ದುಬೈ: ಟಿ20 ವಿಶ್ವಕಪ್‍ನಲ್ಲಿ ಬ್ಲ್ಯಾಕ್ ಲೈವ್ಸ್ ಮ್ಯಾಟರ್ (ಬಿಎಲ್‍ಎಂ) ಅಭಿಯಾನಕ್ಕೆ ಬೆಂಬಲ ಸೂಚಿಸಿ ಮಂಡಿಯೂರಿ ನಿಲ್ಲಲು ಒಪ್ಪದೆ ದಕ್ಷಿಣ ಆಫ್ರಿಕಾ ತಂಡದಿಂದ ವಿಕೆಟ್ ಕೀಪರ್ ಬ್ಯಾಟ್ಸ್‌ಮ್ಯಾನ್ ಕ್ವಿಂಟನ್ ಡಿ ಕಾಕ್ ಹೊರ ನಡೆದಿದ್ದರು. ಆದರೆ ಇಂದು ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಮಂಡಿಯೂರಿ ಆಫ್ರಿಕಾ ತಂಡದೊಂದಿಗೆ ಕಣಕ್ಕಿಳಿದಿದ್ದಾರೆ.
ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯ ಆರಂಭಕ್ಕೂ ಮೊದಲು ಡಿ ಕಾಕ್ ಆಡುವ ಹನ್ನೊಂದರ ಬಳಗದಲ್ಲಿ ಇದ್ದರು. ಆದರೆ ದಕ್ಷಿಣ ಆಪ್ರಿಕಾ ಕ್ರಿಕೆಟ್ ಮಂಡಳಿಯ ಆ ಒಂದು ಸಂದೇಶದ ವಿರುದ್ಧ ತಿರುಗಿಬಿದ್ದ ಡಿ ಕಾಕ್ ಕಡೆಯ ಕ್ಷಣದಲ್ಲಿ ಆಡುವ ಬಳಗದಿಂದ ಹೊರ ನಡೆದರು. ಇದಕ್ಕೆ ಕಾರಣ ಬಿಎಲ್‍ಎಂ ಆಂದೋಲನವಾಗಿತ್ತು. ಬಳಿಕ ಡಿ ಕಾಕ್ ಜೊತೆ ಆಫ್ರಿಕಾ ಕ್ರಿಕೆಟ್ ಮಂಡಳಿ ಚರ್ಚಿಸಿತ್ತು. ಡಿ ಕಾಕ್ ಕೂಡ ನಾನು ಈ ಆಂದೋಲನಕ್ಕೆ ಬೆಂಬಲ ಸೂಚಿಸುವುದಾಗಿ ತಿಳಿಸಿ ಇಂದಿನ ಪಂದ್ಯದಲ್ಲಿ ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ: ಮಂಡಿಯೂರಲು ಒಪ್ಪದ ಡಿ ಕಾಕ್ ಆಫ್ರಿಕಾ ತಂಡದಿಂದ ಔಟ್?
ಏನಿದು ಬಿಎಲ್‍ಎಂ?
ಬ್ಲ್ಯಾಕ್ ಲೈವ್ಸ್ ಮ್ಯಾಟರ್ (ಬಿಎಲ್‍ಎಂ) ಕಳೆದ ವರ್ಷ ಅಮೆರಿಕದಲ್ಲಿ ಕಪ್ಪು ವರ್ಣೀಯ ಆರೋಪಿಯೊಬ್ಬರನ್ನು ಅಲ್ಲಿಯ ಪೊಲೀಸರು ನಡು ರಸ್ತೆಯಲ್ಲೇ ಹಲ್ಲೆ ನಡೆಸಿ ಕೊಂದಿದ್ದರು. ಇದನ್ನು ಕಪ್ಪು ವರ್ಣೀಯರು ವಿರೋಧಿಸಿ ಬಿಎಲ್‍ಎಂ ಆಂದೋಲನ ಆರಂಭಿಸಿದರು. ಬಳಿಕ ವಿಶ್ವಾದ್ಯಂತ ವಿವಿಧ ಕ್ರೀಡೆಗಳಲ್ಲಿ ಆಟಗಾರರು ಈ ಆಂದೋಲನಕ್ಕೆ ಸಾಂಕೇತಿಕವಾಗಿ ಮಂಡಿಯೂರಿ ಒಂದು ಕೈ ಎತ್ತಿ ಬೆಂಬಲ ಕೊಡಲು ಆರಂಭಿಸಿದರು. ಇದು ಇದೀಗ ಟಿ20 ವಿಶ್ವಕಪ್ ಪಂದ್ಯದಲ್ಲೂ ಕೂಡ ಮುಂದುವರಿಯುತ್ತಿದೆ. ಪ್ರತಿ ಪಂದ್ಯ ಆರಂಭಕ್ಕೂ ಮುನ್ನ ಆಟಗಾರರು ಮೈದಾನದಲ್ಲಿ ವಿವಿಧ ರೀತಿಯಲ್ಲಿ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ.
ದಕ್ಷಿಣ ಆಫ್ರಿಕಾ ತಂಡದಲ್ಲಿ ಕಪ್ಪು ವರ್ಣೀಯ ಆಟಗಾರರು ಮತ್ತು ಬಿಳಿ ವರ್ಣೀಯ ಆಟಗಾರರು ಇದ್ದಾರೆ. ಹಾಗಾಗಿ ಅಲ್ಲಿನ ಕ್ರಿಕೆಟ್ ಮಂಡಳಿ ಕಡ್ಡಾಯವಾಗಿ ಆಟಗಾರೆಲ್ಲರೂ ಮಂಡಿಯೂರಿ ಬಿಎಲ್‍ಎಂಗೆ ಬೆಂಬಲಿಸಬೇಕಾಗಿ ಆದೇಶ ಹೊರಡಿಸಿತ್ತು. ಇದಕ್ಕೆ ಒಪ್ಪದ ಡಿ ಕಾಕ್ ತಂಡದಿಂದ ಹಿಂದೆ ಸರಿದಿದ್ದರು. ಬಳಿಕ ಡಿ ಕಾಕ್ ನಡೆ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಡಿ ಕಾಕ್ ಆಫ್ರಿಕಾ ತಂಡದಿಂದಲೇ ಕಿಕ್ ಔಟ್ ಆಗುವ ಸಾಧ್ಯತೆ ಮೂಡಿತ್ತು. ಇದೀಗ ಡಿ ಕಾಕ್ ಮಂಡಿಯೂರಿ ಬಿಎಲ್‍ಎಂಗೆ ಬೆಂಬಲ ಸೂಚಿಸಿ ಈ ಸಮಸ್ಯೆಯನ್ನು ಬಗೆಹರಿಸಿದ್ದಾರೆ. ಇದನ್ನೂ ಓದಿ: ಹಿಂದೂಗಳ ನಡುವೆ ನಮಾಜ್ – ಟೀಕೆಯ ಬಳಿಕ ಕ್ಷಮೆಯಾಚಿಸಿದ ವಕಾರ್ ಯೂನಿಸ್
ಬಿಎಲ್‍ಎಂ ಆಂದೋಲನಕ್ಕೆ ವಿಶ್ವಕಪ್‍ನಲ್ಲಿ ಎಲ್ಲಾ ತಂಡಗಳು ಕೂಡ ಬೆಂಬಲ ಸೂಚಿಸುತ್ತಿದೆ. ಇದರಂತೆ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಮುನ್ನ ಭಾರತದ ಆಟಗಾರರೆಲ್ಲರೂ ಮಂಡಿಯೂರಿ ಸಂಪೂರ್ಣವಾಗಿ ಬಿಎಲ್‍ಎಂಗೆ ಬೆಂಬಲ ಸೂಚಿಸಿದ್ದರು.