Belagavi | ರಸ್ತೆಯಲ್ಲಿ ಕೆಲಸ ಮಾಡ್ತಿದ್ದವರ ಮೇಲೆ ಹರಿದ ಟ್ಯಾಂಕರ್ – ಮೂವರು ದುರ್ಮರಣ

Public TV
2 Min Read

ಬೆಳಗಾವಿ: ರಸ್ತೆಯಲ್ಲಿ ಕೆಲಸ ಮಾಡುತ್ತಿದ್ದವರ ಮೇಲೆ ಟ್ಯಾಂಕರ್ (Tanker) ಹರಿದ ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೂವರು ಗಂಭೀರ ಗಾಯಗೊಂಡ ಘಟನೆ ಬೆಳಗಾವಿ (Belagavi) ಜಿಲ್ಲೆಯ ಕಿತ್ತೂರು (Kittur) ತಾಲೂಕಿನ ಇಟಗಿ ಕ್ರಾಸ್‌ನಲ್ಲಿ ನಡೆದಿದೆ.

ರಾಷ್ಟ್ರೀಯ ಹೆದ್ದಾರಿ-4 ಪುಣೆ ಬೆಂಗಳೂರು ರಸ್ತೆಯಲ್ಲಿ ದುರಂತ ಸಂಭವಿಸಿದೆ. ಕಲಬುರಗಿಯಿಂದ ಕೆಲಸಕ್ಕೆಂದು ಬೆಳಗಾವಿಗೆ ಬಂದಿದ್ದ ಕಾರ್ಮಿಕರು ಪುಣೆ ಬೆಂಗಳೂರು ಹೆದ್ದಾರಿಯಲ್ಲಿ ರಸ್ತೆ ರಿಪೇರಿ ಮಾಡುತ್ತಿದ್ದರು. ಈ ವೇಳೆ ಟ್ಯಾಂಕರ್ ಹರಿದಿದೆ. ಘಟನೆಯಲ್ಲಿ ಮೂವರು ಗಾಯಗೊಂಡಿದ್ದಾರೆ. ಈ ಪೈಕಿ ಓರ್ವನ ಸ್ಥಿತಿ ಗಂಭೀರವಾಗಿದೆ. ಇದನ್ನೂ ಓದಿ: ನೆರವು ಕೇಂದ್ರದ ಬಳಿ ಇಸ್ರೇಲಿ ಪಡೆಗಳಿಂದ ಗುಂಡಿನ ದಾಳಿ – 26 ಮಂದಿ ಪ್ಯಾಲೆಸ್ಟೀನಿಯನ್ನರು ಸಾವು

ಅಪಘಾತದಲ್ಲಿ ಕಲಬುರಗಿ ಜಿಲ್ಲೆಯ ರಾಮನ್ನ, ಮಹೇಶ್, ರಾಮಚಂದ್ರ ಎಂಬವರು ಮೃತಪಟ್ಟಿದ್ದಾರೆ. ಲಕ್ಷ್ಮೀಬಾಯಿ, ಅನುಶ್ರೀ, ಭೀಮಾಬಾಯಿ ಗಂಭೀರ ಗಾಯಗೊಂಡಿದ್ದಾರೆ. ಅಪಘಾತದ ರಭಸಕ್ಕೆ ಭೀಮಾಬಾಯಿಯ ಎರಡು ಕಾಲುಗಳು ಕಟ್ ಆಗಿದ್ದು, ಚಿಕಿತ್ಸೆಗಾಗಿ ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಇನ್ನು ಆಯಿಲ್‌ ತುಂಬಿದ್ದ ಟ್ಯಾಂಕರ್‌ ಕಾಮಿಕರ ಮೇಲೆ ಹರಿದು ಸರ್ವಿಸ್‌ ರಸ್ತೆಯಲ್ಲಿ ಪಲ್ಟಿಯಾಗಿದೆ. ಟ್ಯಾಂಕರ್‌ನಲ್ಲಿ ಸಿಲುಕಿದ್ದ ಚಾಲಕನನ್ನು ಪೊಲೀಸರು ಹೊರತೆಗೆದಿದ್ದಾರೆ. ಇದನ್ನೂ ಓದಿ: ಹಟ್ಟಿ ಚಿನ್ನದಗಣಿ | 2,800 ಅಡಿ ಆಳದಲ್ಲಿ ಏರ್ ಬ್ಲಾಸ್ಟ್ – ಕಾರ್ಮಿಕ ದುರ್ಮರಣ

ಘಟನೆ ಕುರಿತು ಗಾಯಾಳು ಲಕ್ಷ್ಮೀಬಾಯಿ ಮಾಧ್ಯಮಗಳೊಂದಿಗೆ ಮಾತನಾಡಿ, ನಾವು ಹೆದ್ದಾರಿ ಕೆಲಸಕ್ಕೆಂದು ಕಳೆದ ಏಳು ತಿಂಗಳ ಹಿಂದೆ ಬಂದಿದ್ದೆವು. ಇಂದು ರವಿವಾರವಿದ್ದ ಕಾರಣ ಮಧ್ಯಾಹ್ನವೇ ಕೆಲಸ ಮುಗಿಸಿಕೊಂಡು ಹೊರಟಿದ್ದೆವು. ಲಾರಿ ಚಾಲಕ ಫೋನ್‌ನಲ್ಲಿ ಮಾತನಾಡಿಕೊಂಡು ಡ್ರೈವಿಂಗ್ ಮಾಡುತ್ತಿದ್ದ. ಕೈ ಮಾಡಿದರೂ ಸಹ ನೋಡದೇ ಎಲ್ಲರ ಮೇಲೂ ಲಾರಿ ಹರಿಸಿದ. ನಾವು ಒಟ್ಟು ಆರು ಜನ ಇದ್ದೆವು. ಘಟನೆಯಲ್ಲಿ ನನ್ನ ಪತಿ ಹಾಗೂ ಮಗ ತೀರಿ ಹೋದರು. ನಮ್ಮ ಕುಟುಂಬಕ್ಕೆ ಇನ್ಯಾರು ದಿಕ್ಕು ಎಂದು ಕಣ್ಣೀರು ಹಾಕಿದರು. ಇದನ್ನೂ ಓದಿ: ಕರ್ನಾಟಕ, ಕನ್ನಡ ಭಾಷೆ ಬಗ್ಗೆ ಯಾರೇ ತಪ್ಪಾಗಿ ಮಾತಾಡಿದ್ರೂ ಒಪ್ಪಲ್ಲ: ಸುಧಾರಾಣಿ

ಕಿತ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಘಟನಾ ಸ್ಥಳಕ್ಕೆ ಕಿತ್ತೂರು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಕೊಪ್ಪಳ | 2 ಕುಟುಂಬಗಳ ನಡುವೆ ಆಸ್ತಿ ಕಲಹ – ಯುವಕನ ಕೊಲೆ

Share This Article