ತಾಲಿಬಾನ್‌ ಸೇನೆಗೆ ಆತ್ಮಹತ್ಯಾ ಬಾಂಬರ್‌ಗಳ ನೇಮಕ

Public TV
1 Min Read

ಕಾಬೂಲ್: ಆತ್ಮಹತ್ಯಾ ಬಾಂಬರ್‌ಗಳನ್ನು ತಾಲಿಬಾನ್‌ ಸೇನೆಗೆ ಅಧಿಕೃತವಾಗಿ ನೇಮಿಸಿಕೊಳ್ಳುತ್ತಿದೆ. ನಾಲ್ಕು ತಿಂಗಳ ಹಿಂದೆ ಅಫ್ಘಾನಿಸ್ತಾನದಲ್ಲಿ ಸರ್ಕಾರವನ್ನು ರಚಿಸಿದ ನಂತರ ತನ್ನ ಮೇಲಿನ ಭದ್ರತಾ ಬೆದರಿಕೆಗಳಿಗೆ ಪ್ರತಿಸ್ಪರ್ಧೆ ನೀಡುವ ಉದ್ದೇಶದಿಂದ ಸೇನಾ ಶ್ರೇಣಿಯಲ್ಲಿ ಆತ್ಮಹತ್ಯಾ ಬಾಂಬರ್‌ಗಳನ್ನೂ ನೇಮಕಾತಿ ಮಾಡಿಕೊಳ್ಳುತ್ತಿದೆ.

ಅಧಿಕಾರಕ್ಕೆ ಬರುವ ಮೊದಲು ತಾಲಿಬಾನ್‌ 20 ವರ್ಷಗಳ ಯುದ್ಧದಲ್ಲಿ ಯುಎಸ್‌ ಮತ್ತು ಅಫ್ಘಾನ್‌ ಪಡೆಗಳ ಮೇಲೆ ದಾಳಿ ಮಾಡಲು ಆತ್ಮಹತ್ಯಾ ಬಾಂಬರ್‌ಗಳನ್ನು ಪ್ರಮುಖ ಅಸ್ತ್ರವಾಗಿ ಬಳಸಿತ್ತು. ಈಗ ಗುಂಪು ಒಂದೇ ಘಟಕದ ಅಡಿಯಲ್ಲಿ ಕಾರ್ಯನಿರ್ವಹಿಸಲು ಹಾಗೂ ಅಪ್ಘಾನಿಸ್ತಾನವನ್ನು ರಕ್ಷಿಸಲು ದೇಶಾದ್ಯಂತ ಆತ್ಮಹತ್ಯಾ ಬಾಂಬರ್‌ಗಳನ್ನು ಸಂಘಟಿಸಲು ತಾಲಿಬಾನ್‌ ಮುಂದಾಗಿದೆ ಎಂದು ಉಪ ವಕ್ತಾರ ಬಿಲಾಲ್‌ ಕರಿಮಿ ತಿಳಿಸಿದ್ದಾರೆ. ಇದನ್ನೂ ಓದಿ: ಏರ್‌ ಇಂಡಿಯಾ ಹರಾಜು – ಟಾಟಾ ಡೀಲ್‌ ಪ್ರಶ್ನಿಸಿ ಸುಬ್ರಮಣಿಯನ್‌ ಸ್ವಾಮಿ ಸಲ್ಲಿಸಿದ್ದ ಅರ್ಜಿ ವಜಾ

ತಾಲಿಬಾನ್‌ನ ಈಗಿನ ಮುಖ್ಯ ಗುರಿ ಇಸ್ಲಾಮಿಕ್‌ ಸ್ಟೇಟ್‌ನ ಸ್ಥಳೀಯ ಶಾಖೆಯಾಗಿದೆ. ಕಳೆದ ವರ್ಷದ ಆಗಸ್ಟ್‌ ತಿಂಗಳಲ್ಲಿ ಅಪ್ಘಾನಿಸ್ತಾನದಿಂದ ಯುಎಸ್‌ ತನ್ನ ಸೇನೆಯನ್ನು ಹಿಂತೆಗೆದುಕೊಳ್ಳಲು ನಿರ್ಧರಿಸಿದಾಗ, ದೇಶದಲ್ಲಿ ಅಧಿಕಾರವನ್ನು ಬಲಪಡಿಸಲು ತಾಲಿಬಾನ್‌ ಮುಂದಾಗಿತ್ತು. ಈ ವೇಳೆ ಇಸ್ಲಾಮಿಕ್‌ ಸ್ಟೇಟ್‌ (ಐಎಸ್‌) ಐದು ಪ್ರಮುಖ ದಾಳಿಗಳನ್ನು ನಡೆಸಿತ್ತು.

ಗಡಿಯಲ್ಲಿ ಆತ್ಮಹತ್ಯಾ ಬಾಂಬರ್‌ಗಳು ಕಾರ್ಯತಂತ್ರದ ಅವಿಭಾಜ್ಯ ಅಂಗವಾಗಿದೆ. ಅಲ್ಲದೇ ರಕ್ಷಣೆಯನ್ನು ಹೆಚ್ಚಿಸಲು ಬಲವಾದ ಮತ್ತು ಸಂಘಟಿತ ಸೈನ್ಯಕ್ಕೆ ಸಹಕಾರಿಯಾಗಿದೆ. ಸುಮಾರು 1,50,000 ಯೋಧರನ್ನು ಸೇನೆಗೆ ಆಹ್ವಾನಿಸಲಾಗುವುದು ಎಂದು ಕರಿಮಿ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಫುಡ್ ಡೆಲಿವರಿ ಬಾಯ್‍ಗೆ ನಡು ರಸ್ತೆಯಲ್ಲಿ ಹಿಗ್ಗಾಮುಗ್ಗ ಥಳಿಸಿದ ಪೊಲೀಸ್

ಇಸ್ಲಾಮಿಕ್‌ ಸ್ಟೇಟ್‌ (ಐಎಸ್‌) ಸಂಘಟನೆ ತಾಲಿಬಾನ್‌ ಅಧಿಕಾರವನ್ನು ಪ್ರಶ್ನಿಸುತ್ತಾ ಬಂದಿದೆ. ಈ ಬೆಳವಣಿಗೆ ಅಫ್ಘಾನಿಸ್ತಾನದಲ್ಲಿ ಮತ್ತೊಂದು ಯುದ್ಧ ಸಾಧ್ಯತೆಯ ಸುಳಿವನ್ನು ನೀಡುತ್ತಿದೆ. ಯುಎಸ್‌ ಯೋಧರು ಹಾಗೂ ಅಫ್ಘಾನ್‌ ಜನರ ಹತ್ಯೆಯಲ್ಲಿ ಆತ್ಮಹತ್ಯಾ ಬಾಂಬರ್‌ಗಳು ಪ್ರಮುಖ ಪಾತ್ರ ವಹಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *