ಶಾಂತಿಯಿಂದ ಆಗಲಿಲ್ಲ – ಈಗ ಪಂಜ್‍ಶೀರ್ ವಶಕ್ಕೆ ತಾಲಿಬಾನಿಗಳ ಕುತಂತ್ರ

Public TV
1 Min Read

ಕಾಬೂಲ್: ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡರೂ ಪಂಜ್‍ಶೀರ್ ಕಣಿವೆಯನ್ನು ತಾಲಿಬಾನ್ ಇನ್ನೂ ವಶಪಡಿಸಿಕೊಂಡಿಲ್ಲ. ಈಗ ಈ ಕಣಿವೆಯನ್ನು ಕುತಂತ್ರದ ಮೂಲಕ ವಶಪಡಿಸಿಕೊಳ್ಳಲು ತಾಲಿಬಾನ್ ಉಗ್ರರು ಮುಂದಾಗಿದ್ದಾರೆ.

ಹೌದು. ಪಂಜ್‍ಶೀರ್ ಪ್ರಾಂತ್ಯದಲ್ಲಿ ತಾಲಿಬಾನ್ ಈಗ ಇಂಟರ್ನೆಟ್, ದೂರವಾಣಿ ಸಂಪರ್ಕವನ್ನೇ ಕಡಿತಗೊಳಿಸಿದೆ. ಈ ಮೂಲಕ ಅಲ್ಲಿನ ಸಂವಹನ ವ್ಯವಸ್ಥೆಯನ್ನು ಸಂಪೂರ್ಣ ಬಂದ್ ಮಾಡಿದೆ.

ಪಂಜ್‍ಶೀರ್ ಅಫ್ಘಾನಿಸ್ತಾನ ಪ್ರಾಂತ್ಯವಾಗಿದ್ದರೂ ಹಲವಾರು ತಾಲಿಬಾನ್ ವಿರೋಧಿಗಳು ಪಂಜ್‌ಶೀರ್‌ನಲ್ಲಿ ಜಮಾಯಿಸಿದ್ದಾರೆ. ಅಫ್ಘಾನ್ ಬಂಡುಕೋರ ಕಮಾಂಡರ್ ಅಹ್ಮದ್ ಶಾ ಮಸೂದ್ ಅವರ ಪುತ್ರ ಅಹ್ಮದ್ ಮಸೂದ್, ಮಾಜಿ ಉಪಾಧ್ಯಕ್ಷ ಅಮರುಲ್ಲಾ ಸಲೇಹ್ ಇಲ್ಲಿ ನೆಲೆಸಿದ್ದಾರೆ.

ಅಹ್ಮದ್ ಮಸೂದ್ ಅವರ ವಕ್ತಾರ ಫಾಹೀಮ್ ದಷ್ಟಿ ಅವರು ಆಗಸ್ಟ್ 28ರ ಸಂಜೆಯಿಂದ ಪಂಜ್‍ಶೀರ್ ಪ್ರಾಂತ್ಯದಲ್ಲಿ ಟೆಲಿಕಾಂ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಮೊಬೈಲ್ ಇಂಟರ್ನೆಟ್ ಅಲ್ಲದೇ ಕರೆ, ಸಂದೇಶ ಸೇವೆಗಳನ್ನು ಸಹ ಕಡಿತಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ತಾಲಿಬಾನಿಗಳ ಹೊಸ ಆದೇಶ- ಹುಡುಗ, ಹುಡುಗಿ ಜೊತೆಯಾಗಿ ಓದುವಂತಿಲ್ಲ

ಸಂವಹನ ವ್ಯವಸ್ಥೆಯನ್ನು ಬಂದ್ ಮಾಡಿದರೆ ವಿದೇಶಗಳಿಗೆ ಸುದ್ದಿ ಹೋಗುವುದನ್ನು ತಡೆಯಬಹುದು ಮತ್ತು ಈ ಪ್ರಾಂತ್ಯದ ಮೇಲೆ ದಾಳಿ ಮಾಡುವುದು ಸುಲಭ ಎಂಬ ಲೆಕ್ಕಾಚಾರವನ್ನು ಹಾಕಿದ ತಾಲಿಬಾನ್ ಈಗ ಇಂಟರ್ನೆಟ್ ಸೇವೆಯನ್ನೇ ಬಂದ್ ಮಾಡಿದೆ. ಇದನ್ನೂ ಓದಿ: ತಾಲಿಬಾನಿಗಳ ಮೇಲೆ ಗುಂಡಿನ ಮಳೆ – ನಾರ್ಥರ್ನ್ ಅಲಯನ್ಸ್‌ಗೆ ತಜಕಿಸ್ತಾನ ಬೆಂಬಲ

ಮಾಜಿ ಉಪಾಧ್ಯಕ್ಷ ಅಮರುಲ್ಲಾ ಸಲೇಹ್ ಅವರು ಟ್ವಿಟ್ಟರ್ ನಲ್ಲಿ ತಾಲಿಬಾನಿ ಉಗ್ರರ ಆಡಳಿತದ ವಿರುದ್ಧ ಕಠಿಣ ಅಭಿಪ್ರಾಯವನ್ನು ವ್ಯಕ್ತಪಡಿಸಿ ಜಗತ್ತಿಗೆ ತಿಳಿಸುತ್ತಿದ್ದರು. ಇದರಿಂದಾಗಿ ತಾಲಿಬಾನ್ ಕುಕೃತ್ಯ ಜಗತ್ತಿಗೆ ತಿಳಿಯುತ್ತಿತ್ತು.

ಈ ಹಿಂದೆ ಆಗಸ್ಟ್ 23 ರಂದು ಈ ಕಣಿವೆಯನ್ನು ವಶಪಡಿಸಿಕೊಳ್ಳಲು 3 ಸಾವಿರ ತಾಲಿಬಾನ್ ಹೋರಾಟಗಾರರನ್ನು ಪಂಜಶೀರ್ ಗಡಿಗೆ ಕಳುಹಿಸಿತ್ತು. ಹೆಚ್ಚುತ್ತಿರುವ ಅಂತಾರಾಷ್ಟ್ರೀಯ ಒತ್ತಡದಿಂದಾಗಿ, ತಾಲಿಬಾನ್ ಹೋರಾಟಗಾರರು ಇನ್ನೂ ಪಂಜಶೀರ್ ಮೇಲೆ ದಾಳಿ ಮಾಡಿಲ್ಲ. ಶಾಂತಿ ಮತ್ತು ಮಾತುಕತೆಯ ಮೂಲಕ ಪಂಜಶೀರ್ ವಶ ಪಡೆಯಲು ಬಯಸುತ್ತೇವೆ ಎಂದು ತಾಲಿಬಾನ್ ಹೇಳಿಕೊಂಡಿತ್ತು. ಆದರೆ ಈಗ ಈ ನಡೆಯನ್ನು ಗಮನಿಸಿದಾಗ ಕಣಿವೆಯನ್ನು ಹಿಂಸಾತ್ಮಕವಾಗಿ ವಶಪಡಿಸಿಕೊಳ್ಳಲು ತಾಲಿಬಾನ್ ಮುಂದಾಗಿರುವುದು ದೃಢವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *