ತೈವಾನ್ ಸೀಬೆ ಬೆಳೆದು ಲಕ್ಷಾದೀಶನಾದ ಕೋಲಾರದ ರೈತ

Public TV
3 Min Read

– 10 ಎಕರೆಯಲ್ಲಿ ವರ್ಷ ಪೂರ್ತಿ ಬೆಳೆ
– ಕೋಲ್ಕತ್ತಾ ಸೀಬೆಗೆ ಎಲ್ಲಿಲ್ಲದ ಬೇಡಿಕೆ

ಕೋಲಾರ: ಅಲ್ಲಿ ಬಹುತೇಕರು ತರಕಾರಿ ಬೆಳೆಗಳನ್ನು ಬೆಳೆದು ನಷ್ಟ ಅನುಭವಿಸಿರುವವರೆ. ಪ್ರತಿ ವರ್ಷ ಕಷ್ಟ ಪಟ್ಟು ವ್ಯವಸಾಯ ಮಾಡಿದರೂ ಬೆಳೆಗೆ ಬೆಲೆ ಸಿಗಬೇಕೆಂದರೆ ಅದೃಷ್ಟವಿರಬೇಕು ಎನ್ನುವ ಪರಿಸ್ಥಿತಿ. ಆದರೆ ಅಂತಹ ಪರಿಸ್ಥಿತಿಯಿಂದ ಹೊರಬಂದಿರುವ ಕೆಲವು ರೈತರು ಲಕ್ಷ ಲಕ್ಷ ಸಂಪಾದನೆಯ ದಾರಿ ಕಂಡುಕೊಂಡಿದ್ದಾರೆ. ಅದಕ್ಕೆ ಇಲ್ಲೊಂದಿದೆ ಕೋಲಾರ ರೈತನ ಉದಾಹರಣೆ.

ಸಮೃದ್ಧವಾಗಿ ಬೆಳೆದಿರುವ ಸೀಬೆ ಹಣ್ಣಿನ ತೋಟ. ಬಾಯಿ ನೀರೂರಿಸುವಂತೆ ಕಂಡು ಬರುವ ಬೃಹತ್ ಗಾತ್ರದ ಸೀಬೆ ಹಣ್ಣುಗಳು. ತೋಟದಲ್ಲಿ ಗಿಡಗಳನ್ನು ಆರೈಕೆ ಮಾಡುತ್ತಿರುವ ತೋಟದ ಮಾಲೀಕ. ಇದೆಲ್ಲಾ ದೃಶ್ಯಗಳು ಕಂಡುಬಂದಿದ್ದು ಕೋಲಾರ ತಾಲೂಕು ಚದುಮನಹಳ್ಳಿ ಗ್ರಾಮದ ನಾರಾಯಣಸ್ವಾಮಿ ತೋಟದಲ್ಲಿ. ಇದನ್ನೂ ಓದಿ: 15 ದಿನಗಳಲ್ಲಿ ಬೆಂಗಳೂರಿನ ಸಿಬಿಡಿ ಏರಿಯಾದ ಎಲ್ಲಾ ರಸ್ತೆಗಳ ಗುಂಡಿ ಮುಚ್ಚಿ: ಹೈಕೋರ್ಟ್ ಡೆಡ್‍ಲೈನ್


ಹಲವು ದಶಕಗಳಿಂದ ಕೋಲಾರ ಜಿಲ್ಲೆಯ ರೈತರು ಟೊಮೆಟೋ ಸೇರಿದಂತೆ ತರಕಾರಿ ಬೆಳೆಗಳನ್ನು ಕಷ್ಟಪಟ್ಟು ಬೆಳೆಯುತ್ತಿದ್ದರು. ಆದರೂ ಸರಿಯಾದ ಬೆಲೆ ಸಿಗದೆ ಅದೃಷ್ಟ ಇದ್ದವರಿಗೆ ಬೆಲೆ ಎನ್ನುವಂತಹ ಪರಿಸ್ಥಿತಿಗೆ ಸಿಲುಕಿದ ರೈತರು ನಷ್ಟದ ಮೇಲೆ ನಷ್ಟ ಅನುಭವಿಸುತ್ತಿದ್ದರು. ಇದರಿಂದ ಬೇಸತ್ತ ಚದುಮನಹಳ್ಳಿಯ ರೈತ ನಾರಾಯಣಸ್ವಾಮಿ ಹೊಸದೊಂದು ಬೆಳೆ ಬೆಳೆದು ಉತ್ತಮ ಲಾಭ ಮಾಡಬೇಕೆಂದು ನಿರ್ಧಾರಿಸಿ ಹಲವು ರಾಜ್ಯಗಳನ್ನು ಸುತ್ತಾಡಿ ಕೊನೆಗೆ ಕೋಲ್ಕತ್ತಾದಲ್ಲಿ ಸಿಕ್ಕ ತೈವಾನ್ ಗೋಲ್ಡ್ ಎನ್ನುವ ತಳಿಯಲ್ಲಿ ತಿಳಿ ಗುಲಾಬಿ ಸೀಬೆಯನ್ನು ತಂದು ಬೆಳೆದಿದ್ದಾರೆ.

ಕಳೆದ ಮೂರು ವರ್ಷಗಳ ಹಿಂದೆ ಇವರು ಬೆಳೆದ ಬೆಳೆಗೆ ನಿರೀಕ್ಷೆಗೂ ಮೀರಿದ ಲಾಭ ಬರಲಾರಂಭಿಸಿದೆ. ಪರಿಣಾಮ ಮೊದಲು ಮೂರು ಎಕರೆಯಲ್ಲಿ ಸೀಬೆ ಬೆಳೆದಿದ್ದ ನಾರಾಯಣಸ್ವಾಮಿ ಈಗ ತಮ್ಮ ಹತ್ತು ಎಕರೆ ಭೂಮಿಯಲ್ಲಿ ಸೀಬೆ ಬೆಳೆದು ಉತ್ತಮ ಲಾಭ ಗಳಿಸುತ್ತಿದ್ದಾರೆ. ನಾರಾಯಣಸ್ವಾಮಿಯ ಪ್ರಕಾರ ಎಕರೆಗೆ ವರ್ಷಕ್ಕೆ ಕನಿಷ್ಠ 20 ರಿಂದ 25 ಲಕ್ಷ ರೂ. ಗಳಿಸುತ್ತಿದ್ದಾರೆ.

ನಾರಾಯಣಸ್ವಾಮಿ 10 ಎಕರೆ ಭೂಮಿಯಲ್ಲಿ 8 ಸಾವಿರ ಸೀಬೆ ಗಿಡಗಳನ್ನು ಬೆಳೆದಿದ್ದಾರೆ. ಒಂದು ಎಕರೆ ಸೀಬೆ ಬೆಳೆಯಲು ಕನಿಷ್ಠ ಒಂದೂವರೆ ಲಕ್ಷ ಖರ್ಚು ಬರುತ್ತದೆ. ಗಿಡಗಳನ್ನು ನಾಟಿ ಮಾಡಿದ ಏಳು ತಿಂಗಳ ಕಾಲ ಆರೈಕೆ ಮಾಡಿದರೆ ಬಳಿಕ ಫಸಲು ಬರಲು ಆರಂಭಿಸಿ 10 ರಿಂದ 15 ವರ್ಷಗಳ ಕಾಲ ನಿರಂತವಾಗಿ ಫಲ ಕೊಡುತ್ತವೆ. ಪ್ರತಿ ತಿಂಗಳಿಗೆ 40 ಟನ್‌ಗಳಷ್ಟು ಗಿಡಗಳು ಫಸಲು ಕಡುತ್ತವೆ. ಒಂದು ಹಣ್ಣು 500 ರಿಂದ 800 ಗ್ರಾಂ ತೂಕ ಹೊಂದಿರುತ್ತದೆ. ಇದನ್ನೂ ಓದಿ: ಹಿಜಬ್‌ ವಿವಾದದ ಹಿಂದೆ ಕಾಣದ ಕೈಗಳ ಕೈವಾಡ: ಹೈಕೋರ್ಟ್‌ ಶಂಕೆ

ಸದ್ಯ ತೈವಾನ್ ಗೋಲ್ಡ್ ತಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಇದ್ದು ಒಂದು ಕೆಜಿ ಸೀಬೆ ಹಣ್ಣು 70 ರೂಪಾಯಿಗೆ ಮಾರಾಟವಾಗುತ್ತಿದೆ. ಈ ಬೆಳೆಗೆ ಮಾರುಕಟ್ಟೆ ಸಮಸ್ಯೆಯೂ ಇಲ್ಲ. ಬೆಂಗಳೂರು ಸೇರಿದಂತೆ ಹಲವೆಡೆಯಿಂದ ವ್ಯಾಪಾರಸ್ಥರು ಇವರ ತೋಟಕ್ಕೆ ಬಂದು ಹಣ್ಣನ್ನು ಖರೀದಿ ಮಾಡಿ ಹೋಗುತ್ತಿದ್ದಾರೆ. ಬಿಗ್ ಬಾಸ್ಕೇಟ್, ರಿಲಯನ್ಸ್, ಮೋರ್, ಸೇರಿದಂತೆ ಹಲವು ಕಂಪನಿಗಳು ಇವರ ತೋಟಕ್ಕೆ ಬಂದು ಖರೀದಿ ಮಾಡುತ್ತಿದೆ.

ಈ ತಳಿಯ ಸೀಬೆ ಹಣ್ಣಿಗೆ ಸದ್ಯ ಮಾರುಕಟ್ಟೆ ಸಮಸ್ಯೆ ಇಲ್ಲ. ಬದಲಾಗಿ ಮಾರುಕಟ್ಟೆಯಲ್ಲಿರುವ ಬೇಡಿಕೆಯನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ. ಇವರಿಗೆ ಒಂದು ಎಕರೆಯಲ್ಲಿ ವರ್ಷಕ್ಕೆ 20 ರಿಂದ 25 ಲಕ್ಷ ರೂ.ಯಷ್ಟು ಆದಾಯ ಬರುತ್ತಿದ್ದು ಎಲ್ಲಾ ರೈತರು ಹೀಗೆ ಬೆಳೆಯಬೇಕು ಎನ್ನುವುದು ಇವರ ಆಶಯ.

ಒಟ್ಟಿನಲ್ಲಿ ಸೀಬೆಹಣ್ಣು ಎಂದರೆ ಬಡವರ ಸೇಬು ಎನ್ನುವ ಮಾತಿದೆ. ಆದರೆ ಉತ್ತಮ ಕೊಬ್ಬಿನಾಂಶ, ಹಲವು ವಿಟಮಿನ್ಸ್ ಹೊಂದಿರುವ ಸೀಬೆ ಆರೋಗ್ಯದ ದೃಷ್ಟಿಯಿಂದ ಉಪಯುಕ್ತ, ಹಾಗೂ ಬೆಳೆಯುವ ರೈತರಿಗೂ ಒಳ್ಳೆಯ ಆದಾಯದ ಮೂಲ ಎನ್ನುವುದರಲ್ಲಿ ಎರಡು ಮಾತಿಲ್ಲ.

Share This Article
Leave a Comment

Leave a Reply

Your email address will not be published. Required fields are marked *