ಚೆನ್ನೈನಲ್ಲಿ ನೀರಿಗೆ ಹಾಹಾಕಾರ – ಮಳೆಗಾಗಿ ತಮಿಳುನಾಡು ಸರ್ಕಾರದಿಂದ ಯಜ್ಞ

Public TV
2 Min Read

ಚೆನ್ನೈ: ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿ ನೀರಿನ ಹಾಹಾಕಾರ ಮುಂದುವರಿದಿದ್ದು, ರಾಜ್ಯ ಸರ್ಕಾರ ವರುಣನ ಮೊರೆ ಹೋಗಿದೆ.

ತಮಿಳುನಾಡು ಸರ್ಕಾರ ಪೆರೂರಿನ ಪಟ್ಟೀಶ್ವರ ದೇವಸ್ಥಾನದಲ್ಲಿ ಹಾಗೂ ಎಐಎಡಿಎಂಕೆ ನಾಯಕರು ಪುರಸವಾಲ್ಕಂನಲ್ಲಿರುವ ಅರುಲ್ಮಿಗು ಗಂಗಾದೀಶ್ವರ ದೇವಸ್ಥಾನದಲ್ಲಿ ವರುಣನಿಗಾಗಿ ಯಜ್ಞ ನಡೆಸುತ್ತಿವೆ.

ಚೆನ್ನೈ ನಗರದಲ್ಲಿ ಅನೇಕ ಕೆರೆಗಳನ್ನು ಒತ್ತುವರಿ ಮಾಡಲಾಗಿದೆ. ಅಷ್ಟೇ ಅಲ್ಲದೆ ಕೆಲವು ಕೆರೆಗಳನ್ನು ನೆಲಸಮಗೊಳಿಸಿ ಐಟಿ ಕಂಪನಿಗಳನ್ನು ತೆರೆಯಲಾಗಿದೆ. ಇದರಿಂದಾಗಿ ನೀರಿನ ಸಂಗ್ರಹಿಸಲು ಸೂಕ್ತ ವ್ಯವಸ್ಥೆಯಿಲ್ಲ ಸರ್ಕಾರ ಭಾರೀ ಸವಾಲುಗಳನ್ನು ಎದುರಿಸುತ್ತಿದೆ. ಹೀಗಾಗಿ ನೀರಿನ ಹಾಹಾಕಾರವನ್ನು ಚೆನ್ನೈ ಎದುರಿಸುತ್ತಿದೆ ಎಂದು ವರದಿಯಾಗಿದೆ.

2400 ಎಕರೆ ಕಣ್ಮರೆ:
ಚೆನ್ನೈ ಕಳೆದ ನಾಲ್ಕು ದಶಕಗಳಲ್ಲಿ ವೆಲಾಚೇರಿ ಸರೋವರದ ಹತ್ತು ಪಟ್ಟು ಪ್ರಮಾಣದಲ್ಲಿ ಜಲಮೂಲಗಳನ್ನು ಕಳೆದುಕೊಂಡಿದೆ. ಹೀಗಾಗಿ ದೀರ್ಘಕಾಲಿಕ ನೀರಿನ ಮೂಲಗಳಿಂದ ಚೆನ್ನೈ ಪರದಾಡುವಂತಾಗಿದೆ.

ವೇಗವಾಗಿ ಬೆಳೆದ ನಗರೀಕರಣದಿಂದ ಚೆನ್ನೈನ ನಗರದ ವ್ಯಾಪ್ತಿಯ ಕೆರೆಗಳು ಮತ್ತು ಗದ್ದೆಗಳು ನಿಧಾನವಾಗಿ ಮುಚ್ಚಲ್ಪಟ್ಟವು. ಈ ನಿರ್ಲಕ್ಷ್ಯದ ಅತ್ಯಂತ ಭೀಕರವಾದ ದೋಷಾರೋಪಣೆಯು ಪ್ರವಾಹದ ನಂತರ ತಮಿಳುನಾಡು ವಿಧಾನಸಭೆಯಲ್ಲಿ ಮಂಡಿಸಲಾದ ಮಹಾಲೇಖಪಾಲರ (ಸಿಎಜಿ) ವರದಿಯಲ್ಲಿ ಬೆಳಕಿಗೆ ಬಂದಿತ್ತು.

ಈ ವರದಿಯಲ್ಲಿ ನಿಯಮಗಳನ್ನು ಪಾಲಿಸದೆ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡುವಲ್ಲಿ ಚೆನ್ನೈ ಮಹಾನಗರ ಅಭಿವೃದ್ಧಿ ಪ್ರಾಧಿಕಾರದ (ಸಿಎಂಡಿಎ) ಲೋಪವನ್ನು ಎತ್ತಿ ತೋರಿಸಿದೆ. ಸಿಎಂಡಿಎ ನಿರ್ಲಕ್ಷ್ಯದಿಂದಾಗಿ 1979 ಮತ್ತು 2016ರ ನಡುವೆ ಜಲಮೂಲಗಳ ಪ್ರದೇಶವು 2389 ಎಕರೆಗಳಷ್ಟು ಕುಗ್ಗಿದೆ ಎಂದು ತಿಳಿಸಿತ್ತು.

ಮೊಗಪ್ಪೈರ್ ಸರೋವರ, ಅಂಬತ್ತೂರು ಟ್ಯಾಂಕ್ ಮತ್ತು ಪಲ್ಲಿಕರಾನೈ ಮಾರ್ಷ್ ಇತರ ಜಲಮೂಲಗಳು ಕುಗ್ಗುತ್ತಿರುವ ಬಗ್ಗೆಯೂ ವರದಿಯಲ್ಲಿ ತಿಳಿಸಲಾಗಿದೆ.

ನಗರದಲ್ಲಿನ ಜಲಾಶಯಗಳು, ಸರೋವರಗಳು, ಟ್ಯಾಂಕ್‍ಗಳ ಪುನಃಸ್ಥಾಪನೆ ಮತ್ತು ಸರಿಯಾದ ನಿರ್ವಹಣೆ ಕಳೆದ ಎರಡು ದಶಕಗಳಿಂದ ನಿರ್ಲಕ್ಷ್ಯೆಗೆ ಒಳಗಾಗಿದೆ. ಜಲಮೂಲಗಳನ್ನು ನಿರ್ಮಿಸಲು ಮತ್ತು ಪುನಃಸ್ಥಾಪಿಸಲು ಕಳಪೆ ಪ್ರಯತ್ನಗಳು ನಡೆದಿವೆ.

ಜಲಮೂಲಗಳ ಪುನಃಸ್ಥಾಪನೆಗೆ ಸಂಬಂಧಿಸಿದಂತೆ, ನೀರಿನ ಕೊರತೆ ಕುರಿತು ಮದ್ರಾಸ್ ಹೈಕೋರ್ಟ್ ಗೆ ಚೆನ್ನೈ ಮೆಟ್ರೋ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಮುಖ್ಯ ಎಂಜಿನಿಯರ್ ಮಾಹಿತಿ ನೀಡಿ, ನಗರದ 210ರ ಜಲಮೂಲಗಳ ಪೈಕಿ ಐದು ಮಾತ್ರ ಪುನಃಸ್ಥಾಪಿಸಲಾಗಿದೆ. ಇದು 2017 ರಲ್ಲಿ ಪ್ರಾರಂಭವಾದ ಸಹಕಾರಿ ನೀರು ನಿರ್ವಹಣಾ ಯೋಜನೆಗೆ ಸಂಬಂಧಿಸಿದೆ. ಅನೇಕ ಪ್ರದೇಶಗಳಲ್ಲಿನ ಸಮುದಾಯಗಳು ಸ್ವಯಂಸೇವಾ ಸಂಸ್ಥೆಗಳು ಸ್ವಯಂ ಪ್ರೇರಣೆಯಿಂದ ಕೆರೆಗಳ ಅಭಿವೃದ್ಧಿಗೆ ಶ್ರಮಿಸುತ್ತಿವೆ ಎಂದು ತಿಳಿಸಿದ್ದಾರೆ.

ಸಾಮರ್ಥ್ಯ ಇಳಿಕೆ:
ಪೂಂಡಿ, ರೆಡ್ ಹಿಲ್ಸ್, ಚೋಲವರಂ ಮತ್ತು ಚೆಂಬರಂಬಕ್ಕಂ ನಾಲ್ಕು ಪ್ರಮುಖ ಜಲಾಶಯಗಳ ನಿರ್ವಹಣೆ ಸರಿಯಾಗಿ ಆಗುತ್ತಿಲ್ಲ. ಹೀಗಾಗಿ ಅವುಗಳ ಶೇಖರಣಾ ಸಾಮರ್ಥ್ಯದಲ್ಲಿ ಶೇ.20 ರಷ್ಟು ಇಳಿಕೆಯಾಗಿದೆ. ಚೆನ್ನೈಗೆ ನೀರು ಸರಬರಾಜಿಗಾಗಿ 1944ರಲ್ಲಿ ಪೂಂಡಿ ಜಲಾಶಯ ನಿರ್ಮಿಸಲಾಯಿತು. ಥರ್ವೊಯ್ ಕಂಡಿಗೈನಲ್ಲಿ ದೀರ್ಘಾವಧಿಯ ಐದನೇ ಜಲಾಶಯವನ್ನು 2013ರಲ್ಲಿ ಕಾರ್ಯಾರಂಭ ಮಾಡಲಾಯಿತು. ಆದರೆ ಭೂಸ್ವಾಧೀನ ವಿಳಂಬದಿಂದಾಗಿ ಈ ವರ್ಷದ ಅಂತ್ಯದವರೆಗೂ ಜಲಾಶಯವು ಕಾರ್ಯನಿರ್ವಹಿಸದಂತಾಗಿದೆ.

ನಗರದಲ್ಲಿ ಹರಿಯುವ ಮೂರು ನದಿಗಳು ಹೆಚ್ಚು ಕಲುಷಿತಗೊಂಡಿದ್ದು, ಅವುಗಳ ಶುದ್ಧಿಕರಣಕ್ಕೆ ಸರ್ಕಾರ ಯಾವುದೇ ಕ್ರಮಕೈಗೊಂಡಿಲ್ಲ. ಸಿಎಜಿ ವರದಿಯು ರಾಜ್ಯದ ಕಡೆಯಿಂದ ಈ ವೈಫಲ್ಯವನ್ನು ಎತ್ತಿ ತೋರಿಸುತ್ತಿದೆ. ಕೊಸಸ್ಥಲಿಯಾರ್ ನದಿಯಲ್ಲಿ ಕೈಗಾರಿಕಾ ತಾಜ್ಯವನ್ನ ಹರಿಬಿಡಲಾಗುತ್ತಿದೆ. ಅಡ್ಯಾರ್ ನದಿಯಲ್ಲೂ ಕಸದ ರಾಶಿ ಹೆಚ್ಚಾಗಿತ್ತು. ರಾಷ್ಟ್ರೀಯ ಹಸಿರು ನ್ಯಾಯಪೀಠ ಈ ವಿಚಾರಕ್ಕೆ ಸಂಬಂಧಿಸಿದ ಅರ್ಜಿ ವಿಚಾರಣೆಯಲ್ಲಿ ರಾಜ್ಯ ಸರ್ಕಾರಕ್ಕೆ 100 ಕೋಟಿ ರೂ. ದಂಡ ವಿಧಿಸಿತ್ತು.

[wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

Share This Article
Leave a Comment

Leave a Reply

Your email address will not be published. Required fields are marked *