– ಶಿಲಾನ್ಯಾಸ ನೆರವೇರಿಸಿದ ಟಿಎಂಸಿ ಉಚ್ಛಾಟಿತ ಶಾಸಕ ಹುಮಾಯೂನ್ ಕಬೀರ್
ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನಲ್ಲಿ ಅಯೋಧ್ಯೆಯಲ್ಲಿರುವ ಬಾಬರಿ ಮಸೀದಿಯ (Babri Masjid) ಮಾದರಿಯಲ್ಲಿ ಹೊಸ ಮಸೀದಿಗೆ ತೃಣಮೂಲ ಕಾಂಗ್ರೆಸ್‌ನ ಉಚ್ಛಾಟಿತ ಶಾಸಕ ಹುಮಾಯೂನ್ ಕಬೀರ್ (Humayun Kabir) ಇಂದು ಶಿಲಾನ್ಯಾಸ ನೆರವೇರಿಸಿದರು.
#WATCH | Murshidabad, West Bengal: Suspended TMC MLA Humayun Kabir gets on the stage at the venue where he will lay the foundation stone of Babri Masjid. pic.twitter.com/LPGYIMJZTV
— ANI (@ANI) December 6, 2025
ಬಿಗಿ ಭದ್ರತೆಯ ನಡುವೆ, ಮುರ್ಷಿದಾಬಾದ್ (Murshidabad) ಜಿಲ್ಲೆಯ ರೆಜಿನಗರದಲ್ಲಿ ಅಮಾನತುಗೊಂಡ ಟಿಎಂಸಿ ಶಾಸಕ ಹುಮಾಯೂನ್ ಕಬೀರ್ ಮಸೀದಿಗೆ ಅಡಿಪಾಯ ಹಾಕಿದರು. ರೆಜಿನಗರ ಮತ್ತು ಹತ್ತಿರದ ಬೆಲ್ದಂಗಾ ಪ್ರದೇಶದಲ್ಲಿ ಪೊಲೀಸ್, ಆರ್‌ಎಎಫ್ ಹಾಗೂ ಗಡಿ ಭದ್ರತಾ ಪಡೆಗಳ (BSF) ದೊಡ್ಡ ತುಕಡಿಗಳನ್ನೇ ಭದ್ರತೆಗೆ ನಿಯೋಜಿಸಲಾಗಿತ್ತು.
ಮಸೀದಿಯ ಶಿಲಾನ್ಯಾಸ ಸಮಾರಂಭದ ವೇದಿಕೆಯಲ್ಲಿ ಹುಮಾಯೂನ್ ಕಬೀರ್, ಧರ್ಮಗುರುಗಳ ಜೊತೆಗೆ ರಿಬ್ಬನ್ ಕತ್ತರಿಸುವ ಮೂಲಕ ಶಿಲಾನ್ಯಾಸ ನೆರವೇರಿಸಿದ್ರು. ಸಮಾರಂಭದ ಸಮಯದಲ್ಲಿ, ʻನಾರಾ-ಎ-ತಕ್ಬೀರ್, ಅಲ್ಲಾಹು ಅಕ್ಬರ್ʼ ಘೋಷಣೆಗಳು ಮೊಳಗಿದವು. ಬೆಳಿಗ್ಗೆಯಿಂದಲೇ ಸ್ಥಳದಲ್ಲಿ ಸಾವಿರಾರು ಜನರು ಜಮಾಯಿಸಿದ್ದರು.
ಈ ವಾರದ ಆರಂಭದಲ್ಲಿ ಹುಮಾಯೂನ್ ಕಬೀರ್ ಅವರನ್ನು ಟಿಎಂಸಿಯಿಂದ ಅಮಾನತುಗೊಳಿಸಿತು. ಪಕ್ಷವು ಕೋಮು ರಾಜಕೀಯ ವಿಷಯ ಎಂದು ವಿವರಿಸಿದ್ದನ್ನು ಉಲ್ಲೇಖಿಸಿತ್ತು. ಕಬೀರ್ ಈ ತಿಂಗಳ ಆರಂಭದಲ್ಲಿ ಶಿಲಾನ್ಯಾಸ ನೆರವೇರಿಸುವುದಾಗಿ ಘೋಷಿಸಿದ್ದರು, ಇದು ರಾಜಕೀಯ ಟೀಕೆಗಳನ್ನು ಹುಟ್ಟುಹಾಕಿತು ಮತ್ತು ರಾಜ್ಯ ಆಡಳಿತವು ಭದ್ರತೆ ಹೆಚ್ಚಿಸುವಂತೆ ಒತ್ತಾಯಿಸಿತು. ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಧ್ವಂಸಗೊಂಡ ವಾರ್ಷಿಕೋತ್ಸವವಾದ ಡಿಸೆಂಬರ್ 6 ರಂದು ಕಬೀರ್ ಶಿಲಾನ್ಯಾಸ ಸಮಾರಂಭಕ್ಕೆ ಆಯ್ಕೆ ಮಾಡಿಕೊಂಡಿದ್ದರು.
ಬಳಿಕ ಮಾತನಾಡಿದ ಕಬೀರ್, 90 ವಿಧಾನಸಭಾ ಕ್ಷೇತ್ರಗಳಲ್ಲಿ ಮುಸ್ಲಿಂ ಅಭ್ಯರ್ಥಿಗಳು ಗೆಲ್ಲುತ್ತಾರೆ. ಇದನ್ನು ತಡೆಯಲು ಯಾವುದೇ ಶಕ್ತಿಗೆ ಸಾಧ್ಯವಿಲ್ಲ. ನಾವು ಕೋಲ್ಕತ್ತಾ ಹೈಕೋರ್ಟ್‌ನ ಆದೇಶಗಳನ್ನ ಪಾಲಿಸುತ್ತೇವೆ ಎಂದರಲ್ಲದೇ, ಹಿಂಸಾಚಾರ ಪ್ರಚೋದಿಸುವ ಮೂಲಕ ಕಾರ್ಯಕ್ರಮ ಅಡ್ಡಿಪಡಿಸಲು ಪಿತೂರಿಗಳು ನಡೆಯುತ್ತಿವೆ. ದಕ್ಷಿಣ ಬಂಗಾಳದ ಜಿಲ್ಲೆಗಳ ಲಕ್ಷಾಂತರ ಜನರು ಅಂತಹ ಪ್ರಯತ್ನಗಳನ್ನು ವಿಫಲಗೊಳಿಸುತ್ತಾರೆ ಎಂದು ಅವರು ಆರೋಪಿಸಿದರು.
ಶಾಹಿ ಬಿರಿಯಾನಿ ಆತಿಥ್ಯಕ್ಕೆ 30 ಲಕ್ಷ ಖರ್ಚು
ಇಂದಿನ ಸಮಾರಂಭದಲ್ಲಿ ಆತಿಥ್ಯ ವಹಿಸುವವರಿಗೆ ಹಾಗೂ ಪಾಲ್ಗೊಳ್ಳುವವರಿಗೆ ʻಶಾಹಿ ಬಿರಿಯಾನಿʼ ತಯಾರಿಸಲಾಗಿದ್ದು, ಅದಕ್ಕಾಗಿ 7 ಕ್ಯಾಟರಿಂಗ್‌ಗಳಿಗೆ ನಿರ್ವಹಣೆ ವಹಿಸಲಾಗಿದೆ. ಅತಿಥಿಗಳಿಗಾಗಿ ಸುಮಾರು 40,000 ಪ್ಯಾಕೆಟ್ ಬಿರಿಯಾನಿ, ಸ್ಥಳೀಯ ನಿವಾಸಿಗಳಿಗೆ 20,000 ಪ್ಯಾಕೆಟ್ ಬಿರಿಯಾನಿ ಸಿದ್ಧಪಡಿಸಲಾಗಿದೆ. ಅದಕ್ಕಾಗಿ 30 ಲಕ್ಷ ರೂ. ಖರ್ಚು ಮಾಡಲಾಗಿದೆ. ಇನ್ನೂ ಇಡೀ ಕಾರ್ಯಕ್ರಮಕ್ಕೆ ಅಂದಾಜು 60 ರಿಂದ 70 ಲಕ್ಷ ರೂ. ಖರ್ಚು ಮಾಡಲಾಗಿದೆ ಎಂದು ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.



