2 ವರ್ಷದೊಳಗಿನ ಮಕ್ಕಳಿಗೆ ಸಿರಪ್ ನೀಡುವಂತಿಲ್ಲ – ರಾಜ್ಯ ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಬಿಡುಗಡೆ

Public TV
2 Min Read

ಬೆಂಗಳೂರು: ಮಧ್ಯಪ್ರದೇಶದಲ್ಲಿ (Madhya Pradesh) ಕೆಮ್ಮಿನ ಸಿರಪ್ (Cough Syrup) ಕುಡಿದು ಮಕ್ಕಳು ಸಾವನ್ನಪ್ಪಿದ ಬಳಿಕ ಅಲರ್ಟ್‌ ಆದ ರಾಜ್ಯ ಆರೋಗ್ಯ ಇಲಾಖೆ (Health Department) ಮಹತ್ವದ ಸಭೆ ನಡೆಸಿ ಕೆಮ್ಮಿನ ಸಿರಪ್ ಬಳಕೆಗೆ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ಆರೋಗ್ಯ ಇಲಾಖೆ ಮಾರ್ಗಸೂಚಿಯ ಪ್ರಕಾರ, 2 ವರ್ಷದೊಳಗಿನ ಮಕ್ಕಳಿಗೆ ಸಿರಪ್ ನೀಡುವಂತಿಲ್ಲ. 2-5 ವರ್ಷದ ಮಕ್ಕಳಿಗೆ ತಜ್ಞರ ಸಲಹೆ ಮೇರೆಗೆ ಔಷಧಿ ನೀಡಬೇಕು. ಅಲ್ಲದೇ 5 ವರ್ಷ ಮೇಲ್ಪಟ್ಟ ಮಕ್ಕಳಿಗೆ ವೈದ್ಯರ ಸಲಹೆ ಮೇರೆಗೆ ಔಷಧಿ ನೀಡಬೇಕು. ಕಡಿಮೆ ಅವಧಿಗೆ ಕನಿಷ್ಠ ಅಗತ್ಯವಿರುವ ಡೋಸ್ ಬಳಸಬೇಕು. ಮಲ್ಟಿಮೆಡಿಸನ್ ಒಳಗೊಂಡ ಸಿರಪ್‌ಗಳನ್ನ ಬಳಸಬಾರದು ಎಂದು ತಿಳಿಸಿದೆ. ಇದನ್ನೂ ಓದಿ: ಹರ್ಷ ಕೊಲೆ ಕೇಸ್‌ನ ಸಾಕ್ಷಿ ಅಮ್ಜದ್ ಹತ್ಯೆ – ಶಿವಮೊಗ್ಗಕ್ಕೆ ಮತ್ತೆ ಎಂಟ್ರಿ ಕೊಟ್ಟ ಎನ್‌ಐಎ

ಇನ್ನು ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೆ ಕೆಮ್ಮಿನ ಸಿರಪ್‌ಗಳನ್ನ ಖರೀದಿಸಬಾರದು, ಬಳಸಬಾರದು. ಈ ಹಿಂದೆ ಬಳಸಿದ ಔಷಧಿಗಳನ್ನ ಮರುಬಳಕೆ ಮಾಡಬಾರದು. ಕೆಮ್ಮು ಉಲ್ಬಣಗೊಂಡರೆ ವೈದ್ಯರನ್ನ ಸಂಪರ್ಕಿಸಿ. ಅವಧಿ ಮೀರಿದ ಔಷಧಿಗಳನ್ನ ನೋಡಿ ಬಳಸಬೇಕು. ಯಾವುದೇ ಅಸಹಜ ಪ್ರತಿಕ್ರಿಯೆ, ನಿದ್ರಾವಸ್ಥೆ ವಾಂತಿ ಅಥವಾ ಉಸಿರಾಟ ತೊಂದರೆ ಇದ್ದರೆ ಹತ್ತಿರದ ವೈದ್ಯರನ್ನ ಸಂಪರ್ಕಿಸಿ. ಔಷಧ ಅವಧಿ ಮುಗಿಯುವ ದಿನಾಂಕವನ್ನು ಪರಿಶೀಲಿಸಿ ಮತ್ತು ಲೇಬಲ್‌ಗಳನ್ನು ಎಚ್ಚರಿಕೆಯಿಂದ ಓದಿ ಎಂದು ಸೂಚಿಸಲಾಗಿದೆ. ಇದನ್ನೂ ಓದಿ: Bengaluru | ಪತಿಯೊಂದಿಗೆ ಗಲಾಟೆ – ಗೃಹಿಣಿ ನೇಣಿಗೆ ಶರಣು

ಮಕ್ಕಳ ಸಿರಪ್ ಬಳಕೆಗೆ ಏನು ಗೈಡ್‌ಲೈನ್ಸ್?
– ಚಿಕ್ಕಮಕ್ಕಳಿಗೆ ಕೆಮ್ಮಿನ ಸಿರಪ್ ನೀಡಬೇಡಿ.
– 1 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಕೆಮ್ಮು ಮತ್ತು ಶೀತದ ಸಿರಪ್ ನೀಡಬೇಡಿ.
– 2.2 ರಿಂದ 5 ವರ್ಷಗಳ ವಯಸ್ಸಿನ ಮಕ್ಕಳಿಗೆ ಸರಿಯಾದ ವೈದ್ಯಕೀಯ ಪರೀಕ್ಷೆಯ ನಂತರ ತಜ್ಞ ವೈದ್ಯರ ಸಲಹೆ ಮೇರೆಗೆ ಮಾತ್ರ ಔಷಧಿ ನೀಡಬೇಕು.

ಹಿರಿಯ ಮಕ್ಕಳಿಗೆ ಏನು ಸಲಹೆ?
– ಕೆಮ್ಮಿನ ಸಿರಪ್ ವೈದ್ಯರ ಸಲಹೆ ಮೇರೆಗೆ ಸ್ವೀಕರಿಸಬೇಕು.
– ಸಾಧ್ಯವಾದಷ್ಟು ಕಡಿಮೆ ಅವಧಿಗೆ ಕಡಿಮೆ ಡೋಸ್ ಅನ್ನು ಬಳಸಬೇಕು.
– ಬಹುಔಷಧ ಸಂಯೋಜನೆ ಇರುವ ಸಿರಪ್‌ಗಳನ್ನು ಬಳಸಬಾರದು.

ಮನೆ ಮದ್ದುಗಳು:
– ಸಾಕಷ್ಟು ದ್ರವರೂಪದ ಪದಾರ್ಥ ನೀಡುವುದು.
– ಸಾಕಷ್ಟು ವಿಶ್ರಾಂತಿ ಮತ್ತು ನಿದ್ದೆ ಮಾಡಲು ಅವಕಾಶ ನೀಡುವುದು.
– ಪೌಷ್ಠಿಕ ಆಹಾರ ನೀಡುವುದು.

ಈ ರೋಗಲಕ್ಷಣಗಳು ಉಂಟಾದರೆ ವೈದ್ಯರನ್ನು ಸಂಪರ್ಕಿಸಿ:
– ಉಸಿರಾಟದ ತೊಂದರೆ ಅಥವಾ ವೇಗವಾಗಿ ಉಸಿರಾಟ
– ನಿರಂತರ ಅಥವಾ ಉಲ್ಬಣಗೊಳ್ಳುತ್ತಿರುವ ಕೆಮ್ಮು
– ಅತಿಯಾದ ಜ್ವರ ಮತ್ತು ಆಹಾರ ಸೇವನೆ ಮಾಡದೇ ಇರೋದು
– ನಿದ್ರಾವಸ್ಥೆ ಅಥವಾ ಅಸಹಜ ಪ್ರತಿಕ್ರಿಯೆ

Share This Article