ಕನ್ನಡದಲ್ಲಿ ಮಾತಾಡೋಕೆ ಹೇಳಿ, ನಮಗೆ ಏನೂ ಅರ್ಥ ಆಗ್ತಿಲ್ಲ: ಪರಿಷತ್‌ ಕಲಾಪದಲ್ಲಿ ಗಲಾಟೆ

By
2 Min Read

ಬೆಂಗಳೂರು: ವಿಧಾನ ಪರಿಷತ್ ಕಲಾಪದಲ್ಲಿ ಇಂದು 420 ವಿಷಯದ ಕುರಿತು ಚರ್ಚೆ ನಡೆಯಿತು. ಈ ವೇಳೆ ಗಲಾಟೆಯಾದ ಪ್ರಸಂಗವೂ ನಡೆಯಿತು. ಕಾಂಗ್ರೆಸ್-ಬಿಜೆಪಿ ಸದಸ್ಯರ ನಡುವೆ ಮಾತಿನ ಚಕಮಕಿಗೆ ಕಾರಣವಾಯ್ತು.

ಬಜೆಟ್ ಮೇಲಿನ ಚರ್ಚೆ ವೇಳೆ ವಿಪಕ್ಷ ನಾಯಕ ಹರಿಪ್ರಸಾದ್ ಇಂಗ್ಲಿಷ್‌ನಲ್ಲಿ ಕೆಲ ವಿಷಯ ಪ್ರಸ್ತಾಪ ಮಾಡಿದರು. ಈ ವೇಳೆ ಎದ್ದು ನಿಂತ ಬಿಜೆಪಿ ಸದಸ್ಯ ಪ್ರಾಣೇಶ್, ಸ್ವಲ್ಪ ಕನ್ನಡದಲ್ಲಿ ಮಾತಾಡೋಕೆ ಹೇಳಿ. ನಮಗೆ ಏನು ಅರ್ಥ ಆಗ್ತಿಲ್ಲ ಎಂದು ಸಭಾಪತಿಗಳಿಗೆ ಮನವಿ ಮಾಡಿದರು. ಇದಕ್ಕೆ ಹರಿಪ್ರಸಾದ್ ನನಗೆ ಹಿಂದಿ, ಸಂಸ್ಕೃತ, ಇಂಗ್ಲಿಷ್ ಮಾತಾಡೋಕೆ ಬರುತ್ತೆ ಎಂದರು. ಈ ವೇಳೆ ಕನ್ನಡ, ಇಂಗ್ಲಿಷ್‌ನಲ್ಲಿ ಮಾತಾಡಿ ಹಿಂದಿ ಬೇಡ ಎಂದ ಸಭಾಪತಿ ಸಲಹೆ ನೀಡಿದರು. ಆಗ ಪ್ರಾಣೇಶ್ ನಮಗೆ ಟ್ರಾನ್ಸ್‌ಲೇಟರ್ ಕೊಡಿ ಎಂದು ಮನವಿ ಮಾಡಿದರು. ಇದನ್ನೂ ಓದಿ: ಸದನ ಬೀಗರ ಮನೆಯಲ್ಲ – ಸಚಿವರ ಗೈರಿಗೆ ಸಭಾಪತಿಗಳು ಗರಂ

ಬಳಿಕ ಮಾತು ಮುಂದುವರೆಸಿದ ಹರಿಪ್ರಸಾದ್, ನೀವು 430 ಅಂಶಗಳನ್ನು ಬಜೆಟ್ ಪುಸ್ತಕದಲ್ಲಿ ಮುದ್ರಿಸಿದ್ದೀರಾ. ಇದನ್ನು 420 ಎಂದು ಮಾಡಬೇಕಿತ್ತು ಎಂದರು. ಹರಿಪ್ರಸಾದ್ ಮಾತಿಗೆ ಬಿಜೆಪಿ ರವಿಕುಮಾರ್ ವಿರೋಧ ವ್ಯಕ್ತಪಡಿಸಿದರು. ಹರಿಪ್ರಸಾದ್ ಹೀಗೆ ಮಾತಾಡೋದು ಸರಿಯಲ್ಲ. ಜವಾಬ್ದಾರಿ ಸ್ಥಾನದಲ್ಲಿ ಇರುವವರು 420 ಅಂತ ಸೇರಿಸಿ ಅನ್ನೋದು ಸರಿಯಲ್ಲ. 420 ಯಾರು ಗೊತ್ತಿದೆ ಬಿಡಿ ಎಂದು ಹರಿಪ್ರಸಾದ್‌ಗೆ ತಿವಿದರು.

ಈ ವೇಳೆ ಮತ್ತೆ ಮಾತು ಮುಂದುವರಿಸಿದ‌ ಹರಿಪ್ರಸಾದ್, ಪದೇ ಪದೇ ನನ್ನ ಮಾತಿಗೆ ಬಿಜೆಪಿಯವರು ಅಡ್ಡಿಪಡಿಸುತ್ತಿದ್ದಾರೆ. ಹೀಗೆ ಅಡ್ಡ ಮಾಡಿ ಅಂತ ಅವರ ಅಧ್ಯಕ್ಷರು ಹೇಳಿ ಕಳಿಸಿದ್ದಾರೆ ಎಂದು ಆರೋಪ ಮಾಡಿದರು. ಇದಕ್ಕೆ ಪ್ರಾಣೇಶ್, ನಮ್ಮಲ್ಲಿ ನಿಮಗಿಂತ ಚೆನ್ನಾಗಿ ಮಾತಾಡೋರು ಇದ್ದಾರೆ. ನಿಮ್ಮ ಭಾಷಣಕ್ಕೆ ಯಾಕೆ ಅಡ್ಡಿ ಮಾಡೋಣ. ನಾವು ಹಿಂಬಾಗಿಲ ಮೂಲಕ ಶಾಸಕರು ಆಗಿಲ್ಲ. ನಾವು ಮುಂಬಾಗಿಲ ಮೂಲಕ ಇಲ್ಲಿಗೆ ಬಂದಿದ್ದೇವೆ. ಹಿಂಬಾಗಿಲ ಮೂಲಕ ಬಂದಿಲ್ಲ ಅಂತ ಹರಿಪ್ರಸಾದ್‌ರಿಗೆ ಚಾಟಿ ಬೀಸಿದರು. ಇದನ್ನೂ ಓದಿ: ವಿಧಾನಸಭೆ ಕಲಾಪಕ್ಕೆ ಸಚಿವರು ಗೈರು – ಸ್ಪೀಕರ್ ಗರಂ

ಇದಕ್ಕೆ ತಿರುಗೇಟು ಕೊಟ್ಟ ಹರಿಪ್ರಸಾದ್, ನಾನು ಚುನಾವಣೆಯಲ್ಲಿ ನಿಂತು ಸೋತಿದ್ದೇನೆ. ಗ್ರಾಮ ಪಂಚಾಯಿತಿ ಸದಸ್ಯನೂ ಆಗದೇ, ವಿಧಾನಸಭೆಗೆ ಸ್ಪರ್ಧೆ ಮಾಡದೇ, ಎಂಪಿ ಆಗದೇ ಮುಖ್ಯಮಂತ್ರಿ ಆಗಿಲ್ಲ. ಪ್ರಧಾನಿಯೂ ಆಗಿಲ್ಲ ಎಂದು ಪ್ರಧಾನಿ ಮೋದಿ ಹೆಸರು ಪ್ರಸ್ತಾಪಿಸದೇ ಟಾಂಗ್‌ ಕೊಟ್ಟರು. ಈ ವೇಳೆ ಕಾಂಗ್ರೆಸ್- ಬಿಜೆಪಿ ಸದಸ್ಯರ ನಡುವೆ ಮಾತಿನ ‌ಚಕಮಕಿ ನಡೆಯಿತು.

Share This Article
Leave a Comment

Leave a Reply

Your email address will not be published. Required fields are marked *