ನಾನ್‌ವೆಜ್ ತಿನ್ನದವರಿಗೆ ಪನೀರ್, ಮಶ್ರೂಮ್ ರೆಸಿಪಿಗಳು ಸಾಮಾನ್ಯವಾಗಿ ಇಷ್ಟವಾಗುತ್ತದೆ. ದಿನಾ ಒಂದೇ ರೀತಿಯ ರೆಸಿಪಿ ತಿಂದು ಬೋರ್ ಆಗಿದ್ರೆ ಈ ರೆಸಿಪಿಯನ್ನೊಮ್ಮೆ ಟ್ರೈ ಮಾಡಿ. ಇವತ್ತಿನ ನಮ್ಮ ರೆಸಿಪಿಯಲ್ಲಿ ತುಂಬಾ ಸುಲಭವಾಗಿ ಗಾರ್ಲಿಕ್ ಮಶ್ರೂಮ್ ರೆಸಿಪಿ ಯಾವ ರೀತಿ ಮಾಡುವುದು ಎಂಬುದನ್ನು ತಿಳಿಸಿಕೊಡುತ್ತಿದ್ದೇವೆ. ಇದು ಊಟಕ್ಕೆ ಪರ್ಫೆಕ್ಟ್ ಸೈಡ್ ಡಿಶ್. ಅಲ್ಲದೇ ಸಂಜೆ ಸ್ನ್ಯಾಕ್ಸ್ ರೀತಿಯಲ್ಲೂ ಇದನ್ನು ತಿನ್ನಬಹುದು. ಹಾಗಿದ್ರೆ ನೀವೂ ಕೂಡ ನಿಮ್ಮ ಮನೆಯಲ್ಲಿ ಈ ರೆಸಿಪಿಯನ್ನೊಮ್ಮೆ ಟ್ರೈ ಮಾಡಿ.
ಬೇಕಾಗುವ ಸಾಮಗ್ರಿಗಳು:
ಮಶ್ರೂಮ್ – 1 ಕಪ್
ಬೆಣ್ಣೆ – 1 ಚಮಚ
ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿ – ಸ್ವಲ್ಪ
ಕಾಳುಮೆಣಸಿನ ಪುಡಿ – 1 ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಕೊತ್ತಂಬರಿಸೊಪ್ಪು – ಸ್ವಲ್ಪ
ಮಿಕ್ಸ್ಡ್ ಹರ್ಬ್ಸ್ ಪೌಡರ್ – 1 ಚಮಚ
ಮಾಡುವ ವಿಧಾನ:
* ಮೊದಲಿಗೆ ಮಶ್ರೂಮ್ ಅನ್ನು ಚೆನ್ನಾಗಿ ತೊಳೆದು ಚಿಕ್ಕದ್ದಾಗಿ ಕತ್ತರಿಸಿಕೊಳ್ಳಿ.
* ನಂತರ ಗ್ಯಾಸ್ ಮೇಲೆ ಪ್ಯಾನ್ ಇಟ್ಟು ಅದಕ್ಕೆ ಬೆಣ್ಣೆ ಹಾಕಿ ಅದು ಕರಗುತ್ತಿದ್ದಂತೆ ಬೆಳ್ಳುಳ್ಳಿ ಸೇರಿಸಿ 2 ನಿಮಿಷಗಳ ಕಾಲ ಫ್ರೈ ಮಾಡಿ.
* ಈಗ ಅದಕ್ಕೆ ಮಶ್ರೂಮ್ ಸೇರಿಸಿ ಮಿಶ್ರಣ ಮಾಡಿ. ಸ್ವಲ್ಪ ಹೊತ್ತಿನ ನಂತರ ಮಶ್ರೂಮ್ ನೀರು ಬಿಡುತ್ತದೆ. ನೀರು ಆವಿಯಾಗುವವರೆಗೆ ಚೆನ್ನಾಗಿ ಬೇಯಿಸಿಕೊಳ್ಳಿ.
* ಬಳಿಕ ಇದಕ್ಕೆ ಕಾಳುಮೆಣಸಿನ ಪುಡಿ, ಮಿಕ್ಸ್ಡ್ ಹರ್ಬ್ಸ್ ಪೌಡರ್ ಸೇರಿಸಿ ಮಿಕ್ಸ್ ಮಾಡಿ.
* ನಂತರ ಉಪ್ಪು, ಕೊತ್ತಂಬರಿಸೊಪ್ಪು ಸೇರಿಸಿದರೆ ರುಚಿಕರವಾದ ಗಾರ್ಲಿಕ್ ಮಶ್ರೂಮ್ ಸವಿಯಲು ಸಿದ್ಧ.


