ಕದ್ದಿದ್ದು ತಮಿಳುನಾಡಲ್ಲಿ, ಸರೆಂಡರ್ ಆಗಿದ್ದು ಬೆಂಗಳೂರಲ್ಲಿ..!

Public TV
1 Min Read

ಬೆಂಗಳೂರು: ಕಳ್ಳನೊಬ್ಬ ತಮಿಳುನಾಡಿನಲ್ಲಿ 30 ಕೆಜಿ ಚಿನ್ನಾಭರಣ ಕದ್ದು ಬೆಂಗಳೂರಿನಲ್ಲಿ ಕೋರ್ಟಿಗೆ ಶರಣಾಗಿದ್ದಾನೆ.

ಮುರುಗ ಕೋರ್ಟಿಗೆ ಶರಣಾದ ಖತರ್ನಾಕ್ ಕಳ್ಳ. ಆರೋಪಿ ಮುರುಗ ತಿರುಚ್ಚಿಯ ಲಲಿತಾ ಜ್ಯುವೆಲರ್ಸ್ ನಲ್ಲಿ ಕಳ್ಳತನ ಮಾಡಿ, ತಲೆಮರಿಸಿಕೊಂಡಿದ್ದ. ಇತನ ಬಂಧನಕ್ಕಾಗಿ ತಮಿಳುನಾಡು ಪೊಲೀಸರು ಹುಡುಕಾಟ ನಡೆಸಿದ್ದರು. ಆದರೆ ಶುಕ್ರವಾರ ಏಕಾಏಕಿ ನಗರದ ಮೆಯೋಹಾಲ್ ಕೋರ್ಟಿಗೆ ಬಂದು ಶರಣಾಗಿದ್ದಾನೆ.

ಆರೋಪಿ ಮುರುಗ ಕಳ್ಳತನ ಪ್ರಕರಣದಲ್ಲಿ ಈ ಹಿಂದೆ ಬಾಣಸವಾಡಿ ಪೊಲೀಸರು ಬಂಧಿಸಿದ್ದರು. ಆಗ ಆತನ ತನ್ನ ಬಳಿ ಇದ್ದ 10 ಕೆಜಿ ಚಿನ್ನಾಭರಣವನ್ನು ಪೊಲೀಸರಿಗೆ ಒಪ್ಪಿಸಿದ್ದ. ಅಷ್ಟೇ ಅಲ್ಲದೆ ಮಡಿವಾಳ ಪೊಲೀಸರು ಈ ಹಿಂದೆ ಮುರಿಗನನ್ನ ಹಿಡಿದು 10 ಕೆಜಿ ಚಿನ್ನಾಭರಣವನ್ನ ವಶಕ್ಕೆ ಪಡೆದಿದ್ದರು.

ಹಳೆಯ ಚಾಳಿಯನ್ನು ಮುಂದುವರಿಸಿದ್ದ ಮುರುಗ, ತನ್ನ ಟೀಂ ಜೊತೆಗೆ ಸೇರಿ ತಿರುಚ್ಚಿ ನಗರದ ಲಲಿತಾ ಜ್ಯುವೆಲರ್ಸ್ ನಲ್ಲಿ ಅಕ್ಟೋಬರ್ 2ರಂದು ರಾತ್ರಿ ಚಿನ್ನಾಭರಣ ಎಗರಿಸಿದ್ದ. ಗೊಡೆಗಳನ್ನು ಕೊರೆದು ಅಂಗಡಿಯೊಳಗೆ ಪ್ರವೇಶಿಸಿದ್ದ ಮುರುಗ ಅಂಡ್ ಟೀಂ ಸುಮಾರು 30 ಕೆ.ಜಿ ತೂಕದ 13 ಕೋಟಿ ಮೌಲ್ಯದ 800ಕ್ಕೂ ಅಧಿಕ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿತ್ತು.

ಬಹುಮಹಡಿ ಕಟ್ಟಡವಾದ ಲಲಿತಾ ಜ್ಯವೆಲರ್ಸ್ ನಲ್ಲಿ ಎಲ್ಲಾ ಕಡೆಗಳಲ್ಲಿ ಸಿಸಿಟಿವಿಯನ್ನು ಅಳವಡಿಸಲಾಗಿದೆ. ಹೀಗಾಗಿ ಯಾರಿಗೂ ತಮ್ಮ ಗುರುತು ಪತ್ತೆಯಾಗದಿರಲಿ ಎಂಬ ಕಾರಣಕ್ಕೆ ಮುರುಗ ಹಾಗೂ ಆತನ ತಂಡವು ಮುಖಕ್ಕೆ ಮಾಸ್ಕ್ ಧರಿಸಿಕೊಂಡಿತ್ತು. ಇದರಿಂದಾಗಿ ಕಳ್ಳರ ಗುರುತು ಪತ್ತೆಯಾಗಿರಲಿಲ್ಲ. ಮುರುಗನ ಮೇಲೆ ಅನುಮಾನ ವ್ಯಕ್ತಪಡಿಸಿದ ಪೊಲಿಸರು ಆತನಿಗಾಗಿ ಬಲೆ ಬೀಸಿದ್ದರು.

ಆರೋಪಿ ಮುರುಗ ಮಾರಕ ಖಾಯಿಲೆಯಿಂದ ಬಳಲುತ್ತಿದ್ದಾನೆ. ಹೀಗಾಗಿ ಪೊಲೀಸರ ಲಾಠಿ ಏಟಿಗೆ ಬೆದರಿ ಕೋರ್ಟ್ ಗೆ ಶರಣಾಗಿದ್ದಾನೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *