ಕಾವೇರಿ ತೀರ್ಥೋದ್ಭವಕ್ಕೆ ಕ್ಷಣಗಣನೆ – ಕಣ್ತುಂಬಿಕೊಳ್ಳಲಿರುವ ಡಿಕೆಶಿ, ರಾಮಲಿಂಗಾ ರೆಡ್ಡಿ

Public TV
2 Min Read

ಮಡಿಕೇರಿ: ಜೀವನದಿ ಕಾವೇರಿಯ ಪವಿತ್ರ ತೀರ್ಥೋದ್ಭವಕ್ಕೆ (Kaveri Theerthodbhava) ಕ್ಷಣಗಣನೆ ಆರಂಭವಾಗಿದೆ. ಕಾವೇರಿ ಉಗಮಸ್ಥಾನ ತಲಕಾವೇರಿಯಲ್ಲಿ (Talakaveri) ಶುಕ್ರವಾರ (ಅ.17) ಮಧ್ಯಾಹ್ನ 1:44ಕ್ಕೆ ಸಲ್ಲುವ ಮಕರ ಲಗ್ನದಲ್ಲಿ ಕಾವೇರಿಯು ತೀರ್ಥರೂಪಿಣಿಯಾಗಿ ಭಕ್ತರಿಗೆ ಒಲಿಯಲಿದ್ದಾಳೆ. ಸಹಸ್ರಾರು ಭಕ್ತರು ತೀರ್ಥಸ್ವರೂಪಿಣಿ ಕಾವೇರಿ ಮಾತೆಯನ್ನು ಕಣ್ತುಂಬಿಕೊಳ್ಳಲು ಕಾತರರಾಗಿದ್ದಾರೆ. ಒಂದು ತಿಂಗಳ ಕಾಲ ನಡೆಯುವ ಕಾವೇರಿ ತುಲಾ ಸಂಕ್ರಮಣ ಜಾತ್ರಗೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ.

ವರ್ಷಕ್ಕೊಮ್ಮೆ ಘಟಿಸುವ ಈ ವಿಸ್ಮಯವನ್ನು ಕಣ್ತುಂಬಿಕೊಳ್ಳಲು ದೇಶದ ಹಲವು ಭಾಗಗಳಿಂದ ಸಹಸ್ರಾರು ಸಂಖ್ಯೆಯ ಭಕ್ತರು ಆಗಮಿಸಲಿದ್ದಾರೆ. ಇದಕ್ಕಾಗಿ ತಲಕಾವೇರಿ ಹಾಗೂ ತ್ರಿವೇಣಿ ಸಂಗಮ ಭಾಗಮಂಡಲ ಸಕಲ ರೀತಿಯಲ್ಲಿ ಸಿದ್ಧತೆ ನಡೆಯುತ್ತಿದೆ. ಕೊಡಗಿನ ‌ಜನರ ಕುಲದೇವತೆ ಕರ್ನಾಟಕದ ಜೀವನದಿ ಕಾವೇರಿಯ ತೀರ್ಥೋದ್ಭವಕ್ಕೆ ಜಿಲ್ಲಾಡಳಿತ ಕೂಡ ಈಗಾಗಲೇ ತಯಾರಿ ಮಾಡಿಕೊಂಡಿದೆ. ಇದನ್ನೂ ಓದಿ: ಮಂಡ್ಯ | ಐದು ದಿನಗಳ ಕಾವೇರಿ ಆರತಿಗೆ ತೆರೆ

ಬ್ರಹ್ಮ ಕುಂಡಿಕೆಯಿಂದ ಪವಿತ್ರ ತೀರ್ಥ ಉಕ್ಕಿಬರಲಿದೆ. ಈ ವಿಸ್ಮಯ ನೋಡಲು ಜನರು ಕಾತರರಾಗಿ ಕಾಯುತ್ತಿದ್ದಾರೆ. ತೀರ್ಥೋದ್ಭವಕ್ಕೂ ಮೊದಲು ತಲಕಾವೇರಿ ಕ್ಷೇತ್ರದಲ್ಲಿ ಧಾರ್ಮಿಕ ಪೂಜೆಗಳು ಜರುಗಲಿವೆ. ಬೆಳಿಗ್ಗೆ 11:30 ರಿಂದಲೇ ತೀರ್ಥೋದ್ಭವದ ತನಕ ಮಂತ್ರ ಪಠಣೆ ನಡೆಯಲಿದೆ. ನಾನಾ ಪೂಜಾ ಕೈಂಕರ್ಯಗಳು ನಡೆಯಲಿದ್ದು ಅರ್ಚಕರ ತಂಡ ಕೂಡ ಕಾವೇರಿ ಮಾತೆಯ ಸ್ವಾಗತಕ್ಕೆ ಸಜ್ಜಾಗಿದೆ. ಈ ಸಂದರ್ಭದಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ (D.K Shivakumar), ಮುಜರಾಯಿ ಇಲಾಖೆಯ ಸಚಿವ ರಾಮಲಿಂಗ ರೆಡ್ಡಿ, ವಿರಾಜಪೇಟೆ ಶಾಸಕ ಎ.ಎಸ್ ಪೊನ್ನಣ್ಣ, ಮಂಥರ್ ಗೌಡ ಸೇರಿದಂತೆ ಹಲವಾರು ಗಣ್ಯರು ಭಾಗಿಯಾಗಲ್ಲಿದ್ದಾರೆ‌.

ಬ್ರಹ್ಮಗಿರಿಯ ಮಡಿಲಿನಲ್ಲಿ ಹುಟ್ಟುವ ಕಾವೇರಿ ಮಾತೆ ರಾಜ್ಯದಲ್ಲಿ ಹರಿದು ರೈತರ ಹೊಲಗದ್ದೆಗಳನ್ನು ಹಸಿರಾಗಿಸಿ, ಅನ್ನದಾತೆಯಾಗಿ ಹರಿಯುತ್ತಾಳೆ. ಹಾಗಾಗಿ ಕಾವೇರಿ ನೀರನ್ನು ಬಳಸುವ ಮಂಡ್ಯ, ಮೈಸೂರು, ಬೆಂಗಳೂರು ಸೇರಿದಂತೆ ದೇಶದ ಹಲವೆಡೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ. ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿ ಅಲ್ಲಿ ಭಗಂಢೇಶ್ವರನಿಗೆ ಪೂಜೆ ಸಲ್ಲಿಸಿ ನಂತರ ಕಾವೇರಿ ಮಾತೆಯ ದರ್ಶನ ಪಡೆಯುತ್ತಾರೆ. ತೀರ್ಥೋದ್ಭವವಾಗುತ್ತಿದ್ದಂತೆ ತೀರ್ಥ ಸಂಗ್ರಹಿಸಲು ಮುಗಿಬೀಳುವ ಜನರು ತೀರ್ಥವನ್ನು ಸಂಗ್ರಹಿಸಿ ಮನೆಗೆ ಕೊಂಡೊಯ್ಯುತ್ತಾರೆ.

ಸ್ಥಳದಲ್ಲಿ ತಾತ್ಕಾಲಿಕ ಶೌಚಾಲಯ, ಅನ್ನದಾನಕ್ಕೆ ವ್ಯವಸ್ಥೆ, ಭದ್ರತೆಗಾಗಿ ಹೆಚ್ಚಿನ ಸಿಸಿಟಿವಿ ಸೇರಿದಂತೆ 500ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಕಾವೇರಿ ಮಾತೆಯ ದರ್ಶನಕ್ಕೆ ಸಹಸ್ರ ಸಹಸ್ರ ಭಕ್ತರು ಲಗ್ಗೆಯಿಡುತ್ತಿದ್ದು, ಯಾವುದೇ ರೀತಿಯಲ್ಲಿ ನೂಕು ನುಗ್ಗಲು ಉಂಟಾಗದಂತೆ ಏಕಮುಖ ಸಂಚಾರದಲ್ಲಿ ಬ್ಯಾರಿಕೇಡ್ ಹಾಕಲಾಗಿದೆ. ಇದನ್ನೂ ಓದಿ: KRS ಡ್ಯಾಂ ಒಳಹರಿವಿನಲ್ಲಿ ಭಾರೀ ಏರಿಕೆ – ಕಾವೇರಿ ನದಿಗೆ 29,000 ಕ್ಯೂಸೆಕ್‌ ನೀರು ಬಿಡುಗಡೆ

Share This Article