ಇನ್ನು ಮುಂದೆ ತಾಲೂಕು ಪಂಚಾಯಿತಿಯಿಂದ ಬಿಡುಗಡೆಯಾಗಲಿದೆ ಗೃಹಲಕ್ಷ್ಮಿ ಹಣ!

Public TV
1 Min Read

ಬೆಂಗಳೂರು: ಚುನಾವಣೆ ವೇಳೆ ಕಾಂಗ್ರೆಸ್‌ (Congress) ಪ್ರಕಟಿಸಿದ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆ (Gruhalakshmi Scheme) ಕಾರ್ಯವಿಧಾನದಲ್ಲೇ ಮಹತ್ವದ ಬದಲಾವಣೆ ಮಾಡಲು ರಾಜ್ಯ ಸರ್ಕಾರ (Karnataka Government) ಮುಂದಾಗಿದೆ.

ಹೌದು, ಇಲ್ಲಿಯವರೆಗೆ ರಾಜ್ಯ ಕಾರ್ಯದರ್ಶಿಯಿಂದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಿರ್ದೇಶಕರ ಮೂಲಕ ಹಣ ಪಾವತಿಯಾಗುತಿತ್ತು. ಆದರೆ ಇನ್ನು ಮುಂದೆ ರಾಜ್ಯ ಕಾರ್ಯದರ್ಶಿಯಿಂದ ತಾಲೂಕು ಪಂಚಾಯಿತಿಗೆ ಹಣ ಪಾವತಿ ಆಗಲಿದೆ. ತಾಲ್ಲೂಕು ಪಂಚಾಯಿತಿಯಿಂದ ನೇರವಾಗಿ ಫಲಾನುಭವಿಗಳಿಗೆ ಹಣ ತಲುಪಲಿದೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಿರ್ದೇಶಕರಿಗೆ ಇಲಾಖೆಯದ್ದೇ ಬಹಳಷ್ಟು ಜವಾಬ್ದಾರಿಯಿದೆ. ಈಗ ಗೃಹಲಕ್ಷ್ಮಿ ನಿಭಾಯಿಸುವುದು ಮತ್ತಷ್ಟು ಹೊರೆಯಾಗುತ್ತಿದೆ. ಈ ಹೊರೆ ತಪ್ಪಿಸಲು ಬದಲಾವಣೆ ಮಾಡಲು ಇಲಾಖೆ ಮುಂದಾಗಿದೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಆರಿಹೋಯ್ತು 46 ವರ್ಷದಿಂದ ಎಣ್ಣೆ, ಬತ್ತಿ ಇಲ್ಲದೇ ಉರಿಯುತ್ತಿದ್ದ ದೀಪನಾಥೇಶ್ವರದ 3 ದೀಪಗಳು

ಈಗಾಗಲೇ ರಾಜ್ಯ ಸರ್ಕಾರ ಮೂರು ತಿಂಗಳಿನಿಂದ ಗೃಹಲಕ್ಷ್ಮೀ ಯೋಜನೆಯ ಹಣವನ್ನು ಪಾವತಿ ಮಾಡಿಲ್ಲ. ಈಗ ಹಣ ಪಾವತಿಯ ಕಾರ್ಯವಿಧಾನದಲ್ಲೇ ಬದಲಾವಣೆ ಮಾಡಲು ಮುಂದಾಗಿದೆ. ಈ ವಿಚಾರದ ಬಗ್ಗೆ ಈಗ ಇಲಾಖೆ ಹಂತದಲ್ಲಿ ಚರ್ಚೆ ನಡೆಯುತ್ತಿದೆ. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಆರೋಗ್ಯ ಸ್ಥಿತಿ ಸುಧಾರಣೆಯಾದ ಬಳಿಕ ಅಧಿಕೃತ ಆದೇಶ ಪ್ರಕಟವಾಗುವ ಸಾಧ್ಯತೆಯಿದೆ.

ರಾಜ್ಯ ಸರ್ಕಾರದಲ್ಲಿ ಅಭಿವೃದ್ಧಿ ಕೆಲಸಗಳಿಗೆ ಹಣದ ಕೊರತೆಯಾಗಿದೆ ಎಂದು ಶಾಸಕರೇ ಮಾತನಾಡಿಕೊಳ್ಳುತ್ತಿದ್ದಾರೆ. ಈಗ ಗೃಹಲಕ್ಷ್ಮಿ ಕಂತು ಪಾವತಿಗೂ ಹಣದ ಕೊರತೆ ಉಂಟಾಗಿದೆ. ಹೀಗಾಗಿ 3 ಕಂತು ಪಾವತಿ ಮಾಡಿಲ್ಲ ಎಂದು ಎಂದು ಮಹಿಳೆಯರು ಮಾತನಾಡಿಕೊಳ್ಳುತ್ತಿದ್ದಾರೆ.

ತಾಲೂಕು ಪಂಚಾಯಿತಿಯಿಂದ ಹಣ ಬಿಡುಗಡೆಯಾದರೆ ಇದು ಅಕ್ರಮಕ್ಕೆ ಕಾರಣವಾಗಬಹುದು ಎಂಬ ಮಾತುಗಳು ಕೇಳಿ ಬಂದಿದೆ. ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ಹಣ ಪ್ರತಿ ತಿಂಗಳು ರೈತರ ಖಾತೆಗೆ ಜಮೆ ಆಗುತ್ತಿದೆ. ಇದು ದೇಶವ್ಯಾಪಿ ನಡೆಯುತ್ತಿರುವಾಗ ಗೃಹಲಕ್ಷ್ಮಿ ಹಣ ಪಾವತಿಗೆ ಕಷ್ಟ ಯಾಕೆ ಎಂಬ ಪ್ರಶ್ನೆ ಎದ್ದಿದೆ.

 

Share This Article