ಶೂಟಿಂಗ್ ವೇಳೆ ಯಡವಟ್ಟು: SUVಯಲ್ಲಿ ಸ್ಟಂಟ್ ವೇಳೆ ಅವಘಡ – ತಮಿಳುನಾಡಿನ ಸ್ಟಂಟ್‌ಮೆನ್ ಸಾವು

Public TV
2 Min Read

ಚೆನ್ನೈ: `ವೆಟ್ಟುವಮ್‌’ ತಮಿಳು ಸಿನಿಮಾ ಶೂಟಿಂಗ್ ವೇಳೆ ಕಾರಿನಲ್ಲಿ ಸ್ಟಂಟ್ ಮಾಡುವಾಗ ಸ್ಟಂಟ್‌ಮ್ಯಾನ್ ಒಬ್ಬರು ಸಾವಿಗೀಡಾಗಿರುವ ಘಟನೆ ನಡೆದಿದೆ.

ಕಾಲಿವುಡ್‌ನ ಸಾಹಸ ಕಲಾವಿದ ಮೋಹನ್ ರಾಜು ಮೃತ ಸ್ಟಂಟ್‌ಮ್ಯಾನ್.ಇದನ್ನೂ ಓದಿ: ISSನಿಂದ ಅನ್‌ಡಾಕಿಂಗ್ ಯಶಸ್ವಿ: ಭುವಿಯತ್ತ ಶುಕ್ಲಾ, ಮಂಗಳವಾರ ಮಧ್ಯಾಹ್ನ ಕ್ಯಾಲಿಫೋರ್ನಿಯಾ ತೀರಕ್ಕೆ ವಾಪಸ್

ಪಾ ರಂಜಿತ್ ನಿರ್ದೇಶನದಲ್ಲಿ ತಮಿಳು ನಟ ಆರ್ಯ ನಾಯಕನಾಗಿ ಕಾಣಿಸಿಕೊಳ್ಳುತ್ತಿರುವ ವೆಟ್ಟುವಮ್‌ ಸಿನಿಮಾ ಶೂಟಿಂಗ್ ವೇಳೆ ಈ ಅವಘಡ ಸಂಭವಿಸಿದೆ. ಜನಪ್ರಿಯ ಸ್ಟಂಟ್‌ಮ್ಯಾನ್ ರಾಜು ಅವರು ಜು.13ರಂದು ಶೂಟಿಂಗ್ ಸೆಟ್‌ನಲ್ಲಿ ಎಸ್‌ಯುವಿ ಕಾರು ಸ್ಟಂಟ್ ಮಾಡುತ್ತಿದ್ದರು. ಈ ವೇಳೆ ಕಾರು ಪಲ್ಟಿಯಾಗಿ ಸಾವನ್ನಪ್ಪಿದ್ದಾರೆ. ಅತೀ ವೇಗದ ಚಾಲನೆಯಿಂದ ಅಪಘಾತವಾಗಿದೆ ಎಂದು ಮೂಲಗಳು ತಿಳಿಸಿವೆ.

ಕಾರು ಪಲ್ಟಿಯಾಗುವ ಅವಘಡದ ವಿಡಿಯೋ ಅಲ್ಲಿಯೇ ಇದ್ದ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಅವರು ಎಸ್‌ಯುವಿ ಕಾರನ್ನು ಓಡಿಸುತ್ತಾ, ರ‍್ಯಾಂಪ್ ಮೇಲೆ ಹೋಗುತ್ತಾರೆ. ಅಲ್ಲಿ ಕಾರು ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ. ಬಳಿಕ ಅವರು ತೀವ್ರವಾಗಿ ಗಾಯಗೊಂಡಿದ್ದು, ಅಂಬುಲೆನ್ಸ್‌ನಲ್ಲಿ  ಕರೆದುಕೊಂಡು ಹೋಗುತ್ತಿರುವುದು ಕಂಡು ಬಂದಿದೆ.

ಈ ಕುರಿತು ನಟ ವಿಶಾಲ್ ಮಾಹಿತಿ ಹಂಚಿಕೊಂಡಿದ್ದು, ಸಾವನ್ನಪ್ಪಿರುವುದಾಗಿ ದೃಢಪಡಿಸಿದ್ದಾರೆ. ರಾಜು ಅವರು ಕಳೆದ ಹಲವು ವರ್ಷಗಳಿಂದ ನನಗೆ ಪರಿಚಯ, ಆದರೆ ಇಂದು ಅವರು ನಮ್ಮ ಜೊತೆ ಇಲ್ಲ ಎನ್ನುವುದು ನಿಜಕ್ಕೂ ಅರಗಿಸಿಕೊಳ್ಳಲು ಕಷ್ಟ. ನನ್ನ ಹಲವು ಸಿನಿಮಾಗಳಲ್ಲಿ ಅಪಾಯಕಾರಿ ಸ್ಟಂಟ್‌ಗಳನ್ನು ಮಾಡಿದ್ದಾರೆ ಹಾಗೂ ಅವರು ತುಂಬಾ ಧೈರ್ಯಶಾಲಿ ವ್ಯಕ್ತಿ ಎಂದು ತಿಳಿಸಿದ್ದಾರೆ.

ಈ ಚಿತ್ರವು 2021ರ ತಮಿಳು ಸಿನಿಮಾ `ಸರ್ಪಟ್ಟ ಪರಂಬರೈ’ ಚಿತ್ರದ ಮುಂದುವರಿದ ಭಾಗ ಎನ್ನಲಾಗಿದ್ದು, 2026ರಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.ಇದನ್ನೂ ಓದಿ: ಮುಂಬೈ ಏರ್‌ಪೋರ್ಟ್‌ನಲ್ಲಿ ಆಕಾಸ ಏರ್ ವಿಮಾನಕ್ಕೆ ಟ್ರಕ್‌ ಡಿಕ್ಕಿ

Share This Article