ಪಂಚೆ, ಶರ್ಟಿನಲ್ಲಿ ಮಿಂಚಿದ ಪ್ರಧಾನಿ ಮೋದಿ

Public TV
2 Min Read

ಚೆನ್ನೈ; ಪ್ರಧಾನಿ ನರೇಂದ್ರ ಮೋದಿಯವರು ಇಂದು ಚೆನ್ನೈನ ಮಹಾಬಲಿಪುರಂನಲ್ಲಿ ದಕ್ಷಿಣ ಭಾರತದ ಉಡುಗೆಯಾದ ಪಂಚೆ, ಶರ್ಟ್ ಹಾಗೂ ಶಲ್ಯ ಧರಿಸಿ ಮಿಂಚಿದ್ದಾರೆ.

ಹೌದು. ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರು ಎರಡು ದಿನಗಳ ಅನೌಪಚಾರಿಕ ಭೇಟಿಗೆಂದು ಬಂದಿದ್ದಾರೆ. ಈ ವೇಳೆ ಚೆನ್ನೈನ ಮಹಾಬಲಿಪುರಂನಲ್ಲಿ ಪ್ರಧಾನಿಯವರು ಚೀನಾ ಅಧ್ಯಕ್ಷರನ್ನು ದಕ್ಷಿಣ ಭಾರತದ ಉಡುಗೆ ತೊಟ್ಟು ಸ್ವಾಗತಿಸಿದ್ದಾರೆ.

ಸಾಮಾನ್ಯವಾಗಿ ಪ್ರಧಾನಿಯವರು ಬಿಳಿ ಬಣ್ಣದ ಕುರ್ತಾದಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಆದರೆ ಈ ಬಾರಿ ಪ್ರಧಾನಿಯವರು ಪಂಚೆ ತೊಟ್ಟಿದ್ದು, ಇದೀಗ ಅವರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಇತ್ತೀಚೆಗಷ್ಟೇ ಪ್ರಧಾನಿಯವರನ್ನು ಹಾಡಿಹೊಗಳಿದ್ದ ಅಣ್ಣಾಮಲೈ ಅವರು ಮೋದಿಯವರ ಫೋಟೋವನ್ನು ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಿಕೊಂಡಿದ್ದು, ಸಾಂಪ್ರದಾಯಿಕ ಉಡುಗೆ ತೊಟ್ಟಿದ್ದಕ್ಕೆ ಕೈಮುಗಿದಿದ್ದಾರೆ.

ಅನೌಪಚಾರಿಕ ಶೃಂಗಸಭೆ ವೇಳೆ ದ್ವಿಪಕ್ಷೀಯ ಸಂಬಂಧವೃದ್ಧಿ ಬಗ್ಗೆ ಚರ್ಚೆ ನಡೆಸಲಿದ್ದು, ಜಾಗತಿಕ, ಪ್ರಾದೇಶಿಕ ಮಹತ್ವದ ವಿಚಾರಗಳ ಬಗ್ಗೆ ಮಾತುಕತೆ ನಡೆಯಲಿದೆ. ಒಂದು ವೇಳೆ ಜಿನ್‍ಪಿಂಗ್ ಏನಾದರೂ ಕಾಶ್ಮೀರ ವಿಷಯ ಪ್ರಸ್ತಾಪಿಸಿದರೆ ವಿಶೇಷ ಸ್ಥಾನಮಾನ ರದ್ದುಗೊಳಿಸಲು ಇರುವ ಕಾರಣಗಳ ಬಗ್ಗೆ ಮೋದಿ ತಿಳಿಸಿ ಹೇಳಿದ್ದಾರೆ. ಲಡಾಖನ್ನು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶ ರಚನೆ, ಅರುಣಾಚಲ ಪ್ರದೇಶದ ಜೊತೆಗಿನ ಗಡಿ ವಿವಾದದ ಬಗ್ಗೆಯೂ ಮೋದಿ ವಿವರಣೆ ನೀಡಿ ವಿಶ್ವಾಸ ವೃದ್ಧಿ ಕ್ರಮಗಳ ಪ್ರಸ್ತಾಪ ಇರಿಸುವ ಸಾಧ್ಯತೆ ಇದೆ.

ಮಹಾಬಲಿಪುರಂ ಯಾಕೆ?
ದೆಹಲಿ, ಮುಂಬೈ, ಬೆಂಗಳೂರು ಕೊನೇ ಪಕ್ಷ ಚೆನ್ನೈ ನಗರದಲ್ಲಾದರೂ ಭೇಟಿಯಾಗಬಹುದಿತ್ತಲ್ಲ. ಅದನ್ನು ಬಿಟ್ಟು ಮಹಾಬಲಿಪುರಂ ನಗರವನ್ನೇ ಚೀನಾದ ಅಧ್ಯಕ್ಷ ಷಿ ಜಿನ್‍ಪಿಂಗ್ ಆಯ್ಕೆ ಮಾಡಿಕೊಂಡಿದ್ದು ಯಾಕೆ ಎನ್ನುವ ಪ್ರಶ್ನೆಗೆ ಇತಿಹಾಸ ಉತ್ತರ ನೀಡುತ್ತದೆ.

ಚೀನಾ- ಭಾರತದ ನಡುವೆ 2 ಸಾವಿರ ವರ್ಷಗಳ ಸಂಬಂಧ ಇದ್ದು ಚೀನಾ, ಆಗ್ನೇಯ ಏಷ್ಯಾದ ದೇಶಗಳ ರಫ್ತು-ಆಮದು ಹೆಬ್ಬಾಗಿಲು ಮಹಾಬಲಿಪುರಂ. ಪಲ್ಲವರ ಕಾಲದಲ್ಲಿ ಚೀನಾ ಜೊತೆ ರಕ್ಷಣೆ, ವ್ಯಾಪಾರದ ನಂಟು ಉತ್ತಮವಾಗಿತ್ತು. ಚೀನಾ ಜೊತೆ ಸಂಪರ್ಕ ಸಾಧಿಸಿದ್ದಕ್ಕೆ ಚೀನಾ ಲಿಪಿಯ ನಾಣ್ಯ, ಶಾಸನಗಳು ಪತ್ತೆಯಾಗಿವೆ. ಭಾರತ-ಚೀನಾ ನಡುವೆ ರೇಷ್ಮೆ, ಸಾಂಬಾರ ಪದಾರ್ಥಗಳ ವ್ಯಾಪಾರದ ವಹಿವಾಟು ಹೆಚ್ಚಾಗಿ ನಡೆಯುತಿತ್ತು. ಪಲ್ಲವರ ಕಾಲದಲ್ಲಿ ಕಾಂಚೀಪುರ ರೇಷ್ಮೆ ಉದ್ದಿಮೆಗೆ ಬೇಕಾದ ಕಚ್ಚಾವಸ್ತು ಚೀನಾದಿಂದ ಆಮದು ಆಗುತಿತ್ತು. ಚೀನೀ ಯಾತ್ರಿಕ ಹ್ಯೂಯೆನ್‍ತ್ಸಾಂಗ್ 7ನೇ ಶತಮಾನದಲ್ಲಿ ಕಾಂಚೀಪುರಕ್ಕೆ ಭೇಟಿ ನೀಡಿದ ಬಳಿಕ ಸಂಬಂಧ ಮತ್ತಷ್ಟು ಗಟ್ಟಿಯಾಯಿತು ಮತ್ತು ಈ ಅವಧಿಯಲ್ಲಿ ಚೀನಾಗೆ ಬೌದ್ಧಧರ್ಮವು ಪಸರಿಸಿತ್ತು ಎಂದು ಇತಿಹಾಸ ಹೇಳುತ್ತದೆ.

ಮಹಾಬಲಿಪುರಂನಲ್ಲಿ ಅಂಥದ್ದೇನಿದೆ?
ಮಹಾಬಲಿಪುರಂನ ಪ್ರಾಚೀನ ಹೆಸರು ಮಾಮಲ್ಲಪುರಂ ಆಗಿದ್ದು 7-9ನೇ ಶತಮಾನದಲ್ಲಿ ಪಲ್ಲವರ ಕಾಲದ ಪ್ರಮುಖ ಬಂದರು ನಗರಿ ಇದಾಗಿದೆ. ಚೆನ್ನೈನಿಂದ 50 ಕಿ.ಮೀ. ದೂರದಲ್ಲಿ ಬಂಗಾಳಕೊಲ್ಲಿ ಅಭಿಮುಖವಾಗಿರುವ ಮಾಮಲ್ಲಪುರಂ ಬಂದರು ಜೊತೆಗೆ ವಾಸ್ತುಶಿಲ್ಪ ಶ್ರೀಮಂತಿಕೆ ಹೊಂದಿದೆ. ಪಂಚರಥ, ಕೃಷ್ಣನ ಬೆಣ್ಣೆಮುದ್ದೆ ಬಂಡೆ, ಅರ್ಜುನ ತಪಸ್ಸಿನ ಶಿಲಾಕೆತ್ತನೆ, ತೀರ ಪ್ರದೇಶದಲ್ಲಿ ದೇವಾಲಯವಿದೆ. ಈ ಐತಿಹಾಸಿಕ ತಾಣ, ದೇವಾಲಯಗಳನ್ನು ಜಿನ್‍ಪಿಂಗ್-ಮೋದಿ ವೀಕ್ಷಿಸಲಿದ್ದಾರೆ. ಅದರಲ್ಲೂ ತೀರ ಪ್ರದೇಶದ ದೇವಾಲಯ ದಕ್ಷಿಣ ಭಾರತದ ಪುರಾತನ ದೇವಾಲಯವಾಗಿದ್ದು ಯುನೆಸ್ಕೋ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಗುರುತಿಸಿಕೊಂಡಿದೆ. ಯೂರೋಪ್‍ನ ಪ್ರವಾಸಿಗ ಮಾರ್ಕೋಪೋಲೋ ಇಲ್ಲಿಗೆ ಭೇಟಿ ನೀಡಿದ್ದ.

Share This Article
Leave a Comment

Leave a Reply

Your email address will not be published. Required fields are marked *