ಗರ್ಭಿಣಿಗೆ ಎಚ್‍ಐವಿ ಸೋಂಕು: ರಕ್ತದಾನ ಮಾಡಿದ್ದ ಯುವಕ ಆತ್ಮಹತ್ಯೆಗೆ ಯತ್ನ

Public TV
1 Min Read

ಚೆನ್ನೈ: ಗರ್ಭಿಣಿಗೆ ಎಚ್‍ಐವಿ ಸೋಂಕಿತ ವ್ಯಕ್ತಿಯ ರಕ್ತ ವರ್ಗಾವಣೆ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ರಕ್ತದಾನ ಮಾಡಿದ್ದ ಯುವಕ ಗುರುವಾರ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಆತ್ಮಹತ್ಯೆಗೆ ಯತ್ನಿಸಿದ ಯುವಕ ತನ್ನ ಸಂಬಂಧಿಕರೊಬ್ಬರಿಗೆ ರಕ್ತ ವರ್ಗಾವಣೆ ಮಾಡುವ ಉದ್ದೇಶದಿಂದ 2016ರಲ್ಲಿ ರಕ್ತ ನೀಡಿದ್ದ. ಆದರೆ ಅದನ್ನು ಬಳಕೆ ಮಾಡದೆ ಹಾಗೆ ಇಡಲಾಗಿತ್ತು. ಆ ರಕ್ತವನ್ನು ಇದೇ ತಿಂಗಳು 3ರಂದು ಗರ್ಭಿಣಿಗೆ ವರ್ಗಾವಣೆ ಮಾಡಲಾಗಿದೆ ಎನ್ನುವ ಮಾಹಿತಿ ತನಿಖೆಯ ವೇಳೆ ಹೊರಬಿದ್ದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸತ್ತೂರು ನಗರದಿಂದ ಹೊರಗಿದ್ದ ಯುವಕನಿಗೆ ಆಸ್ಪತ್ರೆಯ ಸಿಬ್ಬಂದಿ ಕರೆ ಮಾಡಿದ್ದಾರೆ. ಪ್ರಕರಣದ ಕುರಿತು ಮಾಹಿತಿ ಸಿಗುತ್ತಿದ್ದಂತೆ ರಕ್ತದಾನ ಮಾಡಿದ್ದ ಯುವಕ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ವರದಿಯಾಗಿದೆ.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ತಮಿಳುನಾಡು ಸರ್ಕಾರವು ರಾಜ್ಯದ ಎಲ್ಲ ರಕ್ತ ನಿಧಿಗಳಲ್ಲಿರುವ ರಕ್ತವನ್ನು ಎಚ್‍ಐವಿ ಪರೀಕ್ಷೆಗೆ ಒಳಪಡಿಸುವಂತೆ ಸೂಚಿಸಿದೆ. ಈ ದುರ್ಘಟನೆಗೆ ಸಂಬಂಧಿಸಿದಂತೆ ರಕ್ತ ಪೂರೈಕೆ ಮಾಡಿದ ಸರ್ಕಾರಿ ರಕ್ತ ನಿಧಿಯ ಓರ್ವ ಸಿಬ್ಬಂದಿಯನ್ನು ವಜಾ ಮಾಡಲಾಗಿದ್ದು, ಇಬ್ಬರನ್ನು ಅಮಾನತು ಮಾಡಲಾಗಿದೆ ಎಂದು ವರದಿಯಾಗಿದೆ.

ಏನಿದು ಪ್ರಕರಣ?:
24 ವರ್ಷದ ಮಹಿಳೆಯೊಬ್ಬರು ಎರಡನೇ ಮಗುವಿನ ಹೆರಿಗೆಗಾಗಿ ವಿರುಧುನಗರ್ ಜಿಲ್ಲೆಯ ಸತ್ತೂರುನ ಖಾಸಗಿ ಆಸ್ಪತ್ರೆ ದಾಖಲಾಗಿದ್ದರು. ಈ ವೇಳೆ ಆಕೆಗೆ ಹಿಮೋಗ್ಲೋಬಿನ್ ಕೊರತೆ ಕಂಡುಬಂದಿದ್ದು, ಹೀಗಾಗಿ ಸರ್ಕಾರಿ ಆಸ್ಪತ್ರೆಯ ರಕ್ತನಿಧಿಯಿಂದ ರಕ್ತವನ್ನು ತಂದು ವರ್ಗಾವಣೆ ಮಾಡಲಾಗಿತ್ತು. ಬಳಿಕ ಸರ್ಕಾರಿ ಆಸ್ಪತ್ರೆಯಿಂದ ತಂದಿದ್ದ ರಕ್ತ ಎಚ್‍ಐವಿ ಸೋಂಕಿತ ವ್ಯಕ್ತಿಯದ್ದು ಎಂದು ಬೆಳಕಿಗೆ ಬಂದಿದೆ. ಅಷ್ಟೊತ್ತಿಗಾಗಲೇ ಗರ್ಭಿಣಿ ಎಚ್‍ಐವಿ ಸೋಂಕಿಗೆ ಒಳಗಾಗಿದ್ದರು.

ರಾಜ್ಯವನ್ನೇ ಆತಂತಕ್ಕೆ ಗುರಿಮಾಡಿದ್ದ ಈ ಪ್ರಕರಣದಿಂದ ಮದ್ರಾಸ್ ಹೈಕೋರ್ಟ್ ಆರೋಗ್ಯ ಇಲಾಖೆ ವಿರುದ್ಧ ಜಾಟಿ ಬೀಸಿದೆ. ಗರ್ಭಿಣಿಗೆ ಎಚ್‍ಐವಿ ಸೋಂಕಿತ ವ್ಯಕ್ತಿಯ ರಕ್ತ ವರ್ಗಾವಣೆ ಸಂಬಂಧಿಸಿದ ಸಂಪೂರ್ಣ ವರದಿಯನ್ನು 2019 ಜನವರಿ 3ರಂದು ಕೋರ್ಟ್ ಗೆ ಸಲ್ಲಿಸಬೇಕು ಎಂದು ಮದ್ರಾಸ್ ನ್ಯಾಯಾಲಯ ಆದೇಶ ಹೊರಡಿಸಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *