Tejas Crash | ವಿಂಗ್‌ ಕಮಾಂಡರ್‌ ನಮಾಂಶ್‌ ಪಾರ್ಥೀವ ಶರೀರಕ್ಕೆ ಸುಲೂರು ವಾಯುನೆಲೆಯಲ್ಲಿ ಅಂತಿಮ ನಮನ

2 Min Read

ಚೆನ್ನೈ: ದುಬೈ ಏರ್‌ ಶೋ (Dubai Airshow) ವೇಳೆ ತೇಜಸ್ ವಿಮಾನ ಪತನ ದುರಂತದಲ್ಲಿ ಪ್ರಾಣ ಕಳೆದುಕೊಂಡ ವಿಂಗ್ ಕಮಾಂಡರ್ ನಮಾಂಶ್ ಸಯಾಲ್ (Namansh Syal) ಅವರ ಪಾರ್ಥಿವ ಶರೀರವನ್ನ ಭಾನುವಾರ (ಇಂದು) ಬೆಳಗ್ಗೆ ಕೊಯಮತ್ತೂರಿನ ಸುಲೂರು ವಾಯುನೆಲೆಗೆ (Sulur Air Base) ತಂದು ಅಂತಿಮ ನಮನ ಸಲ್ಲಿಸಲಾಯಿತು.

ಭಾರತೀಯ ವಾಯುಪಡೆ (IAF)ನ ಅಧಿಕಾರಿಯ ಮೃತದೇಹವನ್ನು ವಿಶೇಷ ವಿಮಾನದಲ್ಲಿ ಇಂದು ಭಾರತಕ್ಕೆ ತರಲಾಯಿತು. ಇದಕ್ಕೂ ಮುನ್ನ ಎಮಿರಾಟಿ ರಕ್ಷಣಾ ಪಡೆಗಳು ವಿದ್ಯುಕ್ತ ಗೌರವ ಸಲ್ಲಿಸಿ, ನಮಾಂಶ್‌ ಶೌರ್ಯ, ಸಾಹಸವನ್ನು ಶ್ಲಾಘಿಸಿದವು. ಅಲ್ಲದೇ ಯುನೈಟೆಡ್ ಅರಬ್ ಎಮಿರೇಟ್ಸ್‌ನ ಭಾರತೀಯ ರಾಯಭಾರಿ ದೀಪಕ್ ಮಿತ್ತಲ್ ಮತ್ತು ಕಾನ್ಸುಲೇಟ್ ಜನರಲ್ ಸತೀಶ್ ಶಿವನ್ ಕೂಡ ಅಂತಿಮ ಗೌರವ ಸಲ್ಲಿಸಿದ್ದರು. ಈ ಕುರಿತು ಯುಎಇಯಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಅಧಿಕೃತ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಕೂಡ ಹಂಚಿಕೊಂಡಿದೆ.

ಸದ್ಯ ಸಯಾಲ್‌ ಅವರ ಹುಟ್ಟೂರಿನಲ್ಲಿ ಅಂತ್ಯಕ್ರಿಯೆಗೆ ಸಕಲ ಸಿದ್ಧತೆ ನಡೆದಿವೆ. ಗ್ರಾಮಸ್ಥರು ಸಯಾಲ್‌ ಸಾವಿಗೆ ಸಂತಾಪ ಸೂಚಿಸಿದ್ದು, ಪಾರ್ಥೀವ ಶರೀರ ಆಗಮನಕ್ಕಾಗಿ ಕಾಯುತ್ತಿದ್ದಾರೆ. ಈ ನಡುವೆ ಭಾರತೀಯ ವಾಯುಪಡೆ ಅಧಿಕಾರಿಯೂ ಆಗಿರುವ ಸಯಾಲ್‌ ಅವರ ಪತ್ನಿ, 6 ವರ್ಷದ ಮಗಳು ಹಾಗೂ ಪೋಷಕರು ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯ ನಾಗ್ರೋಟಾ ಬಾಗ್ವಾನ್‌ನಿಂದ ಸುಲೂರು ವಾಯುನೆಲೆಗೆ ಆಗಮಿಸಿದ್ದಾರೆ.

ʻಈ ಅಪಘಾತದ ಬಗ್ಗೆ ತಿಳಿದು ನಮ್ಮೆಲ್ಲರಿಗೂ ತುಂಬಾ ದುಃಖವಾಗಿದೆ. ಸಯಾಲ್‌ ಊರಿನಲ್ಲಿ ಇಲ್ಲದಿರಬಹುದು, ಆದ್ರೆ ಅವರ ಕುಟುಂಬ ಇಲ್ಲಿದೆ. ಅವರು ನಮ್ಮ ಹೆಮ್ಮೆ, ಹಾಗಾಗಿ ಅಂತಿಮ ನಮನ ಸಲ್ಲಿಸಲು, ಅವರ ಮನೆಗೆ ಆಗಮಿಸಿದ್ದೇವೆʼ ಅಂತ ಗ್ರಾಮಸ್ಥರಾದ ಮೆಹರ್ ಚಂದ್ ಅನ್ನೋರು ತಿಳಿಸಿದ್ದಾರೆ.

ನಮಾಂಶ್‌ ದುರಂತ ಸಾವಿಗೀಡಾಗಿದ್ದು ಹೇಗೆ?
2 ದಿನಗಳ ಹಿಂದಷ್ಟೇ ದುಬೈನ ಅಲ್‌ ಮುಕ್ತೌಮ್‌ ಏರ್‌ಪೋರ್ಟ್‌ನಲ್ಲಿ ನಡೆಯುತ್ತಿದ್ದ ʻದುಬೈ ಅಂತಾರಾಷ್ಟ್ರೀಯ ಏರ್‌ ಶೋʼನಲ್ಲಿ (Dubai Air Show) ಹಿಂದೂಸ್ತಾನ್‌ ಏರೋನಾಟಿಕ್ಸ್ ಲಿಮಿಟೆಡ್ (HAL) ನಿರ್ಮಿತ ತೇಜಸ್‌ ಲಘು ಯುದ್ಧ ವಿಮಾನ ಪತನಗೊಂಡಿತು. ಇದೇ ದುರಂತದಲ್ಲಿ ಪೈಲಟ್‌ ಆಗಿದ್ದ ವಿಂಗ್‌ ಕಮಾಂಡರ್‌ ಸಾವನ್ನಪ್ಪಿರುವುದಾಗಿ ಭಾರತೀಯ ವಾಯುಪಡೆ ಅಧಿಕೃತವಾಗಿ ಘೋಷಣೆ ಮಾಡಿದೆ.

Share This Article