ಪ್ರೇಮ ನಿವೇದನೆಯನ್ನ ಒಪ್ಪದ್ದಕ್ಕೆ 14 ಬಾರಿ ಇರಿದು ಆತ್ಮಹತ್ಯೆ ಮಾಡಿಕೊಂಡ ಪಾಗಲ್ ಪ್ರೇಮಿ

Public TV
2 Min Read

ಚೆನ್ನೈ: ಪ್ರೇಮ ನಿವೇದನೆಯನ್ನು ಒಪ್ಪಲಿಲ್ಲವೆಂದು ಯುವಕನೊಬ್ಬ ವಿದ್ಯಾರ್ಥಿನಿಯನ್ನು 14 ಬಾರಿ ಇರಿದು, ತಾನು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ತಮಿಳುನಾಡಿನ ತಿರುಚ್ಚಿಯಲ್ಲಿ 16 ವರ್ಷದ ವಿದ್ಯಾರ್ಥಿನಿ ಪ್ರೀತಿಯನ್ನು ನಿರಾಕರಿಸಿದ್ದಕ್ಕಾಗಿ 22 ವರ್ಷದ ಯುವಕ ಚಾಕುವಿನಿಂದ 14 ಬಾರಿ ಇರಿದಿದ್ದಾನೆ. ಆರೋಪಿಯನ್ನು ಕೇಶವನ್ ಎಂದು ಗುರುತಿಸಲಾಗಿದ್ದು, ಪೊಲೀಸರು ಆತನನ್ನು ಹುಡುಕಲು ಮೂರು ವಿಶೇಷ ತಂಡಗಳನ್ನು ರಚಿಸಿಕೊಂಡಿದ್ದರು. ಆದರೆ ಅವನು ಶವವಾಗಿ ಪತ್ತೆಯಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಪಠ್ಯದಲ್ಲಿರುವ ತಮ್ಮ ಕವಿತೆ ವಾಪಸ್ ಪಡೆದ ಮತ್ತೊಬ್ಬ ಸಾಹಿತಿ 

ನಡೆದಿದ್ದೇನು?
ತಿರುಚ್ಚಿಯ ಅತಿಕುಲಂ ನಿವಾಸಿಯಾಗಿರುವ ವಿದ್ಯಾರ್ಥಿನಿ 11ನೇ ತರಗತಿ ಓದುತ್ತಿದ್ದಳು. ಪರೀಕ್ಷೆ ಮುಗಿಸಿ ಸಂತ್ರಸ್ತೆ ತನ್ನ ಸಂಬಂಧಿಯನ್ನು ಭೇಟಿಯಾಗಲು ತೆರಳುತ್ತಿದ್ದಾಗ ಆರೋಪಿ ಕೇಶವನ್ ಆಕೆಯನ್ನು ಹಿಂಬಾಲಿಸಿಕೊಂಡು ರೈಲ್ವೇ ಮೇಲ್ಸೇತುವೆ ಬಳಿ ತಡೆದಿದ್ದಾನೆ.

ಈ ವೇಳೆ ಕೇಶವನ್ ಸಂತ್ರಸ್ತೆಯನ್ನು ಪ್ರೀತಿಸುವಂತೆ ಒತ್ತಾಯಿಸಿದ್ದಾನೆ. ಆದರೆ ಆಕೆ ನಿರಕರಿಸಿದ್ದು, ತಕ್ಷಣ ಅವಳನ್ನು 14 ಬಾರಿ ಚುಚ್ಚಿದ್ದಾನೆ. ಸಹಾಯಕ್ಕಾಗಿ ಸಂತ್ರಸ್ತೆ ಕಿರುಚಿಕೊಂಡಿದ್ದು, ಆರೋಪಿ ಚಾಕನ್ನು ಅಲ್ಲೇ ಎಸೆದು ಓಡಿ ಹೋಗಿದ್ದಾನೆ.

CRIME 2

ಸ್ಥಳೀಯರು ಸಂತ್ರಸ್ತೆಯ ದೇಹದಿಂದ ರಕ್ತ ಸುರಿಯುತ್ತಿರುವುದನ್ನು ಗಮನಿಸಿದ್ದು, ತಕ್ಷಣ ಸ್ಥಳೀಯ ಆಸ್ಪತ್ರೆಗೆ ಸೇರಿಸಿದ್ದಾರೆ. ಆಸ್ಪತ್ರೆ ಸಿಬ್ಬಂದಿ ಆಕೆಯನ್ನು ತುರ್ತು ಚಿಕಿತ್ಸೆಗೆ ದಾಖಲಿಸಿಕೊಂಡಿದ್ದಾರೆ. ನಂತರ ಪೊಲೀಸರಿಗೆ ಘಟನೆ ಕುರಿತು ತಿಳಿಸಲಾಗಿದೆ. ಸ್ಥಳಕ್ಕೆ ಬಂದ ಪೊಲೀಸರು ಇದು ತಿರುಚ್ಚಿಯ ಪೊತಮೆಟ್ಟುಪಟ್ಟಿ ನಿವಾಸಿ ಕೇಶವನ್ ಮಾಡಿರುವ ಕೃತ್ಯ ಎಂದು ಪತ್ತೆ ಮಾಡಿದ್ದಾರೆ. ಆರೋಪಿಗಾಗಿ ಹುಡುಕಾಟ ನಡೆಸಲು ಪ್ರಾರಂಭಿಸಿದ್ದರು.

ಘಟನೆ ಕುರಿತು ಟ್ವೀಟ್ ಮಾಡಿದ ಕರೂರಿನ ಕಾಂಗ್ರೆಸ್ ಸಂಸದೆ ಜೋತಿಮಣಿ, ಶಾಲಾ ವಿದ್ಯಾರ್ಥಿನಿಯೊಬ್ಬಳನ್ನು 14 ಬಾರಿ ಇರಿದಿರುವ ಸುದ್ದಿ ಕೇಳಿ ಆಘಾತವಾಯಿತು. ಕೇಶವನ್‍ನನ್ನು ಬಂಧಿಸಲು ಮೂರು ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ(ಎಸ್‍ಪಿ) ಅವರೊಂದಿಗೆ ಮಾತನಾಡಿದ್ದೇನೆ ಎಂದು ಹೇಳಿದರು. ಇದನ್ನೂ ಓದಿ: ಭಾರತ, ಪಾಕಿಸ್ತಾನ ಪರಸ್ಪರ ವ್ಯಾಪಾರದಿಂದ ಬಹಳಷ್ಟು ಲಾಭ ಹೊಂದಿದೆ: ಪಾಕ್ ಪ್ರಧಾನಿ 

ಶವವಾಗಿ ಪತ್ತೆ
ಮಂಗಳವಾರ ರಾತ್ರಿ ರೈಲ್ವೆ ಹಳಿ ಮೇಲೆ ಆರೋಪಿ ಕೇಶವನ್ ಶವವಾಗಿ ಪತ್ತೆಯಾಗಿದ್ದಾನೆ. ಕೇಶವನ್‍ನನ್ನು ಹಿಡಿಯಲು ಪೊಲೀಸರು ಮೂರು ತಂಡಗಳನ್ನು ರಚಿಸಿದಾಗ, ಮನಪ್ಪರೈ ಬಳಿಯ ರೈಲ್ವೆ ಹಳಿಗಳ ಮೇಲೆ ಶವವೊಂದು ಪತ್ತೆಯಾಗಿದೆ. ಪೊಲೀಸರು ಸ್ಥಳಕ್ಕೆ ಹೋಗಿ ಶವದ ಪಕ್ಕದಲ್ಲಿದ್ದ ಫೋನ್‍ನಲ್ಲಿ ಅವರ ಅಪ್ಪನಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಬಂದ ತಂದೆಯೂ ಅದು ಕೇಶವನ್ ಎಂದು ಗುರುತಿಸಿದ್ದಾರೆ.

ಜೈಲು ಸೇರಿದ್ದ ಪ್ರೇಮಿ
ಜೂನ್ 2021 ರಲ್ಲಿ ಅದೇ ಹುಡುಗಿಯನ್ನು ಕೇಶವನ್ ಅಪಹರಿಸಿದ್ದನು. ಈ ಹಿನ್ನೆಲೆ ಈಗಾಗಲೇ ಅವನ ವಿರುದ್ಧ ಮಕ್ಕಳ ಸಂರಕ್ಷಣಾ ಕಾಯ್ದೆ 2012(ಪೋಕ್ಸೊ) ಅಡಿಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಲಾಗಿತ್ತು. ಕೇಶವನ್ ಇತ್ತೀಚೆಗೆ ಜೈಲಿನಿಂದ ಬಿಡುಗಡೆಗೊಂಡಿದ್ದನು.

Share This Article
Leave a Comment

Leave a Reply

Your email address will not be published. Required fields are marked *