ಜೈಲ್‍ಮೇಟ್‍ಗಳಿಂದ ಸಂಬಂಧಿಕರ ಮನೆಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ!

Public TV
2 Min Read

ದಾವಣಗೆರೆ: ಅವರಿಬ್ಬರು ಶಾಲಾ ಕಾಲೇಜ್‍ನಲ್ಲಿ ಪರಿಚಯವಾಗಿ ಸ್ನೇಹಿತರಾದವರಲ್ಲ. ಬದಲಾಗಿ ಮಾಡಬಾರದ್ದನ್ನು ಮಾಡಿ ಜೈಲಿಗೆ ಹೋಗಿದ್ದವರು. ಈ ಜೈಲ್‍ಮೇಟ್‍ಗಳಿಬ್ಬರು ಜೈಲಿಂದ ಹೊರಗೆ ಬಂದು ತಮ್ಮ ಸಂಬಂಧಿಕರ ಮನೆಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡಿ ಮತ್ತೆ ದಾವಣಗೆರೆ (Davanagere) ಪೊಲೀಸರ (Police) ಬಲೆಗೆ ಬಿದ್ದಿದ್ದಾರೆ.

ಬಂಧಿತ ಆರೋಪಿಗಳನ್ನು ಮಂಜಪ್ಪ ಹಾಗೂ ನವೀನ್ ಎಂದು ಗುರುತಿಸಲಾಗಿದೆ. ನಗರದ ಎಸ್‍ಎಸ್ ಲೇಔಟ್‍ನಲ್ಲಿ ಕಳೆದ ಮೂರು ದಿನಗಳ ಹಿಂದೆ ಹಗಲಿನ ವೇಳೆಯೇ ಒಂಟಿಯಾಗಿ ಮನೆಯಲ್ಲಿದ್ದ ವೃದ್ಧೆ ಗಂಗಮ್ಮ ಎನ್ನುವರ ಮೇಲೆ ಹಲ್ಲೆ ನಡೆಸಿ 15 ತೊಲ ಬಂಗಾರ ಹಾಗೂ ನಗದನ್ನು ದೋಚಿದ್ದರು. ಸಿಸಿ ಕ್ಯಾಮೆರಾಗಳನ್ನು ಪರಿಶೀಲನೆ ನಡೆಸಿದ್ದು, ಕಳ್ಳನ ಚಹರೆ ಪತ್ತೆಹಚ್ಚಿ 2 ದಿನದಲ್ಲೇ ದರೋಡೆ ಮಾಡಿದವರನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಮೂರು ವರ್ಷಗಳಿಂದ ಪಾಕ್‌ ಜೈಲಲ್ಲಿದ್ದ ಭಾರತದ ಮೀನುಗಾರ ನೇಣಿಗೆ ಶರಣು

ಬಂಧಿತ ಆರೋಪಿ ನವೀನ್ ಅತ್ಯಾಚಾರ ಹಾಗೂ ಕೊಲೆ ಕೇಸ್ ಸೇರಿದಂತೆ, ಬರೋಬ್ಬರಿ 51 ಕೇಸ್‍ಗಳಲ್ಲಿ ಈತ ಪ್ರಮುಖ ಆರೋಪಿಯಾಗಿದ್ದಾನೆ. ಬುಧವಾರ ರಾತ್ರಿ ಪಂಚನಾಮೆಗೆ ದಾವಣಗೆರೆ ತಾಲೂಕಿನ ತೋಳಹುಣಸೆ ಗ್ರಾಮದ ಬಳಿ ಕರೆದೊಯ್ದಿದ್ದಾಗ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದಾಗ ಗುಂಡು ಹಾರಿಸಿ ಬಂಧಿಸಿದ್ದಾರೆ.

ದರೋಡೆಕೋರ ನವೀನ್ ಈ ಹಿಂದೆ ಇಂತಹದ್ದೇ ಒಂದು ಕೇಸ್‍ನಲ್ಲಿ ತುಮಕೂರು ಜೈಲು ಸೇರಿದ್ದ, ಅದೇ ಜೈಲಿಗೆ ದರೋಡೆಕೋರನಿಂದ ಹಲ್ಲೆಗೊಳಗಾದ ಗಂಗಮ್ಮನ ತಂಗಿಯ ಮಗ ಮಂಜಪ್ಪ ಕೂಡ ಕೊಲೆ ಕೇಸ್‍ನಲ್ಲಿ ತುಮಕೂರು ಜೈಲಿನಲ್ಲಿದ್ದ. ಆಗ ಇಬ್ಬರಿಗೂ ಪರಿಚಯವಾಗಿತ್ತು, ಜೈಲಿನಿಂದ ಬಿಡುಗಡೆಯಾದ ನಂತರ ಚಂದ್ರಪ್ಪ ಕಳ್ಳರಿಗೆ ದರೋಡೆಕೋರರಿಗೆ ಜಾಮೀನು ಕೊಡುವ ಕೆಲಸ ಮಾಡುತ್ತಾ ದರೋಡೆಕೋರರ ಜೊತೆ ಉತ್ತಮ ಸಂಬಂಧ ಹೊಂದಿದ್ದ.

ಮಂಜಪ್ಪ ದೊಡ್ಡಮ್ಮನ ಮನೆಯಲ್ಲಿ ಅಪಾರ ಪ್ರಮಾಣದ ಹಣ ಒಡವೆಗಳು ಇರುವುದನ್ನು ತಿಳಿದುಕೊಂಡು, ನವೀನ್‍ನನ್ನು ತನ್ನ ಸ್ನೇಹಿತ ಎಂದು ಗಂಗಮ್ಮನ ಮನೆಗೆ ಕರೆದುಕೊಂಡು ಹೋಗಿ ಪರಿಚಯ ಮಾಡಿಸಿದ್ದ. ಅಲ್ಲದೇ ಮನೆಯಲ್ಲಿ ಯಾವ ಸಮಯದಲ್ಲಿ ಯಾರು ಇರೋದಿಲ್ಲ, ಹೇಗೆ ದರೋಡೆ ಮಾಡಬಹುದು ಎಂದು ಇಬ್ಬರು ಸ್ಕೆಚ್ ಕೂಡ ಹಾಕಿದ್ದರು. ಅದರಂತೆ ದರೋಡೆ ಕೂಡ ನಡೆಸಿ ಒಡವೆ ಹಂಚಿಕೊಳ್ಳುವ ಸಮಯದಲ್ಲಿ ಪೊಲೀಸರ ಅಥಿತಿಯಾಗಿದ್ದಾರೆ. ಇದನ್ನೂ ಓದಿ: ತಾಯಿಗೆ ಕೆಟ್ಟ ಸನ್ನೆ ಮಾಡಿದ್ದವನ ತಲೆ ಕಡಿದು ಪೊಲೀಸ್ ಠಾಣೆಗೆ ತಂದಿದ್ದವನಿಗೆ ಜೀವಾವಧಿ ಶಿಕ್ಷೆ

Share This Article