ಚಿಕ್ಕಮಗಳೂರು: ಜೆಡಿಎಸ್ ಟಿಕೆಟ್ ತಪ್ಪಿದ್ದಕ್ಕೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಟಿ.ಎಚ್.ಶಿವಶಂಕರಪ್ಪ ಬೆಂಬಲಿಗರು ಜೆಡಿಎಸ್ ವರಿಷ್ಠ ದೇವೇಗೌಡ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಷ್ಟು ದಿನ ಟಿಕೆಟ್ ನಿನಗೆ ಎಂದು ಹೇಳುತ್ತಿದ್ದ ಕುಮಾರಸ್ವಾಮಿ ಈಗ ಶ್ರೀನಿವಾಸ್‍ಗೆ ನೀಡಿದ್ದಾರೆ. ಅಪ್ಪ-ಮಗ ಇಬ್ಬರು ಹಣಕ್ಕಾಗಿ ಟಿಕೆಟ್ ಮಾರಿಕೊಂಡಿದ್ದಾರೆಂದು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ತರೀಕೆರೆಯ ಹಾಲಿ ಕಾಂಗ್ರೆಸ್ ಶಾಸಕ ಜಿ.ಎಚ್. ಶ್ರೀನಿವಾಸ್‍ಗೆ ಟಿಕೆಟ್ ಕೈ ತಪ್ಪುತ್ತಿದ್ದಂತೆ ಶ್ರೀನಿವಾಸ್ ಬೆಂಗಳೂರಿಗೆ ತೆರಳಿ ಕುಮಾರಸ್ವಾಮಿ ಸಮ್ಮುಖದಲ್ಲಿ ಜೆಡಿಎಸ್ ಸೇರ್ಪಡೆಗೊಂಡಿದ್ದಾರೆ.
ಟಿಕೆಟ್ ಕೂಡ ಶ್ರೀನಿವಾಸ್‍ಗೆ ಎಂದು ಮಾತುಕತೆಯಾಗಿದೆ. ವಿಷಯ ತಿಳಿಯುತ್ತಿದ್ದಂತೆ ಟಿ.ಎಚ್. ಶಿವಶಂಕರಪ್ಪ ಬೆಂಬಲಿಗರು ತರೀಕೆರೆಯ ಗಾಂಧಿ ವೃತ್ತದಲ್ಲಿ ನೂರಾರು ಕಾರ್ಯಕರ್ತರು ರಸ್ತೆ ಬಂದ್, ರಸ್ತೆ ಮಧ್ಯೆ ಟೈರ್ ಸುಟ್ಟು ಪ್ರತಿಭಟನೆ ನಡೆಸಿದ್ದಾರೆ.
ಇದೇ ವೇಳೆ ಶಿವಶಂಕರಪ್ಪ ಬೆಂಬಲಿಗರೊಬ್ಬರು ಮೈಮೇಲೆ ಪೆಟ್ರೋಲ್ ಸುರಿದುಕೊಂಡರು. ಅಷ್ಟರಲ್ಲಿ ಅಲ್ಲೇ ಇದ್ದ ಪೊಲೀಸರು ಆತನನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ಮುಂಜಾಗ್ರತ ಕ್ರಮವಾಗಿ ತರೀಕೆರೆಯಲ್ಲಿ 200ಕ್ಕೂ ಅಧಿಕ ಪೊಲೀಸರು ಬಂದೋಬಸ್ತ್ ಏರ್ಪಡಿಸಲಾಗಿದೆ. ಉದ್ರೇಕ ಬೆಂಬಲಿಗರು ಪೊಲೀಸರ ಜೊತೆಗೆ ವಾಗ್ವಾದ ನಡೆಸಿದ್ದಾರೆ. ಅದೃಷ್ಟವಷಾತ್ ಯಾವುದೇ ಅನಾಹುತ ಸಂಭವಿಸಿಲ್ಲ.