ಸ್ವಾಮಿ ಚಿನ್ಮಯಾನಂದ ಪ್ರಕರಣ -ಯೋಗಿ ಸರ್ಕಾರದ ವಿರುದ್ಧ ಗುಡುಗಿದ ಪ್ರಿಯಾಂಕ ಗಾಂಧಿ

Public TV
3 Min Read

– ಸುಪ್ರೀಂ ಮೊರೆ ಹೋದ ವಕೀಲರು

ಲಕ್ನೋ: ಉತ್ತರ ಪ್ರದೇಶದ ಶಹಜಹಾಂಪುರನ ಮಾಜಿ ಕೇಂದ್ರ ಸಚಿವ ಮತ್ತು ಬಿಜೆಪಿ ನಾಯಕ ಸ್ವಾಮಿ ಚಿನ್ಮಯಾನಂದ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಕೇಳಿ ಬಂದಿತ್ತು. ಇದೀಗ ಸ್ವಾಮಿ ಚಿನ್ಮಯಾನಂದ ವಿರುದ್ಧ ಆರೋಪಿಸಿದ್ದ ಸಂತ್ರಸ್ತೆ ಕಾಣೆಯಾಗಿದ್ದು, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿರುವ ಪ್ರಿಯಾಂಕ ಗಾಂಧಿ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರದ ವಿರುದ್ಧ ಗುಡುಗಿದ್ದಾರೆ.

ಕಳೆದ ವರ್ಷ ಯೋಗಿ ಸರ್ಕಾರ ಸ್ವಾಮಿ ಚಿನ್ಮಯಾನಂದ ಪ್ರಕರಣವನ್ನು ಹಿಂಪಡೆದುಕೊಂಡಿತ್ತು. ಪ್ರಕರಣ ವಾಪಸ್ ಪಡೆದುಕೊಳ್ಳುವ ಮೂಲಕ ಬಿಜೆಪಿ ಸರ್ಕಾರ ಯಾರ ಪರ ನಿಂತಿದೆ ಎಂಬುವುದು ಸಾಬೀತಾಗಿದೆ ಎಂದು ಪ್ರಿಯಾಂಕ ಗಾಂಧಿ ಆಕ್ರೋಶ ಹೊರಹಾಕಿದ್ದಾರೆ.

ಶಹಜಹಾಂಪುರ ಪ್ರಕರಣ ಉನ್ನಾವೋದಂತೆ ಬದಲಾಗುತ್ತಿದೆ. ಮುಂದೊಂದು ದಿನ ಉತ್ತರ ಪ್ರದೇಶದ ಮಹಿಳೆಯರಿಗೆ ನೀವು ಸುರಕ್ಷಿತವಾಗಿದ್ದೀರಿ. ಅನ್ಯಾಯ ನಡೆದರೆ ನಿಮಗೆ ನ್ಯಾಯ ಸಿಗಲಿದೆ ಎಂಬ ಭರವಸೆಯನ್ನು ಬಿಜೆಪಿ ಭರವಸೆ ನೀಡುವ ದಿನ ಬರುವ ಸಾಧ್ಯತೆಗಳಿವೆ. ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಸಂತ್ರಸ್ತೆ ಕಾಣೆಯಾಗಿದ್ದಾಳೆ ಅಥವಾ ಯಾರಾದರು ಅಪಹರಿಸಿದ್ರಾ ಗೊತ್ತಿಲ್ಲ. ಆಕೆ ಎಲ್ಲಿದ್ದಾಳೆ ಎಂಬ ವಿಚಾರ ಯಾರಿಗೂ ಗೊತ್ತಾಗುತ್ತಿಲ್ಲ. ಇನ್ನೆಷ್ಟು ದಿನ ಈ ರೀತಿ ನಡೆಯುತ್ತೆ?. ಉತ್ತರ ಪ್ರದೇಶದಲ್ಲಿ ಉನ್ನವೋ ಪ್ರಕರಣ ಮತ್ತೊಮ್ಮೆ ಮರುಕುಳಿಸುತ್ತಿದೆ ಎಂದು ಭಯವಾಗುತ್ತಿದೆ. ಬಿಜೆಪಿ ನಾಯಕರ ವಿರುದ್ಧ ಧ್ವನಿ ಎತ್ತುವ ಮಹಿಳೆಗೆ ನ್ಯಾಯ ಸಿಗೋದು ದೂರದ ಮಾತು. ಆಕೆ ಸುರಕ್ಷಿತವಾಗಿ ಇರುತ್ತಾಳೋ ಎಂಬುವುದು ಗ್ಯಾರಂಟಿ ಇಲ್ಲ ಎಂದು ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.

ವಕೀಲರು ಸುಪ್ರೀಂ ಮೊರೆ:
ಸ್ವಾಮಿ ಚಿನ್ಮಯಾನಂದ ಪ್ರಕರಣಕ್ಕೆ ಸಂಬಂಧಿಸಿದಂತೆ ವಕೀಲರ ಸಂಘ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ. ಪ್ರಕರಣಕ್ಕೆ ಸಂಬಂಧಿಸಿದ ಸಂತ್ರಸ್ತೆ ಕಳೆದ ಮೂರು ದಿನಗಳಿಂದ ಕಾಣೆಯಾಗಿದ್ದು, ಯಾರ ಸಂಪರ್ಕಕ್ಕೂ ಸಿಕ್ಕಿಲ್ಲ. ಈ ಸಂಬಂಧ ಸುಪ್ರೀಂಕೋರ್ಟ್ ಸ್ವಯಂ ಪ್ರೇರಿತವಾಗಿ ಪ್ರಕರಣ ಕೈಗೆತ್ತಿಕೊಳ್ಳಬೇಕೆಂದು ಮನವಿ ಮಾಡಿಕೊಂಡಿದ್ದಾರೆ. ಮಂಗಳವಾರ ಶಹಜಹಾಂಪುರ ಪೊಲೀಸ್ ಠಾಣೆಯಲ್ಲಿ ಸ್ವಾಮಿ ಚಿನ್ನಯಾನಂದ ವಿರುದ್ಧ ಎಫ್‍ಐಆರ್ ದಾಖಲಾಗಿದೆ.

ಶಹಜಹಾಂಪುರ ನಗರದ ಎಸ್‍ಎಸ್ ಕಾಲೇಜಿನ ವಿದ್ಯಾರ್ಥಿನಿ ವಿಡಿಯೋ ಕ್ಲಿಪ್ ಮಾಡಿ ಹರಿಬಿಟ್ಟಿದ್ದಳು. ವಿಡಿಯೋದಲ್ಲಿ ಕಾಲೇಜಿನ ನಿರ್ದೇಶಕ ಮತ್ತು ಬಿಜೆಪಿ ನಾಯಕ ಸ್ವಾಮಿ ಚಿನ್ಮಯನಾಂದ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಲಾಗಿತ್ತು. ವಿಡಿಯೋ ಮಾಡಿದ ಬಳಿಕ ವಿದ್ಯಾರ್ಥಿನಿ ಕಾಣೆಯಾಗಿದ್ದಾಳೆ.

ಚಿನ್ಮಯಾನಂದ ಸ್ವಾಮಿಗಳ ವಿರುದ್ಧ ಬ್ಲ್ಯಾಕ್‍ಮೇಲ್ ಮಾಡಲಾಗುತ್ತಿದೆ. ವಿದ್ಯಾರ್ಥಿನಿ ತಂದೆ ದಾಖಲಿಸಿರುವ ದೂರಿನಲ್ಲಿ ಸ್ವಾಮೀಜಿಗಳು ತಮ್ಮ ಮಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ಆಗಸ್ಟ್ 24ರಂದು ವೈರಲ್ ವಿಡಿಯೋದಲ್ಲಿ ವಿದ್ಯಾರ್ಥಿನಿ, ಸಂತ ಸಮಾಜದ ದೊಡ್ಡ ನಾಯಕನೋರ್ವ ಬಹಳ ಹುಡುಗಿಯರ ಜೀವನ ಹಾಳು ಮಾಡಿದ್ದಾನೆ ಎಂದು ಹೇಳಿದ್ದಾಳೆ. ವಿಡಿಯೋದಲ್ಲಿ ಯಾರ ಹೆಸರು ಉಲ್ಲೇಖಿಸಿಲ್ಲ ಎಂದು ಸ್ವಾಮಿ ಚಿನ್ಮಯಾನಂದ ಪರ ವಕೀಲರು ಎಲ್ಲ ಆರೋಪಗಳನ್ನು ತಳ್ಳಿ ಹಾಕಿದ್ದಾರೆ.

ಸಂತ್ರಸ್ತೆಯ ತಂದೆಗೆ ಭದ್ರತೆ:
ವಿಡಿಯೋ ವೈರಲ್ ಬಳಿಕ ವಿದ್ಯಾರ್ಥಿನಿ ಕಾಣೆಯಾಗಿದ್ದಾಳೆ. ಇತ್ತ ವಿದ್ಯಾರ್ಥಿನಿ ತಂದೆ ಸ್ವಾಮಿ ಚಿನ್ಮಯಾನಂದ ವಿರುದ್ಧ ದೂರನ್ನು ಸಹ ದಾಖಲಿಸಿದ್ದಾರೆ. ಮುಂಜಾಗ್ರತ ಕ್ರಮವಾಗಿ ಸಂತ್ರಸ್ತೆಯ ತಂದೆಗೆ ಪೊಲೀಸ್ ರಕ್ಷಣೆಯನ್ನು ಒದಗಿಸಲಾಗಿದೆ. ತಮ್ಮ ಮಗಳನ್ನು ಸ್ವಾಮಿ ಚಿನ್ನಯಾನಂದರೇ ಅಪಹರಿಸಿದ್ದಾರೆ ಎಂದು ವಿದ್ಯಾರ್ಥಿನಿ ತಂದೆ ಆರೋಪಿಸಿದ್ದಾರೆ.

ವಿದ್ಯಾರ್ಥಿನಿಗಾಗಿ ಶೋಧ:
ಮಾಜಿ ಕೇಂದ್ರ ಸಚಿವ ಸ್ವಾಮಿ ಚಿನ್ಮಯಾನಂದ ವಿರುದ್ಧ ಐಪಿಸಿ ಸೆಕ್ಷನ್ 364 (ಕೊಲೆ ಮತ್ತು ಅಪಹರಣ) ಮತ್ತು 506 (ಜೀವ ಬೆದರಿಕೆ) ಅನ್ವಯ ದೂರನ್ನು ದಾಖಲಿಸಿಕೊಳ್ಳಲಾಗಿದೆ. ಇತ್ತ ಸಂತ್ರಸ್ತೆಯ ತಂದೆಗೆ ಪೊಲೀಸ್ ರಕ್ಷಣೆ ನೀಡಲಾಗಿದೆ. ನಾಪತ್ತೆಯಾಗಿರುವ ವಿದ್ಯಾರ್ಥಿನಿಯ ಪತ್ತೆಗಾಗಿ ವಿಶೇಷ ತಂಡಗಳನ್ನು ರಚನೆಯಾಗಿದ್ದು, ಪೊಲೀಸರು ಈಗಾಗಲೇ ಕಾರ್ಯಪ್ರವೃತ್ತರಾಗಿದ್ದಾರೆ. ಶೀಘ್ರವೇ ಸಂತ್ರಸ್ತೆಯನ್ನು ಸುರಕ್ಷಿತವಾಗಿ ಕರೆತರಲಾಗುವುದು ಎಂದು ಎಸ್‍ಪಿ ಡಾ.ಯಶ್ ಚನಪ್ಪಾ ಮಾಧ್ಯಮಗಳಿಗೆ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *