ದೆಹಲಿಯಿಂದ ದೇಶಕ್ಕೆ ವೈರಸ್ – ಏನು ಉಲ್ಲಂಘನೆಯಾಗಿದೆ? ಎಷ್ಟು ಮಂದಿಗೆ ಪಾಸಿಟಿವ್? ಕರ್ನಾಟಕದವರು ಎಷ್ಟು ಮಂದಿ ಭಾಗಿ?

Public TV
6 Min Read

ಬೆಂಗಳೂರು: ತುಮಕೂರಿನ ವೃದ್ಧ ಕೊರೊನಾ ವೈರಸ್‍ಗೆ ಬಲಿಯಾದ ಬಳಿಕ ವಿದೇಶಕ್ಕೆ ವ್ಯಕ್ತಿ ಹೋಗದೇ ಇದ್ದರೂ ವೈರಸ್ ಬಂದಿದ್ದು ಹೇಗೆ ಎನ್ನುವ ಪ್ರಶ್ನೆಗೆ ಮಾರ್ಚ್ 29ರವರೆಗೆ ಯಾರಿಗೂ ಉತ್ತರ ಸಿಕ್ಕಿರಲಿಲ್ಲ. ಆದರೆ ಮಾರ್ಚ್ 30 ರಂದು ತೆಲಂಗಾಣದಲ್ಲಿ 6 ಮಂದಿ ಮೃತಪಟ್ಟ ಸುದ್ದಿ ಪ್ರಕಟವಾಗುತ್ತಿದ್ದಂತೆ ದೇಶದಲ್ಲಿ ಎದ್ದಿದ್ದ ಎಲ್ಲ ಕೊರೊನಾ ಪ್ರಕರಣಗಳಿಗೆ ಮಹತ್ವದ ತಿರುವು ಸಿಕ್ಕಿ ಈಗ ನಿಜಾಮುದ್ದೀನ್ ಪ್ರಾಂತ್ಯದ ಮರ್ಕಜ್ ಮಸೀದಿ ಕೊರೊನಾದ ಕೇಂದ್ರಬಿಂದುವಾಗಿ ಹೊರಹೊಮ್ಮಿದೆ.

ಹೌದು. ಕೊರೊನಾ ವಿರುದ್ಧದ ಯುದ್ಧ ಇಷ್ಟು ದಿನ ಮಾಡಿದ್ದೇ ಬೇರೆ. ಇನ್ನು ಮುಂದೆ ಮಾಡೋದೇ ಬೇರೆ. ದೇಶದಲ್ಲಿ ಕೊರೊನಾ ವೈರಸ್ ಹಳ್ಳಿಗಳಿಗೂ ಹರಡಿಕೊಂಡಿದೆ. ಮಾರ್ಚ್ 30ರವರೆಗೆ ಇಡೀ ದೇಶ ಒಂದು ಹಂತಕ್ಕೆ ಸೇಫ್ ಎನ್ನಲಾಗುತ್ತಿತ್ತು. ಆದರೆ ಈಗ ದೆಹಲಿಯಲ್ಲಿ ನಡೆದ ಒಂದೇ ಒಂದು ಕಾರ್ಯಕ್ರಮದಿಂದ ವೈರಸ್ ದೇಶಾದ್ಯಂತ ಹರಡಿದೆ.

ದೆಹಲಿ ಹೊರವಲಯದಲ್ಲಿರುವ ನಿಜಾಮುದ್ದೀನ್ ಪ್ರಾಂತ್ಯದ ಮರ್ಕಜ್ ಮಸೀದಿಯೀಗ ಕೊರೊನಾ ಕೇಂದ್ರಬಿಂದುವಾಗಿದೆ. ಆರಂಭದಲ್ಲಿ ವಿದೇಶ ಪ್ರವಾಸ ಮಾಡಿದ ವ್ಯಕ್ತಿಗಳಿಂದ ದೇಶಕ್ಕೆ ಕೊರೊನಾ ಬಂದಿದ್ದರೂ ಈಗ ಸೋಂಕಿನ ವ್ಯಾಪ್ತಿ ಹೆಚ್ಚಾಗಲು ಕಾರಣ ದೆಹಲಿಯ ಮರ್ಕಜ್ ಮಸೀದಿಯಲ್ಲಿ ನಡೆದ ಒಂದು ಧಾರ್ಮಿಕ ಕಾರ್ಯಕ್ರಮ. ಈ ಕಾರ್ಯಕ್ರಮದಿಂದ ಸೋಂಕಿತರ ಸಂಖ್ಯೆಯನ್ನು, ಕೊರೊನಾ ಸಾವುಗಳ ಸಂಖ್ಯೆಯನ್ನು ಹೆಚ್ಚಿಸಿದೆ.

ಏನಿದು ಕಾರ್ಯಕ್ರಮ?
ತಬ್ಲಿಘಿ-ಎ-ಜಮಾತ್ ಎಂಬ ಧಾರ್ಮಿಕ ಸಂಸ್ಥೆ ಮಾರ್ಚ್ 1ರಿಂದ ಮಾರ್ಚ್ 15ರವರೆಗೂ ಧಾರ್ಮಿಕ ಕಾರ್ಯಕ್ರಮವನ್ನು ಆಯೋಜಿಸಿತ್ತು. ವಿವಿಧ ರಾಜ್ಯಗಳಿಂದ 2,500ಕ್ಕೂ ಹೆಚ್ಚು ಮಂದಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಇಂಡೋನೇಷಿಯಾ, ಮಲೇಷಿಯಾ, ಥಾಯ್ಲೆಂಡ್, ಸೌದಿ ಅರೇಬಿಯಾ, ಕಜಕಿಸ್ತಾನ ಸೇರಿದಂತೆ ಒಟ್ಟು 16 ದೇಶಗಳ ಧರ್ಮಗುರುಗಳಿಂದ ಉಪನ್ಯಾಸವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮದ ಅವಧಿಯಲ್ಲಿ ಮರ್ಕಜ್ ಮಸೀದಿಯಲ್ಲೇ 280 ಧರ್ಮಗುರುಗಳು ಉಳಿದುಕೊಂಡಿದ್ದರು. 8 ಸಾವಿರಕ್ಕೂ ಹೆಚ್ಚು ಭಾರತೀಯ ಮುಸ್ಲಿಮರಿಂದಲೂ ಅದೇ 6 ಅಂತಸ್ತಿನ ಮಸೀದಿಯಲ್ಲಿ ವಾಸ್ತವ್ಯ ಹೂಡಿದ್ದರು. ಈ ವೇಳೆ ಧಾರ್ಮಿಕ ಕಾರ್ಯಕ್ರಮದಲ್ಲಿ ಕೊರೋನಾ ವೈರಸ್ ಪಾಲ್ಗೊಂಡವರಿಗೆ ಕೊರೊನಾ ವೈರಸ್ ಹಬ್ಬಿದೆ.

 

ಉಲ್ಲಂಘನೆ ಏನು?
ಈ ಕಾರ್ಯಕ್ರಮದ ಆಯೋಜಕರು ಮತ್ತು ಬೆಂಬಲಿಸುವ ವ್ಯಕ್ತಿಗಳು ಯಾವುದೇ ಉಲ್ಲಂಘನೆ ಆಗಿಲ್ಲ. ಜನತಾ ಕರ್ಫ್ಯೂ ಮತ್ತು 21 ದಿನಗಳ ಲಾಕ್‍ಡೌನ್ ಘೋಷಣೆಯಾಗಿದ್ದರಿಂದ ಅಲ್ಲಿದ್ದ ಮಂದಿಗೆ ಊರಿಗೆ ತೆರಳಲು ಸಾಧ್ಯವಾಗಿಲ್ಲ ಎಂದು ವಾದಿಸುತ್ತಿದ್ದಾರೆ. ಆದರೆ ಈ ಕಾರ್ಯಕ್ರಮ ಕಾನೂನು ಮತ್ತು ನಿಯಮಗಳನ್ನು ಉಲ್ಲಂಘಿಸಿ ನಡೆಸಲಾಗಿದೆ ಎನ್ನುವುದಕ್ಕೆ ಹಲವು ಸಾಕ್ಷ್ಯಗಳು ಸಿಗುತ್ತಿವೆ.

https://twitter.com/rajshekharTOI/status/1245020642295951360

ಉಲ್ಲಂಘನೆ -1: ಪ್ರವಾಸಿ ವೀಸಾದಡಿ ಬಂದವರು ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸುವಂತಿಲ್ಲ. ಆದರೆ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಉದ್ದೇಶದಿಂದ ಸುಳ್ಳು ಮಾಹಿತಿ ನೀಡಿ ಪ್ರವಾಸಿ ವೀಸಾ ಪಡೆದುಕೊಂಡಿದ್ದರು. ಈಗ ಈ ವೀಸಾ ಪಡೆದು ಬಂದವನ್ನು ಬಂದವರನ್ನು ಕಪ್ಪು ಪಟ್ಟಿಗೆ ಸೇರಿಸಲು ಗೃಹ ಇಲಾಖೆ ಮುಂದಾಗಿದೆ ಎಂದು ವರದಿಯಾಗಿದೆ.

 

ಕಳೆದ 2 ದಿನಗಳಿಂದ ಈ ಜಾಗದಲ್ಲಿ 281 ವಿದೇಶಿ ಪ್ರಜೆಗಳನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ನೇಪಾಳ 19, ಮಲೇಷ್ಯಾ 20, ಅಫ್ಘಾನಿಸ್ಥಾನ 1, ಮ್ಯಾನ್ಮಾರ್ 33, ಕಿರ್ಗಿಸ್ಥಾನ 28, ಇಂಡೋನೇಷ್ಯಾ 72, ಥಾಯ್ಲೆಂಡ್ 7, ಶ್ರೀಲಂಕಾ 34, ಬಾಂಗ್ಲಾದೇಶ 19, ಇಂಗ್ಲೆಂಡ್ 3, ಫಿಜಿ 4, ಫ್ರಾನ್ಸ್, ಸಿಂಗಾಪುರ, ಕುವೈತ್, ಅಫ್ಘಾನಿಸ್ಥಾನ, ಅಲ್ಜೀರಿಯಾದಿಂದ ತಲಾ ಒಬ್ಬೊಬ್ಬರು ಭಾಗವಹಿಸಿದ್ದಾರೆ. ಇದು ಪತ್ತೆಯಾದವರ ಸಂಖ್ಯೆ, ಇಲ್ಲಿಂದ ಹಲವು ರಾಜ್ಯಗಳಿಗೆ ವಿದೇಶಿಯರು ಪ್ರಯಾಣಿಸಿದ್ದು ಅದರ ಲೆಕ್ಕ ಸಿಗಬೇಕಿದೆ. ಇದನ್ನೂ ಓದಿ: ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಇದ್ರೆ ಸಿಂಗಾಪುರದಲ್ಲಿ 6 ತಿಂಗಳು ಜೈಲು

ಉಲ್ಲಂಘನೆ – 2: ವಿದೇಶದಿಂದ ಬಂದಂತಹ ವ್ಯಕ್ತಿಗಳು ಹೋಮ್ ಕ್ವಾರಂಟೈನ್ ನಲ್ಲಿ ಇರುವುದು ಕಡ್ಡಾಯ. ಎಲ್ಲ ರಾಜ್ಯ ಸರ್ಕಾರಗಳು ಈ ವಿಚಾರವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದು ಮನೆಗೆ ತೆರಳಿ ನೋಟಿಸ್ ಅಂಟಿಸಿ ಬರುತ್ತಿದ್ದಾರೆ. ಆದರೆ ಇಲ್ಲಿ ವಿದೇಶದಿಂದ ಬಂದವರು ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಹೀಗಾಗಿ ವಿದೇಶಿ ವ್ಯಕ್ತಿಗಳ ಪೈಕಿ ಎಷ್ಟು ಜನ ಆದೇಶ ಉಲ್ಲಂಘಿಸಿದ್ದಾರೆ ಎನ್ನುವುದು ಮುಂದೆ ತಿಳಿದು ಬರಲಿದೆ. ಈ ಕಾರಣಕ್ಕಾಗಿ ಐಪಿಸಿ ಸೆಕ್ಷನ್ 271(ಸೋಂಕು ಇದ್ದರೂ ಕ್ವಾರಂಟೈನ್ ನಿಯಮ ಉಲ್ಲಂಘನೆ) ಅಡಿ ಪ್ರಕರಣ ದಾಖಲಾಗಿದೆ. ಈ ಹಿಂದೆ ಹಲವು ರಾಜ್ಯ ಸರ್ಕಾರಗಳು ವಿದೇಶದಿಂದ ಪ್ರವಾಸಕ್ಕೆ ಬಂದವರ ಮಾಹಿತಿ ಸಿಗುತ್ತಿಲ್ಲ ಪತ್ತೆ ಕಾರ್ಯ ಮಾಡಲಾಗುತ್ತಿದೆ ಎಂದು ಹೇಳಿಕೆ ನೀಡಿದ್ದವು. ಈಗ ನಾಪತ್ತೆಯಾದ ವ್ಯಕ್ತಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿರಬಹುದೇ ಎನ್ನುವ ಅನುಮಾನ ಎದ್ದಿದೆ.

 

ಉಲ್ಲಂಘನೆ – 3: ದೆಹಲಿ ಸರ್ಕಾರ ಫೆ.13 ರಂದು 200ಕ್ಕೂ ಹೆಚ್ಚು ಮಂದಿ ಪಾಲ್ಗೊಳ್ಳುವ ಎಲ್ಲ ಕಾರ್ಯಕ್ರಮಗಳಿಗೆ ನಿಷೇಧ ಹೇರಿತ್ತು. ಅಂದು ಸುದ್ದಿಗೋಷ್ಠಿ ನಡೆಸಿದ್ದ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಐಪಿಎಲ್ ಸೇರಿದಂತೆ ಎಲ್ಲ ಸಭೆ ಸಮಾರಂಭಗಳಿಗೆ ಸರ್ಕಾರ ನಿಷೇಧ ಹೇರಿದೆ ಎಂದು ತಿಳಿಸಿದ್ದರು. ನಿಷೇಧ ಹೇರಿದ್ದರೂ ಸಾವಿರಾರು ಮಂದಿ ಭಾಗವಹಿಸಿದ್ದ ಈ ಕಾರ್ಯಕ್ರಮ ಮಾ.15 ರವರೆಗೆ ಹೇಗೆ ನಡೆಯಿತು ಎನ್ನುವುದೇ ದೊಡ್ಡ ಪ್ರಶ್ನೆಯಾಗಿದೆ.

ಉಲ್ಲಂಘನೆ – 4: 1897ರ ಸಾಂಕ್ರಾಮಿಕ ರೋಗ ನಿಯಂತ್ರಣ ಕಾಯ್ದೆ ಸೆಕ್ಷನ್ 3 ಉಲ್ಲಂಘನೆಯಾಗಿದೆ. ಈ ಕಾಯ್ದೆ ಅಡಿ ಸಾಂಕ್ರಾಮಿಕ ರೋಗವನ್ನು ಹರಡಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳಬಹುದಾಗಿದೆ. ಕೊರೊನಾ ಪ್ರಕರಣಗಳು ದೇಶದಲ್ಲಿ ಹೆಚ್ಚಾಗುತ್ತಿದ್ದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮಾರ್ಚ್ 13 ರಂದು ಈ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಬೇಕೆಂದು ರಾಜ್ಯ ಸರ್ಕಾರಗಳಿಗೆ ಸೂಚಿಸಿತ್ತು.

ಉಲ್ಲಂಘನೆ – 5 : ಈ ಕಾರ್ಯಕ್ರಮದ ಆಯೋಜಕರು ಐಪಿಸಿ ಸೆಕ್ಷನ್ ಗಳನ್ನು ಸಹ ಉಲ್ಲಂಘನೆ ಮಾಡಿದ್ದಾರೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 269(ನಿರ್ಲಕ್ಷ್ಯದಿಂದ ಪ್ರಾಣಕ್ಕೆ ಅಪಾಯಕಾರಿಯಾದ ರೋಗದ ಸೋಂಕನ್ನು ಹರಡಿರುವುದು), 270(ಉದ್ದೇಶಪೂರ್ವಕವಾಗಿ ಪ್ರಾಣಕ್ಕೆ ಅಪಾಯಕಾರಿಯಾದ ಸೋಂಕನ್ನು ಹರಡಿರುವುದು) ಮತ್ತು 120 ಬಿ(ಕ್ರಿಮಿನಲ್ ಒಳಸಂಚು) ಉಲ್ಲಂಘಿಸಿದ್ದು ದೆಹಲಿ ಪೊಲೀಸರು ಈಗ 1897ರ ಸಾಂಕ್ರಾಮಿಕ ರೋಗ ನಿಯಂತ್ರಣ ಕಾಯ್ದೆ ಮತ್ತು ಈ ಮೇಲೆ ತಿಳಿಸಿದ ಐಪಿಸಿ ಸೆಕ್ಷನ್ ಅಡಿ ಆಯೋಜಕರ ವಿರುದ್ದ ಪ್ರಕರಣ ದಾಖಲಿಸಿದ್ದಾರೆ.

ತಡವಾಗಿ ಬೆಳಕಿಗೆ ಬಂದಿದ್ದು ಯಾಕೆ?
3 ಪತ್ನಿಯರು, 16 ಮಕ್ಕಳನ್ನು ಹೊಂದಿದ್ದ 65 ವರ್ಷದ ತುಮಕೂರಿನ ವ್ಯಕ್ತಿ ಮಾರ್ಚ್ 27 ರಂದು ಮೃತಪಟ್ಟಿದ್ದ. ದೆಹಲಿಯ ಮಸೀದಿಯಲ್ಲಿ ನಡೆದಿದ್ದ ಕಾರ್ಯಕ್ರಮದಿಂದ ಮರಳಿ ಬಂದು ಆಸ್ಪತ್ರೆಗೆ ದಾಖಲಾಗಿದ್ದರು ಎನ್ನುವ ವಿಚಾರ ಗೊತ್ತಿತ್ತು. ಆದರೆ ಈ ವ್ಯಕ್ತಿ ವಿದೇಶಕ್ಕೆ ತೆರಳದ ಕಾರಣ ವೈರಸ್ ಬಂದಿದ್ದು ಹೇಗೆ ಎನ್ನುವ ಪ್ರಶ್ನೆ ಎದ್ದಿತ್ತು. ಈ ನಡುವೆ ನಡುವೆ ಅಂಡಮಾನ್ 9 ಮಂದಿಗೆ ವೈರಸ್ ಬಂದಿರುವುದು ದೃಢಪಟ್ಟಿತ್ತು. ಇವರು ದೆಹಲಿಯ ಮಸೀದಿಯ ಕಾರ್ಯಕ್ರಮದಲ್ಲಿ ಭಾಗಿಯಾದ ವಿಚಾರ ಬೆಳಕಿಗೆ ಬಂದಿತ್ತು. ಆದರೂ ಈ ಕಾರ್ಯಕ್ರಮದಿಂದಲೇ ಬಂದಿದೆ ಎನ್ನುವುದಕ್ಕೆ ಯಾವುದೇ ಆಧಾರ ಸಿಕ್ಕಿರಲಿಲ್ಲ. ಆದರೆ ಮಾರ್ಚ್ 30 ರಂದು ತೆಲಂಗಾಣದ 6 ಮಂದಿ ಮೃತಪಟ್ಟವರು ಮಸೀದಿಗೆ ತೆರಳಿದ ವ್ಯಕ್ತಿಗಳೇ ಆಗಿದ್ದರಿಂದ ಎಲ್ಲರ ಗಮನ ಮರ್ಕಸ್ ಮಸೀದಿಯತ್ತ ಹೋಯಿತು. ಈ ಮಧ್ಯೆ ಉಳಿದ ರಾಜ್ಯಗಳಲ್ಲಿ ಪಾಸಿಟಿವ್ ಪ್ರಕರಣಗಳು ಬೆಳಕಿಗೆ ಬರತೊಡಗಿತು. ವಿದೇಶಕ್ಕೆ ಹೋಗದೇ ಇದ್ದರೂ ಪಾಸಿಟಿವ್ ವ್ಯಕ್ತಿಗಳ ಟ್ರಾವೆಲ್ ಹಿಸ್ಟರಿ ಪರಿಶೀಲನೆ ಮಾಡತೊಡಗಿದಾಗ ಈ ಎಲ್ಲ ವ್ಯಕ್ತಿಗಳು ಮರ್ಕಸ್ ಮಸೀದಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವಿಚಾರ ಪತ್ತೆಯಾಗಿದೆ. ಈ ಕಾರಣಕ್ಕೆ ಮಾರ್ಚ್ 30 ರಂದು ಪೊಲೀಸ್ ಇಲಾಖೆ ಮತ್ತು ಆರೋಗ್ಯ ಅಧಿಕಾರಿಗಳು ಭೇಟಿ ನೀಡಿದಾಗ ಶಾಕಿಂಗ್ ಮಾಹಿತಿಗಳು ಬರತೊಡಗಿವೆ.

ಅಪಾಯ ಏನು?
ಕೊರೊನಾ ಬಾರದಂತೆ ತಡೆಯಲು ಮನೆಯಲ್ಲೇ ಇರಬೇಕು ಮತ್ತು ಮನೆಯಿಂದ ಹೊರ ಬಂದಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಆದರೆ ಈ ಕಾರ್ಯಕ್ರಮದಲ್ಲಿ ಒಟ್ಟು 12 ಸಾವಿರ ಮಂದಿ ಭಾಗವಹಿಸಿದ್ದಾರೆ. ಕಾರ್ಯಕ್ರಮ ಬಳಿಕ ರೈಲು, ಬಸ್ಸುಗಳಲ್ಲಿ ತಮ್ಮ ಊರುಗಳಿಗೆ ಎರಡು ಸಾವಿರಕ್ಕೂ ಹೆಚ್ಚು ಮಂದಿ ತೆರಳಿದ್ದಾರೆ. ಊರಿಗೆ ವಾಪಸ್ಸಾದವರಲ್ಲಿ ನೂರಕ್ಕೂ ಹೆಚ್ಚು ಮಂದಿಗೆ ಸೋಂಕು ಬಂದಿದ್ದರೆ, ಇದುವರೆಗೆ 8 ಮಂದಿ ಸಾವನ್ನಪ್ಪಿದ್ದಾರೆ. ಈಗಾಗಲೇ ಈ ಕಾರ್ಯಕ್ರಮಕ್ಕೆ ತೆರಳಿದವರ ಪತ್ತೆ ಕಾರ್ಯ ಆರಂಭವಾಗಿದೆ. ಈಗಾಲೇ ಜಮಾತ್ ಕಾರ್ಯಕ್ರಮದಲ್ಲಿ ಭಾಗಿಯಾದ 1,800ಕ್ಕೂ ಅಧಿಕ ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ.  ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಕೊರೊನಾ ಪತ್ತೆಯಾದ ಹಿನ್ನೆಲೆಯಲ್ಲಿ ಹಲವು ಗ್ರಾಮಗಳನ್ನೇ ಕ್ವಾರಂಟೈನ್ ಮಾಡಲಾಗಿದೆ.

ಕರ್ನಾಟಕಕ್ಕೂ ಅಪಾಯ?
ರಾಜ್ಯದ 342 ಮಂದಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈಗಾಗಲೇ 200 ಜನರನ್ನು ಕ್ವಾರಂಟೈನ್ ಮಾಡಲಾಗಿದೆ. ಮರ್ಕಜ್‍ಗೆ ಹೋದವರು ಖುದ್ದಾಗಿ ಬಂದು ಪರೀಕ್ಷೆ ಮಾಡಿಸಿಕೊಳ್ಳಬೇಕೆಂದು ಸರ್ಕಾರ ಮನವಿ ಮಾಡಿಕೊಂಡಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಇಂಡೋನೇಷ್ಯಾ ಮತ್ತು ಮಲೇಷ್ಯಾದ 62 ಮಂದಿ ಕರ್ನಾಟಕಕ್ಕೆ ಬಂದಿದ್ದಾರೆ. ಈ ಪೈಕಿ 12 ಮಂದಿಯನ್ನು ಪತ್ತೆಹಚ್ಚಲಾಗಿದೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *