ಟ್ರಂಪ್‌ H-1B ವೀಸಾ ಟಫ್‌ ರೂಲ್ಸ್‌ ನಡುವೆಯೂ ಭಾರತೀಯರಿಗೆ ಮಣೆ ಹಾಕಿದ ಕಂಪನಿಗಳು – ಮೈಸೂರಲ್ಲಿ ಓದಿದ್ದ ವ್ಯಕ್ತಿಗೆ ಸಿಇಒ ಪಟ್ಟ

Public TV
2 Min Read

ವಾಷಿಂಗ್ಟನ್‌: ಅಮೆರಿಕ (America) ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಹೆಚ್-1ಬಿ ವೀಸಾ (H-1B Visa) ವಾರ್ಷಿಕ ಶುಲ್ಕವನ್ನು ದಿಢೀರ್ 1 ಲಕ್ಷ ಡಾಲರ್‌ಗೆ (ಅಂದಾಜು 88 ಲಕ್ಷ ರೂ.) ಹೆಚ್ಚಿಸಿ ಆದೇಶ ಹೊರಡಿಸಿ ವಿದೇಶಿ ಉದ್ಯೋಗಿಗಳಿಗೆ ಶಾಕ್‌ ಕೊಟ್ಟಿದ್ದರು. ಇದರ ನಡುವೆಯೇ ಅಮೆರಿಕ ಕಂಪನಿಗಳು ಭಾರತೀಯರಿಗೆ ಮಣೆ ಹಾಕುತ್ತಿರುವುದು ಮುಂದುವರಿದಿದೆ. ಇಬ್ಬರು ಭಾರತೀಯರನ್ನು ಅಮೆರಿಕದ ಕಂಪನಿಗಳು ಸಿಇಒ ಆಗಿ ನೇಮಕ ಮಾಡಿವೆ. ಅದರಲ್ಲಿ ಒಬ್ಬರು ನಮ್ಮ ರಾಜ್ಯದ ಮೈಸೂರಿನಲ್ಲಿ ವ್ಯಾಸಂಗ ಮಾಡಿದ್ದರು ಎಂಬುದು ಕನ್ನಡಿಗರ ಹೆಮ್ಮೆಯ ವಿಷಯ.

ಭಾರತದ ಮೂಲದ ರಾಹುಲ್ ಗೋಯಲ್ (Rahul Goyal) ಡೆನ್ವರ್‌ನಲ್ಲಿ ಅಧ್ಯಯನಕ್ಕಾಗಿ ಅಮೆರಿಕಕ್ಕೆ ತೆರಳುವ ಮುನ್ನ ಮೈಸೂರಿನಲ್ಲಿ (Mysuru) ಎಂಜಿನಿಯರಿಂಗ್ ಅಧ್ಯಯನ ಮಾಡಿದ್ದರು. ಬಳಿಕ ಅವರು ಅಮೆರಿಕ, ಯುಕೆಯ ಕಂಪನಿಗಳಲ್ಲಿ ಕೆಲಸ ಮಾಡಿದ್ದರು. ಅವರನ್ನು ಚಿಕಾಗೋ ಮೂಲದ ಪಾನೀಯ ಕಂಪನಿ ಮೊಲ್ಸನ್ ಕೂರ್ಸ್ ಅಕ್ಟೋಬರ್ 1 ರಿಂದ ಜಾರಿಗೆ ಬರುವಂತೆ ಹೊಸ ಅಧ್ಯಕ್ಷ ಮತ್ತು ಸಿಇಒ ಆಗಿ ನೇಮಿಸಿದೆ. ಗೋಯಲ್ ಅವರು ಕಂಪನಿಯಲ್ಲಿ 24 ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಕಂಪನಿ ನಿರ್ಧಾರದ ಬಗ್ಗೆ, ಸವಾಲುಗಳನ್ನು ಎದುರಿಸಲು ಸಿದ್ಧ ಎಂದು ಗೋಯಲ್ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: PublicTV Explainer: ಭಾರತದ ಯುವ ಪ್ರತಿಭೆಗಳಿಗೆ ಅಮೆರಿಕ ವೀಸಾ ತಡೆಗೋಡೆ?; ಏನಿದು H-1B ವೀಸಾ ಹೊಸ ರೂಲ್ಸ್‌?

ಮತ್ತೊಬ್ಬ ಭಾರತೀಯ ಮೂಲದ ಶ್ರೀನಿವಾಸ್ ಗೋಪಾಲನ್ (55) (Srinivas Gopalan) ಅಮೆರಿಕದ ಟೆಲಿಕಾಂ ದೈತ್ಯ ಟಿ-ಮೊಬೈಲ್‌ನಲ್ಲಿ ಸಿಇಒ ಆಗಿ ನೇಮಕಗೊಂಡಿದ್ದಾರೆ. ನವೆಂಬರ್ 1 ರಂದು ಅವರು ಸಿಇಒ ಹುದ್ದೆ ಅಲಂಕರಿಸಲಿದ್ದಾರೆ. ಐಐಎಂ ಅಹಮದಾಬಾದ್‌ನ ಹಳೆಯ ವಿದ್ಯಾರ್ಥಿಯಾಗಿರುವ ಗೋಪಾಲನ್, ಪ್ರಸ್ತುತ ಟಿ-ಮೊಬೈಲ್‌ನ ಮುಖ್ಯ ಕಾರ್ಯಾಚರಣಾ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಗೋಪಾಲನ್‌, ಟಿ-ಮೊಬೈಲ್‌ನ ಮುಂದಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಕೆಲಸ ಮಾಡಲು ನನಗೆ ಬಹಳ ಹೆಮ್ಮೆ ಇದೆ. ಈ ಕಂಪನಿಯ ಸಾಧನೆಗಳ ಬಗ್ಗೆ ನಾನು ಬಹಳ ದಿನಗಳಿಂದ ತಿಳಿದುಕೊಂಡಿದ್ದೆ ಎಂದು ಲಿಂಕ್ಡ್‌ಇನ್‌ನಲ್ಲಿ ಬರೆದುಕೊಂಡಿದ್ದಾರೆ.

ಗೋಪಾಲನ್ ತಮ್ಮ ವೃತ್ತಿಜೀವನವನ್ನು ಹಿಂದೂಸ್ತಾನ್ ಯೂನಿಲಿವರ್‌ನಲ್ಲಿ ಮ್ಯಾನೇಜ್‌ಮೆಂಟ್ ಟ್ರೈನಿಯಾಗಿ ಪ್ರಾರಂಭಿಸಿ, ಭಾರ್ತಿ ಏರ್‌ಟೆಲ್, ವೊಡಾಫೋನ್, ಕ್ಯಾಪಿಟಲ್ ಒನ್ ಮತ್ತು ಡಾಯ್ಚ ಟೆಲಿಕಾಮ್‌ನಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದರು. ಈ ಅವಧಿಯಲ್ಲಿ ಲಕ್ಷಾಂತರ ಮನೆಗಳಿಗೆ ಫೈಬರ್ ನೆಟ್‌ವರ್ಕ್‌ ಒದಗಿಸಿದ್ದರು. ಇದನ್ನೂ ಓದಿ: H-1B ವೀಸಾ ಶುಲ್ಕ ಹೊಸ ಅರ್ಜಿದಾರರಿಗೆ ಮಾತ್ರ- ಒಂದು ಬಾರಿ ಪಾವತಿಸಬೇಕು: ಅಮೆರಿಕ ಸರ್ಕಾರ

Share This Article