ಸಕ್ಕರೆ ನಾಡಲ್ಲಿಂದು ‘ಸ್ವಾಭಿಮಾನಿ’ಗಳ ವಿಜಯೋತ್ಸವ-ಸುಮಲತಾಗೆ ಜೋಡೆತ್ತುಗಳ ಸಾಥ್

Public TV
2 Min Read

ಮಂಡ್ಯ: ಸಕ್ಕರೆನಾಡು ಮಂಡ್ಯದ ಜನತೆ ಸುಮಲತಾ ಅಂಬರೀಶ್ ಅವರನ್ನ ಲೋಕಸಭಾ ಚುನಾವಣೆಯಲ್ಲಿ ಗೆಲ್ಲಿಸಿದ್ದಾರೆ. ಅದರ ಫಲವಾಗಿ ಸುಮಲತಾ ಮತ್ತು ಬೆಂಬಲಿಗರು ಇಂದು ಮಂಡ್ಯದಲ್ಲಿ ಸ್ವಾಭಿಮಾನಿ ವಿಜಯೋತ್ಸವ ಆಚರಿಸುವ ಮೂಲಕ ಕ್ಷೇತ್ರದ ಜನತೆಗೆ ಕೃತಜ್ಞತೆ ಸಲ್ಲಿಸಲಿದ್ದಾರೆ.

ಸಕ್ಕರೆನಾಡು ಮಂಡ್ಯದ ಜನ ಸ್ವಾಭಿಮಾನಿಗಳು. ಅವರು ಮುಗ್ಧರೇ ಹೊರತು ಮೂರ್ಖರಲ್ಲ ಅಂತಾ ಹೇಳಿಕೊಂಡು ಸುಮಲತಾ ಚುನಾವಣೆಯಲ್ಲಿ ಮತ ಕೇಳಿದ್ದರು. ಹಾಗೆ ಮಂಡ್ಯ ಮತದಾರರು ಸೆರಗೊಡ್ಡಿ ಮತ ಕೇಳಿದ ಸೊಸೆ ಸುಮಲತಾರ ಕೈ ಬಿಡಲಿಲ್ಲ. ಬರೋಬ್ಬರಿ ಒಂದು ಕಾಲು ಲಕ್ಷ ಮತಗಳ ಅಂತರದಲ್ಲಿ ಗೆಲ್ಲಿಸಿದರು. ಈಗ ಆ ಮತದಾರರಿಗೆ ಕೃತಜ್ಞತೆ ಸಲ್ಲಿಸೋ ಸಮಯ. ಹೀಗಾಗಿ ಇವತ್ತು ಸುಮಲತಾ ಮತ್ತು ಬೆಂಬಲಿಗರು ಮಂಡ್ಯದಲ್ಲಿ ಸ್ವಾಭಿಮಾನಿ ವಿಜಯೋತ್ಸವ ಆಚರಿಸುತ್ತಿದ್ದಾರೆ.

ಇವತ್ತು ರೆಬೆಲ್ ಸ್ಟಾರ್ ಅಂಬಿ ಹುಟ್ಟಿದ ದಿನ. ಅಂಬಿ ಜಯಂತಿ ಹಾಗೂ ಸ್ವಾಭಿಮಾನಿ ವಿಜಯೋತ್ಸವ ಮಂಡ್ಯದಲ್ಲಿ ಮತ್ತೊಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ. ಇವತ್ತಿನ ವಿಜಯೋತ್ಸವದ ಮೇನ್ ಅಟ್ರ್ಯಾಕ್ಷನ್ ಜೋಡೆತ್ತು ದರ್ಶನ್ ಮತ್ತು ಯಶ್. ಸ್ವಾಭಿಮಾನಿ ಮಂತ್ರ ಜಪಿಸಿ ಸುಮಲತಾ ಗೆಲುವಿಗೆ ಸ್ಟಾರ್‍ಡಮ್ ಬಿಟ್ಟು ಹಗಲಿರುಳು ಪ್ರಚಾರ ಮಾಡಿದ ಚಾಲೆಂಜಿಂಗ್ ಸ್ಟಾರ್ ದರ್ಶನ್, ರಾಕಿಂಗ್ ಸ್ಟಾರ್ ಯಶ್, ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್, ನಟ ದೊಡ್ಡಣ್ಣ, ಅಂಬಿ ಪುತ್ರ ಅಭಿಷೇಕ್ ಸೇರಿ ಹಲವರು ಸುಮಲತಾಗೆ ವಿಜಯ ಯಾತ್ರೆಯಲ್ಲಿ ಸಾಥ್ ನೀಡಲಿದ್ದಾರೆ. ಅದರಲ್ಲೂ ಡಿ ಬಾಸ್ ದಚ್ಚು ಸಂಜಯ್ ನಗರದಲ್ಲಿ ನೆಲಕ್ಕೆ ಮುತ್ತುಕೊಟ್ಟು ಭೂಮಿತಾಯಿಗೆ ನಮಿಸಲಿದ್ದಾರೆ.

ಬೆಳಗ್ಗೆ ಬೆಂಗಳೂರಿನಲ್ಲಿ ಅಂಬಿ ಸಮಾಧಿಗೆ ನಮನ ಸಲ್ಲಿಸಿ ಮಂಡ್ಯಗೆ ಆಗಮಿಸಲಿರುವ ಸುಮಲತಾ, ಎಂದಿನಂತೆ ಮಂಡ್ಯದ ಗ್ರಾಮದೇವತೆ ಕಾಳಮ್ಮನ ಮೊರೆ ಹೋಗಲಿದ್ದಾರೆ. ಕಾಳಿಕಾಂಬ ದೇಗುಲದಿಂದ ವಿಜಯಯಾತ್ರೆ ಆರಂಭಗೊಳ್ಳಲಿದ್ದು, ಸಿಲ್ವರ್ ಜ್ಯುಬಿಲಿ ಪಾರ್ಕ್ ನಲ್ಲಿ ಅಂತ್ಯಗೊಳ್ಳಲಿದೆ. ಅಲ್ಲಿ ಬೃಹತ್ ಸಮಾವೇಶ ಉದ್ದೇಶಿಸಿ ಸುಮಲತಾ, ದರ್ಶನ್, ಯಶ್ ಮಾತನಾಡಲಿದ್ದಾರೆ. ಈ ವೇಳೆ ಬಿಜೆಪಿ ಸೇರುವ ವದಂತಿ ಬಗ್ಗೆ ಸುಮಲತಾ ಸ್ಪಷ್ಟನೆ ನೀಡುವ ಸಾಧ್ಯತೆ ಇದೆ. ಜೆಡಿಎಸ್ ಸಚಿವರ ಅಸಹಕಾರ ಬಗ್ಗೆಯೂ ವೇದಿಕೆಯಲ್ಲಿ ಉತ್ತರ ಕೊಡುವ ಸಾಧ್ಯತೆ ಇದೆ. ಜೋಡೆತ್ತುಗಳು ಸಿನಿಮಾ ಶೈಲಿಯಲ್ಲೇ ದಳಪತಿಗಳಿಗೆ ತಿರುಗೇಟು ನೀಡುವ ಸಾಧ್ಯತೆ ಇದೆ.

ಸಮಾವೇಶದಲ್ಲಿ ಅಂಬಿ ಕುರಿತ ಪುಸ್ತಕ ಬಿಡುಗಡೆ ಕಾರ್ಯಕ್ರಮ ಕೂಡ ಹಮ್ಮಿಕೊಳ್ಳಲಾಗಿದೆ. ಒಟ್ಟಾರೆ, ಸ್ವಾಭಿಮಾನಿ ವಿಜಯೋತ್ಸವ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *