ತಿರುಪತಿ ಬಳಿಕ ತಮಿಳುನಾಡಿನ ಪಳನಿ ದೇವಸ್ಥಾನ ಪ್ರಸಾದದಲ್ಲೂ ವಿವಾದ – ನಿರ್ದೇಶಕ ಮೋಹನ್‌ ಅರೆಸ್ಟ್‌

Public TV
2 Min Read

ಚೆನ್ನೈ: ಪಳನಿ ದೇವಸ್ಥಾನದಲ್ಲಿ (Palani temple) ನೀಡುವ ಪಂಚಾಮೃತ ಪ್ರಸಾದಕ್ಕೆ ಪುರುಷರಲ್ಲಿ ದುರ್ಬಲತೆ ಉಂಟುಮಾಡುವ ಔಷಧಿ ಬೆರಸಿದ್ದಾರೆ ಎಂಬ ಹೇಳಿಕೆ ನೀಡಿದ ಆರೋಪದ ಮೇಲೆ ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ ಮೋಹನ್‌ ಜಿ (Tamil director Mohan G) ಅವರನ್ನ ಬಂಧಿಸಲಾಗಿದೆ.

ತಿರುಪತಿ ಲಡ್ಡು (Tirupati laddu) ಪ್ರಸಾದಕ್ಕೆ ಪ್ರಾಣಿಗಳ ಕೊಬ್ಬು ಬೆರಸಿದ್ದಾರೆ ಎಂಬ ಆರೋಪದ ಬಗ್ಗೆ ಯೂಟ್ಯೂಬ್‌ ಚಾನೆಲ್‌ವೊಂದರ ಸಂದರ್ಶನದಲ್ಲಿ ಮೋಹನ್‌ ಮಾತನಾಡುತ್ತಿದ್ದರು. ಈ ವೇಳೆ ಪಳನಿ ದೇವಸ್ಥಾನದಲ್ಲಿ ಬಡಿಸುವ ಪಂಚಾಮೃತ ಪ್ರಸಾದಕ್ಕೆ ಪುರುಷರಲ್ಲಿ ದುರ್ಬಲತೆ ಉಂಟುಮಾಡುವ ಔಷಧಿ ಬೆರಸಲಾಗಿದೆ ಎಂದು ಆರೋಪಿಸಿದ್ದರು. ಅವರ ಈ ಹೇಳಿಕೆಯನ್ನು ಆಧರಿಸಿ ತಿರುಚ್ಚಿ ಸೈಬರ್‌ ಪೊಲೀಸರು (Trichy Cyber Police) ಬಂಧಿಸಿದ್ದಾರೆ. ಮಂಗಳವಾರ ಚೆನ್ನೈನಲ್ಲಿ ಬಂಧಿಸಿದ್ದು, ತಿರುಚ್ಚಿಗೆ ಕರೆತರಲಾಗುವುದು ಎಂದು ತಿರುಚ್ಚಿ ಜಿಲ್ಲಾ ಎಸ್ಪಿ ವರುಣ್ ಕುಮಾರ್ ತಿಳಿಸಿದ್ದಾರೆ.

ನಿರ್ದೇಶಕ ಮೋಹನ್‌ ಸಂದರ್ಶನದಲ್ಲಿ ಮಾತನಾಡುವಾಗ, ತಮಿಳುನಾಡಿನಲ್ಲೂ ಇಂತಹ ಘಟನೆಗಳು ನಡೆದಿವೆ. ಪಳನಿ ದೇವಸ್ಥಾನ ಪ್ರಸಾದದಲ್ಲಿ ಪುರುಷರಲ್ಲಿ ಶಕ್ತಿಹೀನತೆ ಉಂಟುಮಾಡುವ ಔಷಧ ಬೆರಸಿದ್ದರು ಅಂತ ಕೇಳಿದ್ದೆ. ಆದ್ರೆ ಅದನ್ನು ಮರೆಮಾಚಲಾಯಿತು. ನಮ್ಮ ಬಳಿ ಸಾಕ್ಷಿಯಿಲ್ಲದ ಕಾರಣ ಏನನ್ನೂ ಮಾತನಾಡಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಇದನ್ನೂ ಓದಿ: ಸನಾತನ ಧರ್ಮದ ಬಗ್ಗೆ 100 ಬಾರಿ ಯೋಚಿಸಿ ಮಾತನಾಡಿ: ಕಾರ್ತಿ ವಿರುದ್ಧ ಪವನ್‌ ಕಲ್ಯಾಣ್‌ ಕಿಡಿ

ಈ ಕುರಿತು ಪ್ರತಿಕ್ರಿಯೆ ನೀಡಿರುವ ಹಿಂದೂ ಧಾರ್ಮಿಕ ಮತ್ತು ಧರ್ಮ ದತ್ತಿ ಸಚಿವ ಸೇಕರ್ ಬಾಬು, ಪಳನಿ ದೇವಸ್ಥಾನ ಪಂಚಾಮೃತದ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ತಿರುಪತಿ ಲಡ್ಡಿನಲ್ಲಿ ಪ್ರಾಣಿ ಕೊಬ್ಬು ಮಿಶ್ರಣ ಆರೋಪ – ಸರ್ಕಾರಕ್ಕೆ 40 ಪುಟಗಳ ವರದಿ ಸಲ್ಲಿಸಿದ ಟಿಟಿಡಿ

2016ರಲ್ಲಿ ‘ಪಜ್ಯ ವನ್ನರಪೆಟ್ಟೈ ಚಿತ್ರದ ಮೂಲಕ ನಿರ್ದೇಶಕರಾಗಿ ವೃತ್ತಿ ಜೀವನ ಆರಂಭಿಸಿದ ಮೋಹನ್‌ ಜಿ. ಅನೇಕ ಹಿಟ್ಟ್‌ ಸಿನಿಮಾಗಳನ್ನ ಕೊಟ್ಟಿದ್ದಾರೆ. 2020ರಲ್ಲಿ ಇವರು ನಿರ್ದೇಶಿಸಿದ್ದ ದ್ರೌಪದಿ ಸಿನಿಮಾ ಭರ್ಜರಿ ಪ್ರದರ್ಶನ ಕಂಡಿತ್ತು. ಅಲ್ಲದೇ ‘ರುದ್ರ ತಾಂಡವಂ’, ‘ಬಕಾಸುರನ್’ ಅಂತಹ ಚಿತ್ರಗಳನ್ನು ನಿರ್ದೇಶಿಸಿ ಸೈ ಎನಿಸಿಕೊಂಡಿದ್ದಾರೆ. ಇದನ್ನೂ ಓದಿ: ತಿರುಪತಿ ಲಡ್ಡು ವಿವಾದದ ಬೆನ್ನಲ್ಲೇ ಪ್ರಸಾದದಲ್ಲಿ ಗುಟ್ಕಾ ಪತ್ತೆ – ಭಕ್ತೆಯಿಂದ ಆರೋಪ!

Share This Article