು ಸೇರಿಸಿ, ಹಿಟ್ಟು ಗಂಟು ಕಟ್ಟದಂತೆ ನೋಡಿಕೊಳ್ಳಬೇಕು. ಬಳಿಕ ಬೇಯಿಸಿದ ಪಾಸ್ತಾವನ್ನು ಬ್ಯಾಟರ್‌ಗೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಬೇಕು.

ನಂತರ ಸ್ಟವ್‌ ಅನ್ನು ಮಧ್ಯಮ ಉರಿಯಲ್ಲಿಟ್ಟು ಪಾಸ್ತಾವನ್ನು ಎಣ್ಣೆಯಲ್ಲಿ ಡೀಪ್ ಫ್ರೈ ಮಾಡಬೇಕು. ಪಾಸ್ತಾ ಚಿನ್ನದ ಬಣ್ಣಕ್ಕೆ ತಿರುಗುವವರೆಗೆ ಎಣ್ಣೆಯಲ್ಲಿ ಹುರಿಯಬೇಕು. ಈಗ ಹುರಿದ ಪಾಸ್ತಾವನ್ನು ತೆಗೆದು ಪಕ್ಕಕ್ಕೆ ಇಟ್ಟುಕೊಳ್ಳಿ.

ಇನ್ನು ಒಂದು ದೊಡ್ಡ ಬಾಣಲೆಯಲ್ಲಿ 2 ಟೇಬಲ್‌ಸ್ಪೂನ್‌ ಎಣ್ಣೆ ಬಿಸಿ ಮಾಡಿ ಅದಕ್ಕೆ 2 ಸಣ್ಣಗೆ ಹೆಚ್ಚಿಕೊಂಡ ಹಸಿ ಮೆಣಸು, ಹೆಚ್ಚಿಕೊಂಡ 2 ಬೆಳ್ಳುಳ್ಳಿ ಎಸಳು ಹಾಗೂ ಶುಂಠಿಯನ್ನು ಸೇರಿಸಿ ಚೆನ್ನಾಗಿ ಹುರಿಯಬೇಕು. ನಂತರ ಹೆಚ್ಚಿಕೊಂಡ ½ ಈರುಳ್ಳಿ, ½ ಕ್ಯಾಪ್ಸಿಕಂ ಸೇರಿಸಿ ಚೆನ್ನಾಗಿ ಫ್ರೈ ಮಾಡಬೇಕು. ಇದಕ್ಕೆ 2 ಟೇಬಲ್‌ಸ್ಪೂನ್‌ ಟೊಮೆಟೊ ಸಾಸ್, 2 ಟೇಬಲ್‌ಸ್ಪೂನ್‌ ವಿನೆಗರ್, 2 ಟೇಬಲ್‌ಸ್ಪೂನ್‌ ಸೋಯಾ ಸಾಸ್, ½ ಟೀಸ್ಪೂನ್ ಮೆಣಸಿನ ಪುಡಿ, ½ ಟೀಸ್ಪೂನ್ ಮೆಣಸಿನ ಪುಡಿ ಮತ್ತು ¼ ಟೀಸ್ಪೂನ್ ಉಪ್ಪು ಸೇರಿಸಿಕೊಂಡು ಚೆನ್ನಾಗಿ ಮಿಕ್ಸ್‌ ಮಾಡಿಕೊಳ್ಳಬೇಕು.

ಮುಂದೆ ಸ್ಲರಿ ತಯಾರಿಸಲು, 1 ಚಮಚ ಕಾರ್ನ್ ಫ್ಲೋರ್ ಅನ್ನು ಅರ್ಧ ಕಪ್ ನೀರಿನಲ್ಲಿ ಮಿಶ್ರಣ ಮಾಡಬೇಕು. ಸ್ಲರಿ ಹೊಳಪು ಬರುವವರೆಗೆ ಬೇಯಿಸಿಕೊಳ್ಳಬೇಕು. ನಂತರ ಹುರಿದ ಪಾಸ್ತಾ, ಹೆಚ್ಚಿಕೊಂಡ ಎಲೆಕೋಸು, ½ ಕ್ಯಾರೆಟ್ ಮತ್ತು ಸ್ಪಲ್ಪ ಸ್ಪ್ರಿಂಗ್ ಆನಿಯನ್ ಸೇರಿಸಿಕೊಂಡು ಚೆನ್ನಾಗಿ ಮಿಶ್ರಣ ಮಾಡಬೇಕು. ಇದಕ್ಕೆ ವೃತ್ತಾಕಾರವಾಗಿ ಕತ್ತರಿಸಿದ ಈರುಳ್ಳಿ ಹಾಗೂ ಸ್ಪ್ರಿಂಗ್ ಆನಿಯನ್‌ ಹಾಕಿ ಅಲಂಕರಿಸಬಹುದು. ಈಗ ಟೇಸ್ಟಿ ಹಾಗೂ ಸ್ಪೈಸಿ ಚೈನೀಸ್‌ ಪಾಸ್ತಾ ಮಂಚೂರಿಯನ್ನು ಸವಿಯಲು ರೆಡಿ.

Share This Article